ಬೆಂಗಳೂರು: ಕನ್ನಡ ಸಾಹಿತ್ಯ ಲೋಕದ ಹಿರಿಯ ಚೇತನ, ಕಾದಂಬರಿ ಸಾರ್ವಭೌಮ ಡಾ. ಎಸ್.ಎಲ್. ಭೈರಪ್ಪನವರು ನಮ್ಮನ್ನು ಅಗಲಿದ್ದಾರೆ. ಕಾದಂಬರಿಗಳ ಮೂಲಕವೇ ಬದುಕಿನ ಸೂಕ್ಷ್ಮಗಳನ್ನು, ಭಾರತೀಯ ಸಂಸ್ಕೃತಿಯ ಮಹತ್ವವನ್ನು ನಮಗೆಲ್ಲ ತಿಳಿಸಿಕೊಟ್ಟ ಮಹಾನ್ ಚೇತನ ಭೈರಪ್ಪನವರು. ತಮ್ಮ ಮಾಂತ್ರಿಕವಾದಂತಹ ಅಕ್ಷರಗಳ ಮೂಲಕ ಕನ್ನಡ ಭಾಷಾ ಸಿರಿವಂತಿಕೆಗೆ ಇನ್ನಷ್ಟು ಮೆರುಗು ನೀಡಿದ್ದು ಗಮನಾರ್ಹ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಎಸ್.ಎಲ್. ಭೈರಪ್ಪ ಅವರ ಕಾದಂಬರಿಗಳು, ಬರಹಗಳು ನನಗೆ ಕೇವಲ ಕಥೆಗಳ ಸಂಗ್ರಹವಲ್ಲ. ಅವು ನನ್ನ ಚಿಂತನೆಯನ್ನು ರೂಪಿಸಿದ ದಾರ್ಶನಿಕ ಗ್ರಂಥಗಳು. ಅವುಗಳ ಮೂಲಕ ನಾನು ನಮ್ಮ ಸಂಸ್ಕೃತಿಯ ಶ್ರೀಮಂತಿಕೆ, ಇತಿಹಾಸದ ಪಾಠಗಳು ಮತ್ತು ಒಬ್ಬ ಯುವ ನಾಯಕನಿಗೆ ಇರಬೇಕಾದ ವೈಚಾರಿಕ ಮತ್ತು ನೈತಿಕ ಸ್ಪಷ್ಟತೆಯನ್ನು ಕಲಿತೆ. ರಾಷ್ಟ್ರ ನಿರ್ಮಾಣದ ಹಾದಿಯಲ್ಲಿ ನಾನು ಇವುಗಳನ್ನು ನನ್ನ ಜೀವನದ ಅವಿಭಾಜ್ಯ ಭಾಗವನ್ನಾಗಿ ಸ್ವೀಕರಿಸಿದ್ದೇನೆ ಎಂದರು. ಸಾಮಾನ್ಯ ಓದುಗರಿಗೂ ತಮ್ಮ ಕಾದಂಬರಿಗಳ ಮೂಲಕ ವಿಶೇಷ ಅನುಭೂತಿಯನ್ನು ಒದಗಿಸಿರುವುದು ಭೈರಪ್ಪರವರ ಹೆಗ್ಗಳಿಕೆ. ರಾಷ್ಟ್ರ ನಿರ್ಮಾಣ, ಸನಾತನ ಸಂಸ್ಕೃತಿಯ ಕುರಿತಾಗಿ ನನ್ನಲ್ಲಿ ಓದುವ, ತಿಳಿದುಕೊಳ್ಳುವ ಹಂಬಲ ಹುಟ್ಟಿಸಿದ್ದು ಅವರ ಬರಹಗಳು. ಅವರ ಕಾದಂಬರಿಗಳನ್ನು ಓದುವಂತೆ ನನ್ನ ತಂದೆಯವರು ಪ್ರೇರೇಪಿಸುತ್ತಿದ್ದಿದ್ದು ಯಾಕೆ ಅಂತ ಅವುಗಳನ್ನು ಓದಿದಾಗಲೇ ನನಗೆ ಅರ್ಥವಾಗಿದ್ದು ಎಂದು ಸೂರ್ಯ ಹೇಳಿದರು.
