ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಚಾಲನೆಗೆ ಬಾನು ಮುಷ್ತಾಕ್ ಆಯ್ಕೆ ಮಾಡಿದ್ದಕ್ಕೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಎಲ್ಲಾ ಅಡೆತಡೆಗಳು ಮೀರಿ ನಿನ್ನೆ ದಸರಾ ಉತ್ಸವಕ್ಕೆ ವಿಧ್ಯುಕ್ತ ಚಾಲನೆಯೂ ಸಿಕ್ಕಿತ್ತು. ಆದರೆ ಇದೀಗ ಚಾಮುಂಡಿ ಬೆಟ್ಟದಲ್ಲಿ ಸೂತಕದ ಛಾಯೆ ಆವರಿಸಿದೆ. ಹೌದು... ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದ ಅರ್ಚಕ ರಾಜು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅರ್ಚಕ ರಾಜು ನಿಧನದ ಕಾರಣ ಸದ್ಯ ಚಾಮುಂಡೇಶ್ವರಿ ದೇಗುಲದ ಗರ್ಭಗುಡಿಗೆ ತೆರೆ ಎಳೆಯಲಾಗಿದೆ. ರಾತ್ರಿ ವರೆಗೂ ಉತ್ಸವಮೂರ್ತಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಇಂದು ರಾತ್ರಿವರೆಗೂ ಮೂಲ ವಿಗ್ರಹದ ದರ್ಶನ ಇರುವುದಿಲ್ಲ. ಅರ್ಚಕನ ನಿಧನದಿಂದಾಗಿ ಧಾರ್ಮಿಕ ಕಾರ್ಯಕ್ರಮಗಳಿಗೆ ತೊಡಕಾಗಿದೆ. ಆದಾಗ್ಯೂ, ದಸರಾ ಉತ್ಸವಕ್ಕೆ ಇದರಿಂದ ಯಾವುದೇ ಅಡಚಣೆ ಆಗುವುದಿಲ್ಲ. ಕೆಲವು ವಿಧಿವಿಧಾನಗಳ ನಂತರ ಗರ್ಭಗುಡಿ ಬಾಗಿಲು ತೆರೆಯಲಿದೆ. ನವರಾತ್ರಿ ಪೂಜೆಗಳು ಮಾಮೂಲಿಯಂತೆಯೇ ನಡೆಯಲಿವೆ ಎಂದು ದೇಗುಲದ ಮೂಲಗಳು ತಿಳಿಸಿವೆ.