ಹುಬ್ಬಳ್ಳಿ: ಕನ್ನಡದ ಯೂಟ್ಯೂಬರ್ ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ (Mukaleppa) ಮತ್ತು ಗಾಯತ್ರಿ ನಡುವಿನ ಲವ್ ಮ್ಯಾರೇಜ್ ಗೆ ಅನ್ಯಧರ್ಮದ ಅಪಸ್ವರ ಎದ್ದಿದೆ. ಇವರಿಬ್ಬರೂ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸಬ್‌ರಿಜಿಸ್ಟರ್ ಕಚೇರಿಯಲ್ಲಿ ಜೂನ್ 5ರಂದು ರಿಜಿಸ್ಟರ್ ಮದುವೆಯಾಗಿದ್ದರು. ಇದು ತಡವಾಗಿ ಬೆಳಕಿಗೆ ಬಂದಿದ್ದು, ಈ ಮದುವೆಗೆ ಯುವತಿ ಗಾಯತ್ರಿಯ ತಾಯಿ ಆಕ್ಷೇಪ ವ್ಯಕ್ತಪಡಿಸಿದ್ದು ತೀವ್ರ ಸುದ್ದಿಯಾಗಿತ್ತು.
ಪೊಲೀಸರು ವಿಚಾರಣೆ ನಡೆಸಿದ್ದ ವೇಳೆ ಯುವತಿ ಗಾಯತ್ರಿ, ಮುಕಳೆಪ್ಪ ನನ್ನ ಕಿಡ್ನ್ಯಾಪ್ ಮಾಡಿಲ್ಲ. ಸ್ವಯಿಚ್ಛೆಯಿಂದ ಮದುವೆಯಾಗಿದ್ದೇನೆ ಎಂದು ಹೇಳಿದ್ದಳು.
ಈಗ ಮುಕಳೆಪ್ಪ ಸ್ಪಷ್ಟನೆ ನೀಡಿದ್ದು. ‘ನಾನು ಯಾವುದೇ ಲವ್ ಜಿಹಾದ್ ಮಾಡಿಲ್ಲ. ನನ್ನ ಧರ್ಮವನ್ನು ನಾನು ಪಾಲಿಸುತ್ತೇನೆ. ನನ್ನ ಪತ್ನಿ ಆಕೆಯ ಧರ್ಮವನ್ನು ಕೊನೆಯವರೆಗೂ ಪಾಲಿಸಿಕೊಂಡು ಹೋಗುತ್ತಾಳೆ, ಅವಳನ್ನು ನಾನು ಮತಾಂತರ ಮಾಡಿಲ್ಲ, ನಾನು ಈ ಕರ್ನಾಟಕದಲ್ಲಿ ಹುಟ್ಟಿದ್ದು ನಾನು ಕೂಡ ಹಿಂದು ಎಂದು ಖುಷಿಯಿಂದ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.
ಇನ್ನು ಮುಕಳೆಪ್ಪ ಪತ್ನಿ ಗಾಯತ್ರಿ ಕೂಡ ನಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವುದನ್ನು ನಂಬಬೇಡಿ, ನನಗೆ ಯಾರೂ ಮತಾಂತರ ಮಾಡಿ ಬಲವಂತವಾಗಿ ಮದುವೆ ಮಾಡಿಸಿಲ್ಲ, ನಾವು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ಪರಸ್ಪರ ಒಪ್ಪಿ ಮದುವೆಯಾಗಿದ್ದೇವೆ ಎಂದು ವಿಡಿಯೊ ಮೂಲಕ ಹೇಳಿದ್ದಾರೆ.