ಭೈರಪ್ಪರ ಬಾಲ್ಯ, ಕೌಟುಂಬಿಕ ಸಂಕಷ್ಟಗಳನ್ನು ಎದುರಿಸಿದ ಪರಿ, ತಾವು ನಂಬಿದ ಮೌಲ್ಯಗಳನ್ನು ಕಾಪಿಟ್ಟುಕೊಂಡು ಬರಹಗಳಲ್ಲಿ ಮೂಡಿಸಿದ ಶೈಲಿ ನಿಜಕ್ಕೂ ಸೋಜಿಗ. ಅವರ ಜೀವನವೇ ಇತರರಿಗೆ ಪ್ರೇರಣೆ, ಸ್ಪೂರ್ತಿ ಒದಗಿಸುವಂತಹದ್ದು. ಅವರ ಪ್ರತಿಯೊಂದು ಕಾದಂಬರಿಯಲ್ಲಿಯೂ ಭಾಷೆಯ ಸೊಗಸು, ಪಾತ್ರ ಪರಿಕಲ್ಪನೆ ಮತ್ತು ಅಪರೂಪದ ಕಥನ ಶೈಲಿಯನ್ನು ಕಾಣಬಹುದಾಗಿದೆ. ಓದುಗರನ್ನು ಅತ್ಯಾಪ್ತತೆಯಿಂದ ಆವರಿಸುವ ಪರಿ, ಭಾವುಕತೆ, ತಲ್ಲೀನತೆ, ಚಿಂತನೆಗೆ ಒಡ್ಡುವ ಮನೋಜ್ಞತೆಯನ್ನು ವಿಪರೀತ ಜೀವನಪ್ರೀತಿ ಇರುವ ಲೇಖಕರಿಂದ ಮಾತ್ರ ನಿರೀಕ್ಷಿಸಲು ಸಾಧ್ಯ. ಈ ವಿಷಯಗಳಲ್ಲಿ ಭೈರಪ್ಪನವರಿಗೆ ಭೈರಪ್ಪನವರೇ ಸಾಟಿಯೆಂದರೆ ತಪ್ಪಲ್ಲ.
ಮನುಷ್ಯನ ಚಿಂತನೆಗೆ ಪ್ರೇರಣೆ ನೀಡುವ ಆಧ್ಯಾತ್ಮ, ಮನಃ ಶಾಸ್ತ್ರ, ಮತ್ತು ತರ್ಕ ಶಾಸ್ತ್ರ, ಸಮಾಜ ಶಾಸ್ತ್ರ, ನ್ಯಾಯಮೀಮಾಂಸೆ, ಸೌಂದರ್ಯ ಮೀಮಾಂಸೆ, ಇತಿಹಾಸ, ವಿಜ್ಞಾನ, ರಾಜಕೀಯ ಘಟನೆಗಳು, ವೇದ ಪುರಾಣಗಳ ಸಾರ, ಇನ್ನೂ ಅನೇಕ ವಿಷಯಗಳನ್ನು ಒಳಗೊಂಡಂತೆ ಓದುಗನನ್ನು ಆವರಿಸಿಕೊಳ್ಳುವ ಡಾ. ಎಸ್. ಎಲ್. ಭೈರಪ್ಪನವರ ಪದಬಳಕೆ ವಿನೂತನ ಅನುಭೂತಿ ಒದಗಿಸುವಂತಹದ್ದು. ಭೂಮಿಯ ಮೇಲಿನ ಅದೆಷ್ಟೋ ನದಿಗಳು ಸಾಗರ ಸೇರುವಂತೆ, ನನ್ನೊಳಗಿನ ಯುವ ನಾಯಕತ್ವದ ಕನಸುಗಳಿಗೆ ದಾರಿದೀಪವಾಗಿದ್ದು ಡಾ. ಎಸ್.ಎಲ್. ಭೈರಪ್ಪ ಅವರ ಕಾದಂಬರಿಗಳು. ಅವರ ಕೃತಿಗಳು ಕೇವಲ ಕಥೆಗಳಲ್ಲ, ಅವು ಭಾರತದ ಆತ್ಮವನ್ನು, ಅದರ ಇತಿಹಾಸ ಮತ್ತು ಸನಾತನ ಸಂಸ್ಕೃತಿಯನ್ನು ಆಳವಾಗಿ ಅರಿತುಕೊಳ್ಳುವ ಮಾರ್ಗದರ್ಶಿಗಳು. ನನ್ನ ರಾಷ್ಟ್ರ ನಿರ್ಮಾಣದ ಆಶಯಗಳಿಗೆ ಅವರು ಹೇಗೆ ಪ್ರೇರಣೆ ನೀಡಿದ್ದಾರೆ ಎಂಬುದನ್ನು ಇಲ್ಲಿ ವಿವರಿಸಲು ಬಯಸುತ್ತೇನೆ.
