ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭದಲ್ಲಿಯೇ ಹಲವು ಅಡೆತಡೆಗಳನ್ನು ಎದುರಿಸಿತು.
ಜಾತಿ ಗಣತಿ ಮುಂದೂಡಿಕೆ ಕೋರಿ ಹೈಕೋರ್ಟ್ ನಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಇದರಲ್ಲಿ ಸೇರಿತ್ತು. ಹೀಗಾಗಿ ಸೋಮವಾರ ಮೊದಲ ದಿನ ನಿಧಾನವಾಗಿ ಆರಂಭವಾಯಿತು.
ರಾಜ್ಯಾದ್ಯಂತ ಗಣತಿದಾರರು ಮೊಬೈಲ್ ಅಪ್ಲಿಕೇಶನ್‌ಗೆ ಲಾಗಿನ್ ಆಗುವಲ್ಲಿನ ಸಮಸ್ಯೆಗಳ ಎದುರಾದವು. ಸರ್ವರ್ ಸಮಸ್ಯೆ ಹಾಗೂ ಸರಿಯಾದ ತರಬೇತಿಯ ಕೊರತೆ ಸೇರಿದಂತೆ ತಾಂತ್ರಿಕ ದೋಷಗಳು ಕಂಡು ಬಂದವು.
ಕಲಬುರಗಿ, ಬಳ್ಳಾರಿ, ಹುಬ್ಬಳ್ಳಿ, ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ, ಶಿಕ್ಷಕರಾಗಿರುವ ಗಣತಿದಾರರು ತಾಂತ್ರಿಕ ದೋಷಗಳನ್ನು ಎದುರಿಸಿದರು ಹೀಗಾಗಿ ಸಮೀಕ್ಷೆ ವಿಳಂಬವಾಯಿತು. ರಾಜಧಾನಿಯನ್ನು ಐದು ನಿಗಮಗಳಾಗಿ ವಿಂಗಡಿಸುವುದರಿಂದ ಉಂಟಾಗುವ ಸಮಸ್ಯೆಗಳಿಂದಾಗಿ ಗಣತಿದಾರರಿಗೆ ತರಬೇತಿ ನೀಡದ ಕಾರಣ, ಬೆಂಗಳೂರಿನಲ್ಲಿ ಸಮೀಕ್ಷೆ ಆರಂಭವಾಗಿಲ್ಲ.
ಸಮೀಕ್ಷೆಯನ್ನು ಮುಂದೂಡಲಾಗುತ್ತಿದೆ ಎಂಬ ವದಂತಿಗಳನ್ನು ತಳ್ಳಿಹಾಕಿದ ಆಯೋಗದ ಅಧ್ಯಕ್ಷ ಮಧುಸೂದನ್ ಆರ್ ನಾಯಕ್, ಹೈಕೋರ್ಟ್ ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸಮೀಕ್ಷೆಯನ್ನು ಮುಂದೂಡುವ ಪ್ರಶ್ನೆಯೇ ಇಲ್ಲ.
ಆಯೋಗ ಕಾನೂನುಬದ್ಧ ಸಾಂವಿಧಾನಿಕ ಸಂಸ್ಥೆ. ಯಾರೂ ನಮ್ಮ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ. ಕೆಲವರು ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಮುಂದೂಡುವಂತೆ ಕೋರಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ಆಯೋಗವನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ.
ದೂರುದಾರರು ಮಧ್ಯಂತರ ಆದೇಶವನ್ನು ಕೋರಿದ್ದಾರೆ. ನಾವು ಯಾವುದೇ ಹೊಸ ಜಾತಿಯನ್ನು ಸೇರಿಸಿಲ್ಲ, ಅಥವಾ ಜಾತಿಗಳಿಗೆ ನಾವು ಪ್ರಾಮುಖ್ಯತೆ ನೀಡಿಲ್ಲ. ಅದಕ್ಕಾಗಿಯೇ ನ್ಯಾಯಾಲಯವು ಮಧ್ಯಪ್ರವೇಶಿಸುವುದಿಲ್ಲ ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದರು.
ನಾವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸುತ್ತಿದ್ದೇವೆ. ನಾವು ಜಾತಿ ಜನಗಣತಿಯನ್ನು ನಡೆಸುತ್ತಿಲ್ಲ. ಕೇಂದ್ರ ಸರ್ಕಾರದ ಜನಗಣತಿ ಇರುವುದರಿಂದ, ನಾವು ಜಾತಿ ಜನಗಣತಿಯನ್ನು ನಡೆಸುತ್ತಿದ್ದೇವೆ ಎಂಬ ತಪ್ಪು ಕಲ್ಪನೆಯನ್ನು ಕೆಲವರು ಸೃಷ್ಟಿಸುತ್ತಿದ್ದಾರೆ.
ಇದು ರಾಜಕೀಯ ವಿರೋಧ ಅಥವಾ ತಪ್ಪು ಕಲ್ಪನೆಯಿಂದಾಗಿರಬಹುದು. ಇದು ರಾಜ್ಯದ ಏಳು ಕೋಟಿ ಜನರಿಗೆ ಮಾಡಿದ ದ್ರೋಹ. ಇಂತಹ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲು ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಅವರು ಹೇಳಿದರು.