ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯವು ನಾಳೆ ಸೆಪ್ಟೆಂಬರ್ 25ರಂದು ಆರೋಪಿಗಳ ವಿರುದ್ಧದ ದೋಷಾರೋಪಣೆ ನಿಗದಿಪಡಿಸಲಿದೆ.
ಆರೋಪಿಗಳಾದ ದರ್ಶನ್, ಪವಿತ್ರಾಗೌಡ ಸೇರಿದಂತೆ 17 ಮಂದಿ ಆರೋಪಿಗಳು ನಾಳೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ. ಅದೇ ದಿನ ಆರೋಪಿಗಳ ವಿರುದ್ಧ ಸರ್ಕಾರದ ಪರ ಪೊಲೀಸರು ಹೊರಿಸಿರುವ ರೇಣುಕಾಸ್ವಾಮಿ ಅಪಹರಣ, ಕೊಲೆ, ಸುಲಿಗೆ, ಸಾಕ್ಷ್ಯನಾಶ ಸೇರಿದಂತೆ ಇತರ ದೋಷಾರೋಪಗಳ ನಿಗದಿಯಾಗಲಿದೆ.
ದರ್ಶನ್ ಗೆ ಮೂಲಸೌಕರ್ಯ ಆದೇಶ
ಮತ್ತೊಂದೆಡೆ ಜೈಲಿನಲ್ಲಿ ಕನಿಷ್ಠ ಮೂಲಸೌಲಭ್ಯ ನೀಡುತ್ತಿಲ್ಲ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ನಟ ದರ್ಶನ್ ಅವರ ಅರ್ಜಿ ವಿಚಾರಣೆಯ ಆದೇಶ ಕೂಡ ನಾಳೆಯೇ ಪ್ರಕಟವಾಗಲಿದೆ. ಹಾಸಿಗೆ ಹಾಗೂ ದಿಂಬು ನೀಡಬೇಕಾದ ಆದೇಶ ಪಾಲನೆಯಾಗುತ್ತಿಲ್ಲ ಎಂದು ದರ್ಶನ್ ಸಲ್ಲಿಸಿದ್ದ ಅರ್ಜಿಯ ಆದೇಶವನ್ನು ನಾಳೆ ಪ್ರಕಟಿಸಲಿದ್ದಾರೆ.
ಜೈಲಿನ ನಿಯಮ ಪ್ರಕಾರ ಆರೋಪಿಗಳಿಗೆ ಹಾಸಿಗೆ, ದಿಂಬು ಹಾಗೂ ಮೂಲ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶಿಸಿದ್ದರೂ ಜೈಲು ಅಧಿಕಾರಿಗಳು ನೀಡುತ್ತಿಲ್ಲ ಎಂದು ದರ್ಶನ್ ಅರ್ಜಿ ಸಲ್ಲಿಸಿದ್ದರು.
ದೋಷಾರೋಪಣೆಯಿಂದ ಕೈಬಿಡಲು ಕೋರಿದ್ದ ಅರ್ಜಿ ವಜಾ
ಆರೋಪಿಗಳಾದ ಪ್ರದೋಷ್ ಹಾಗೂ ದೀಪಕ್‌ನನ್ನು ದೋಷಾರೋಪಣೆಯಿಂದ ಕೈ ಬಿಡಲು ನ್ಯಾಯಾಲಯ ನಿರಾಕರಿಸಿದೆ. ಈ ಕುರಿತು ಇಬ್ಬರೂ ಆರೋಪಿಗಳು ಸಲ್ಲಿಸಿದ್ದ ಡಿಸ್ಚಾರ್ಜ್ ಅರ್ಜಿಗಳನ್ನು ವಜಾಗೊಳಿಸಿ 64 ನೇ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ದೋಷಾರೋಪ ಪಟ್ಟಿಯಲ್ಲಿರುವ ಆರೋಪಿಗಳು
ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದಾಗಿನಿಂದ ಈ ಕೆಳಗಿನ ಆರೋಪಿಗಳ ಹೆಸರುಗಳು ದೋಷಾರೋಪ ಪಟ್ಟಿಯಲ್ಲಿವೆ.
ಎ1 - ಪವಿತ್ರಾ ಗೌಡ
ಎ2 - ದರ್ಶನ್
ಎ 3 - ಪವನ್ - ಪವಿತ್ರಾ ಗೌಡ ಮನೆಗೆಲಸದವನು
ಎ 4 - ರಾಘವೇಂದ್ರ - ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ
ಎ 5 - ನಂದೀಶ್
ಎ 6 - ಜಗದೀಶ್ ಅಲಿಯಾಸ್ ಜಗ್ಗ
ಎ 7 - ಅನು - ದರ್ಶನ್ ಆಪ್ತ
ಎ 8 - ರವಿ - ಕ್ಯಾಬ್ ಚಾಲಕ
ಎ 9 - ಧನರಾಜು
ಎ 10 - ವಿನಯ್
ಎ 11 - ನಾಗರಾಜ್ - ದರ್ಶನ್ ಮ್ಯಾನೇಜರ್
ಎ 12 - ಲಕ್ಷ್ಮಣ್ - ದರ್ಶನ್ ಕಾರ್ ಡ್ರೈವರ್
ಎ 13 - ದೀಪಕ್
ಎ 14 - ಪ್ರದೋಶ್
ಎ 15 - ಕಾರ್ತಿಕ್
ಎ 16 - ಕೇಶವಮೂರ್ತಿ
ಎ 17 - ನಿಖಿಲ್ ಮೂರ್ತಿ