ಸನಾತನ ಸಂಸ್ಕೃತಿ ಮತ್ತು ಇತಿಹಾಸದ ಅನಾವರಣ
ಭೈರಪ್ಪ ಅವರ ಕಾದಂಬರಿಗಳಲ್ಲಿ, ಸನಾತನ ಸಂಸ್ಕೃತಿಯ ಮೂಲ ತತ್ವಗಳು ಮತ್ತು ಇತಿಹಾಸದ ಘಟನೆಗಳು ಕೇವಲ ಪಾಠದಂತೆ ಇರುವುದಿಲ್ಲ, ಬದಲಾಗಿ ಜೀವಂತವಾಗಿ ನಮ್ಮ ಕಣ್ಮುಂದೆ ನಿಲ್ಲುತ್ತವೆ. 'ಪರ್ವ'ದಂತಹ ಕೃತಿಗಳು ಮಹಾಭಾರತದಂತಹ ಮಹಾನ್ ಗ್ರಂಥಗಳ ಸತ್ಯವನ್ನು ವೈಜ್ಞಾನಿಕ ಮತ್ತು ಮಾನವೀಯ ದೃಷ್ಟಿಕೋನದಿಂದ ಅನಾವರಣಗೊಳಿಸುತ್ತವೆ. ಇದರ ಮೂಲಕ ನಾನು ಕಲಿಯುವುದು, ಧರ್ಮ ಮತ್ತು ಕರ್ತವ್ಯಗಳ ಬಗ್ಗೆ ಕೇವಲ ಸಿದ್ಧಾಂತವಲ್ಲ, ಬದಲಾಗಿ ಅವುಗಳ ವಾಸ್ತವಿಕ ಅನುಷ್ಠಾನ ಮತ್ತು ಪರಿಣಾಮಗಳ ಕುರಿತು. 'ಮಂದ್ರ' ಕಾದಂಬರಿಯು ಭಾರತೀಯ ಸಂಗೀತದ ಬೇರುಗಳನ್ನು ಪರಿಚಯಿಸುತ್ತಾ, ನಮ್ಮ ಸಂಸ್ಕೃತಿಯು ಕೇವಲ ಆಧ್ಯಾತ್ಮಿಕ ಮಾತ್ರವಲ್ಲ, ಕಲಾತ್ಮಕವಾಗಿ ಮತ್ತು ವೈಚಾರಿಕವಾಗಿಯೂ ಶ್ರೀಮಂತವಾಗಿದೆ ಎಂದು ತೋರಿಸುತ್ತದೆ. ರಾಷ್ಟ್ರವನ್ನು ನಿರ್ಮಿಸುವಾಗ ಅದರ ಬೇರುಗಳಾದ ಸಂಸ್ಕೃತಿಯನ್ನು ಗೌರವಿಸುವುದು ಮತ್ತು ಉಳಿಸಿಕೊಳ್ಳುವುದು ಎಷ್ಟು ಮುಖ್ಯ ಎಂದು ನಾನು ಅರಿತೆ.
ವಾಸ್ತವಿಕತೆ ಮತ್ತು ವೈಚಾರಿಕತೆ
ಭೈರಪ್ಪ ಅವರ ಶಕ್ತಿ ಇರುವುದು ಕೇವಲ ಇತಿಹಾಸವನ್ನು ಬರೆಯುವುದರಲ್ಲಿ ಅಲ್ಲ, ಬದಲಾಗಿ ಅದನ್ನು ವರ್ತಮಾನದೊಂದಿಗೆ ತಳುಕು ಹಾಕಿ ವಿಶ್ಲೇಷಿಸುವುದರಲ್ಲಿ. 'ಆವರಣ'ದಂತಹ ಕಾದಂಬರಿಗಳು ಭಾರತದ ಇತಿಹಾಸವನ್ನು ವಿಕೃತಗೊಳಿಸುವ ಪ್ರಯತ್ನಗಳನ್ನು ನಿರ್ಭೀತಿಯಿಂದ ಪ್ರಶ್ನಿಸುತ್ತವೆ. ಇಂತಹ ಕೃತಿಗಳು ನನ್ನಲ್ಲಿ ಒಂದು ಪ್ರಶ್ನಾರ್ಥಕ ಮನೋಭಾವವನ್ನು ಬೆಳೆಸಿದವು: ಸಮಾಜದಲ್ಲಿ ಏನನ್ನು ಒಪ್ಪಿಕೊಳ್ಳಬೇಕು ಮತ್ತು ಏನನ್ನು ಪ್ರಶ್ನಿಸಬೇಕು ಎಂಬುದನ್ನು ತರ್ಕಬದ್ಧವಾಗಿ ವಿಶ್ಲೇಷಿಸುವ ಸಾಮರ್ಥ್ಯ. ರಾಷ್ಟ್ರ ನಿರ್ಮಾಣದಲ್ಲಿ ಈ ವೈಚಾರಿಕ ಸ್ಪಷ್ಟತೆ ಅತ್ಯಂತ ಅವಶ್ಯಕ. ಒಬ್ಬ ನಾಯಕನು ಸತ್ಯ ಮತ್ತು ಅಸತ್ಯದ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸಮರ್ಥನಾದಾಗ ಮಾತ್ರ ಸಮರ್ಥ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ.
