ಬೆಂಗಳೂರು: ತೀವ್ರ ವಿವಾದ ಮತ್ತು ಗೊಂದಲಗಳ ನಡುವೆಯೇ ರಾಜ್ಯ ಸರ್ಕಾರದ ಬಹು ನಿರೀಕ್ಷಿತ 'ಜಾತಿ ಗಣತಿ' ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸೋಮವಾರ ಪ್ರಾರಂಭಾಗಿದ್ದು, ಗಣತಿದಾರರು ಮನೆ ಮನೆಗೆ ತೆರಳಿ ದತ್ತಾಂಶ ಸಂಗ್ರಹಿಸಿದರು.
ರಾಜಧಾನಿ ಬೆಂಗಳೂರು ಹೊರತುಪಡಿಸಿ ಇಂದಿನಿಂದ ರಾಜ್ಯಾದ್ಯಾಂತ ಜಾತಿ ಗಣತಿ ಆರಂಭವಾಗಿದ್ದು, ಹಲವು ಕಡೆ ತಾಂತ್ರಿಕ ದೋಷ, ಸರ್ವರ್ ಸಮಸ್ಯೆ ಹಾಗೂ ಕಿಟ್ ಗಳ ಕೊರತೆ ಸೇರಿದಂತೆ ಮೊದಲ ದಿನ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾಗಿದೆ.
ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ತರಬೇತಿ ಮತ್ತು ಅಗತ್ಯ ಸಿದ್ಧತೆಗಳಿಂದಾಗಿ ಒಂದು ಅಥವಾ ಎರಡು ದಿನಗಳ ವಿಳಂಬವಾಗುವ ಜಾತಿ ಗಣತಿ ಆರಂಭಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಯಲ್ಲಿ 1.75 ಲಕ್ಷ ಗಣತಿದಾರರು, ಹೆಚ್ಚಾಗಿ ಸರ್ಕಾರಿ ಶಾಲಾ ಶಿಕ್ಷಕರು ಭಾಗವಹಿಸಿದ್ದು, ರಾಜ್ಯಾದ್ಯಂತ ಸುಮಾರು 2 ಕೋಟಿ ಮನೆಗಳಲ್ಲಿ ಸುಮಾರು 7 ಕೋಟಿ ಜನರ ದತ್ತಾಂಶ ಸಂಗ್ರಹಿಸಲಿದ್ದಾರೆ.
"ಸಮೀಕ್ಷೆ ನಡೆಯುತ್ತಿದೆ, ನಮಗೆ ವಿವಿಧ ಸ್ಥಳಗಳಿಂದ ವರದಿಗಳು ಬಂದಿವೆ" ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಆದಾಗ್ಯೂ, ಶಿವಮೊಗ್ಗ, ಹಾವೇರಿ, ಬಳ್ಳಾರಿ, ಚಿತ್ರದುರ್ಗ, ಕೊಡಗು ಜಿಲ್ಲೆಗಳು ಸೇರಿದಂತೆ ಹಲವಾರು ಸ್ಥಳಗಳಲ್ಲಿ ತಾಂತ್ರಿಕ ದೋಷ ಮತ್ತು ಸರ್ವರ್ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಕೆಲವು ಸ್ಥಳಗಳಲ್ಲಿ ಸಮೀಕ್ಷೆ ವಿಳಂಬವಾಗಿದೆ.
ಈ ಸ್ಥಳಗಳಲ್ಲಿ ಸಮಸ್ಯೆಗಳನ್ನು ಪರಿಹರಿಸಿದ ನಂತರ ಸಮೀಕ್ಷೆಗಳು ಮುಂದುವರೆದವು ಎಂದು ಮೂಲಗಳು ತಿಳಿಸಿವೆ.
ಹಲವಡೆ ಸಿಗದ ಕಿಟ್
ಬಿಇಓ ಕಚೇರಿ ಬಳಿ ಬಂದರೂ, ಸಮಯಕ್ಕೆ ಸರಿಯಾಗಿ ಕಿಟ್ ಸಿಕ್ಕಿಲ್ಲ. ಸಂಪೂರ್ಣವಾಗಿ ತರಬೇತಿಯೂ ಆಗಲಿಲ್ಲ ಅಂತಾ ಶಿಕ್ಷಕರು ಆರೋಪಿಸಿದರು.
ಮೊಬೈಲ್ ಆ್ಯಪ್ ಓಪನ್ ಆಗುತ್ತಿಲ್ಲ. ಎಲ್ಲಿ ಹೋಗಿ ಸರ್ವೆ ಮಾಡಬೇಕು ಎಂಬ ಬಗ್ಗೆ ಮಾಹಿತಿ ಕೊಟ್ಟಿಲ್ಲ ಎಂದು ಶಿಕ್ಷಕರು ಆರೋಪಿಸಿದರು.
ತಾಂತ್ರಿಕ ಸಮಸ್ಯೆ
ಚಿತ್ರದುರ್ಗದಲ್ಲಿ ಸಚಿವ ಡಿ. ಸುಧಾಕರ್ ಸಮೀಕ್ಷೆಗೆ ಚಾಲನೆ ನೀಡಿದರು. ಚಾಲನೆ ನೀಡಿದ ಬಳಿಕ ತಾಂತ್ರಿಕ ಸಮಸ್ಯೆ ಉಂಟಾಗಿ ಸಮೀಕ್ಷೆ ವಿಳಂಬವಾಯಿತು. ಇತ್ತ ಹುಬ್ಬಳ್ಳಿಯಲ್ಲೂ ಜಾತಿಗಣತಿಗೆ ಕೆಲ ತಾಂತ್ರಿಕ ಸಮಸ್ಯೆ ಎದುರಾಗಿದೆ. ಶಿಕ್ಷಕರಿಗೆ ಏರಿಯಾಗಳು, ಮನೆಗಳನ್ನ ಹಂಚಿಕೆ ಮಾಡುವುದು ಸೇರಿದಂತೆ ಹಲವು ಸಮಸ್ಯೆ ಎದುರಾಗಿದೆ. ಸಮಸ್ಯೆ ಬಗೆಹರಿಸಿ ಗಣತಿ ಆರಂಭಿಸುತ್ತೇವೆ ಅಂತಾ ಅಧಿಕಾರಿಗಳು ಹೇಳಿದ್ದಾರೆ.
ಅಧಿಕಾರಿಗಳ ಪ್ರಕಾರ, ಅಂದಾಜು 420 ಕೋಟಿ ರೂ. ವೆಚ್ಚದ ಸಮೀಕ್ಷೆಯನ್ನು 'ವೈಜ್ಞಾನಿಕವಾಗಿ' ನಡೆಸಲಾಗುವುದು, ಇದಕ್ಕಾಗಿ ಸಿದ್ಧಪಡಿಸಲಾದ 60 ಪ್ರಶ್ನೆಗಳ ಪ್ರಶ್ನಾವಳಿಯನ್ನು ಬಳಸಲಾಗುತ್ತಿದೆ. ಆಯೋಗವು ಡಿಸೆಂಬರ್ ವೇಳೆಗೆ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.