ನೈತಿಕ ಹೊಣೆಗಾರಿಕೆ ಮತ್ತು ಧರ್ಮ
ಭೈರಪ್ಪ ಅವರ ಕೃತಿಗಳ ಪಾತ್ರಗಳು ಯಾವಾಗಲೂ ತಮ್ಮ ಕರ್ತವ್ಯ ಮತ್ತು ಧರ್ಮದ ನಡುವಿನ ಸಂಘರ್ಷವನ್ನು ಎದುರಿಸುತ್ತವೆ. 'ಸಾರ್ಥ' ಕಾದಂಬರಿಯು ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಯಾಣವನ್ನು ಆಳವಾಗಿ ವಿವರಿಸುತ್ತದೆ. ಇದು ನನಗೆ ಸ್ವಯಂ ಪರಿಶೋಧನೆ ಮತ್ತು ಆಂತರಿಕ ಶಕ್ತಿಯ ಮಹತ್ವವನ್ನು ತಿಳಿಸಿಕೊಟ್ಟಿತು. ರಾಷ್ಟ್ರ ನಿರ್ಮಾಣವು ಕೇವಲ ಭೌತಿಕ ಕಟ್ಟಡಗಳನ್ನು ನಿರ್ಮಿಸುವುದಲ್ಲ, ಅದು ನೈತಿಕ ಮತ್ತು ಆಧ್ಯಾತ್ಮಿಕವಾಗಿ ಸದೃಢ ಸಮಾಜವನ್ನು ರೂಪಿಸುವುದು. ಭೈರಪ್ಪರ ಕೃತಿಗಳು ನನ್ನಲ್ಲಿ ನಾಯಕನಿಗೆ ಇರಬೇಕಾದ ನೈತಿಕ ಹೊಣೆಗಾರಿಕೆ ಮತ್ತು ಸತ್ಯನಿಷ್ಠೆಯನ್ನು ಆಳವಾಗಿ ಬೇರೂರಿವೆ. ಒಬ್ಬ ನಾಯಕನಿಗೆ ಹಣ, ಅಧಿಕಾರಕ್ಕಿಂತ ಹೆಚ್ಚಿನದಾಗಿ, ತನ್ನ ಜನರ ಬಗ್ಗೆ ಮತ್ತು ತನ್ನ ಕಾರ್ಯಗಳ ಬಗ್ಗೆ ಆಳವಾದ ಜವಾಬ್ದಾರಿ ಇರಬೇಕು ಎಂಬುದು ನನ್ನ ಅರಿವಿಗೆ ಬಂದಿತು.
ಸಧೃಢ ರಾಷ್ಟ್ರನಿರ್ಮಾಣಕ್ಕೆ ಕೇವಲ ರಸ್ತೆಗಳ ನಿರ್ಮಾಣ, ಮೂಲಭೂತ ಸೌಕರ್ಯ ಅಭಿವೃದ್ಧಿ, ಹಣಕಾಸು, ವಹಿವಾಟು ಇವಷ್ಟೇ ಮಾನದಂಡಗಳಲ್ಲ. ಇದರೊಂದಿಗೆ ನೈತಿಕತೆ, ಧಾರ್ಮಿಕ ನೆಲೆಗಟ್ಟು, ವೈಚಾರಿಕ ಪ್ರಜ್ನೆ,ಶಿಸ್ತು, ಮೌಲ್ಯಗಳೂ ಕೂಡ ಅವಶ್ಯಕ. ಭೈರಪ್ಪ ರವರ ಬರಹಗಳು ಇವೆಲ್ಲವುಗಳನ್ನೂ ಒದಗಿಸುತ್ತವೆ. ಅವರು ನನ್ನ ಮೇಲೆ ಬೀರಿರುವ ಪ್ರಭಾವ ಅಪಾರ ಎಂದು ಸೂರ್ಯ ಹೇಳಿದ್ದಾರೆ.