T20 World Cup 2026: ಆಸ್ಟ್ರೇಲಿಯಾ ವಿರುದ್ಧ ಜಿಂಬಾಬ್ವೆಗೆ ಜಯ; 19 ವರ್ಷಗಳಲ್ಲಿ ಮೊದಲ ಬಾರಿಗೆ ಕಾಂಗರೂಗಳನ್ನು ಸೋಲಿಸಿದ ಚೆವ್ರಾನ್‌ಗಳು!
ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 2026ರ T20 ವಿಶ್ವಕಪ್ ಪಂದ್ಯದಲ್ಲಿ ಜಿಂಬಾಬ್ವೆ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 23 ರನ್‌ಗಳಿಂದ ಸೋಲಿಸಿದೆ. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. ಮ್ಯಾಟ್ ರೆನ್‌ಶಾ ಅವರ ಪ್ರಯತ್ನದ ಹೊರತಾಗಿಯೂ, ಜಿಂಬಾಬ್ವೆ 169ರ ಸ್ಪರ್ಧಾತ್ಮಕ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಓಮನ್ ವಿರುದ್ಧದ ಅವರ ಆರಂಭಿಕ ಸುತ್ತಿನ ಕ್ಲಿನಿಕಲ್ ಪ್ರದರ್ಶನವು ಯಾವುದೇ ಫ್ಲೂಕ್ ಅಲ್ಲ ಎಂದು ಸಾಬೀತುಪಡಿಸಿತು. ಈ ಮೊತ್ತವನ್ನು ಡಿಫೆಂಡ್ ಮಾಡಿಕೊಂಡ ಜಿಂಬಾಬ್ವೆ ಇಡೀ ಆಸ್ಟ್ರೇಲಿಯಾದ ಬ್ಯಾಟಿಂಗ್ ಘಟಕವನ್ನು ಕೇವಲ 146 ರನ್‌ಗಳಿಗೆ ಔಟ್ ಮಾಡಿತು.
ಈ ಫಲಿತಾಂಶದಿಂದಾಗಿ ಸೂಪರ್ 8 ನಲ್ಲಿ ಸ್ಥಾನ ಪಡೆಯುವ ಆಸ್ಟ್ರೇಲಿಯಾದ ಕನಸಿಗೆ ತಣ್ಣೀರೆರೆಚಿದಂತಾಗಿದೆ. ಜಿಂಬಾಬ್ವೆ ವಿರುದ್ಧದ ಸೋಲಿನೊಂದಿಗೆ ಆಸ್ಟ್ರೇಲಿಯಾ ಗ್ರೂಪ್ ಬಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಇಳಿದಿದೆ. 19 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಮುಖ ಜಾಗತಿಕ ಪಂದ್ಯಾವಳಿಯಲ್ಲಿ ಚೆವ್ರಾನ್‌ಗಳು ಕಾಂಗರೂಗಳನ್ನು ಸೋಲಿಸಿದ್ದಾರೆ.
ಟಾಸ್ ಗೆದ್ದ ಆಸ್ಟ್ರೇಲಿಯಾದ ಹಂಗಾಮಿ ನಾಯಕ ಟ್ರಾವಿಸ್ ಹೆಡ್ ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಆರಂಭಿಸಿದ ಜಿಂಬಾಬ್ವೆಯ ಆರಂಭಿಕ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಭದ್ರವಾದ ಬುನಾದಿ ಹಾಕಿದರು. ಬ್ರಿಯಾನ್ ಬೆನೆಟ್ ಅವರು 56 ಎಸೆತಗಳಲ್ಲಿ ಅಜೇಯ 64 ರನ್ ಗಳಿಸುವ ಮೂಲಕ ತಮ್ಮ ವೃತ್ತಿಜೀವನದ ನಿರ್ಣಾಯಕ ಇನಿಂಗ್ಸ್ ಅನ್ನು ಆಡಿದರು. ಅವರಿಗೆ ತಡಿವಾನಾಶೆ ಮಾರುಮಣಿ, ರಿಯಾನ್ ಬರ್ಲ್ ಮತ್ತು ಸಿಕಂದರ್ ರಾಜಾ ಬೆಂಬಲ ನೀಡಿದರು.
ಕೊಲಂಬೊದ ಪರಿಸ್ಥಿತಿಯಲ್ಲಿ ಕಾಲಿನ ಸೆಳೆತದಿಂದ ಹೋರಾಡುತ್ತಿದ್ದರೂ, ನಾಯಕ ಸಿಕಂದರ್ ರಾಜಾ 13 ಎಸೆತಗಳಲ್ಲಿ 25 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರು. ತಡಿವಾನಾಶೆ ಮಾರುಮಣಿ ಅವರ 35 ಮತ್ತು ರಿಯಾನ್ ಬರ್ಲ್ ಅವರ 35 ರನ್‌ಗಳ ನೆರವಿನಿಂದ ಜಿಂಬಾಬ್ವೆ 2 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಿತು.
170 ರನ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯದ ಮೊದಲ ಐದು ಓವರ್‌ಗಳಲ್ಲಿಯೇ ಕೇವಲ 29 ರನ್‌ಗಳಿಗೆ 4 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಜರಬಾನಿ ಜೋಶ್ ಇಂಗ್ಲಿಸ್ ಅವರನ್ನು ಬೇಗನೆ ಔಟ್ ಮಾಡಿದರೆ, ಬ್ರಾಡ್ ಇವಾನ್ಸ್ ಅವರು ಕ್ಯಾಮರೂನ್ ಗ್ರೀನ್ ಮತ್ತು ಅಪಾಯಕಾರಿ ಟ್ರಾವಿಸ್ ಹೆಡ್ ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾಗೆ ದುಃಸ್ವಪ್ನವಾದರು. ಟಿಮ್ ಡೇವಿಡ್ ಕೂಡ ಮುಜರಾಬಾನಿ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
ಮಧ್ಯಮ ಓವರ್‌ಗಳಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ (31) ಮತ್ತು ಮ್ಯಾಟ್ ರೆನ್‌ಶಾ (63) ಆಸ್ಟ್ರೇಲಿಯಾದ ಗೆಲುವಿನ ಆಸೆಯನ್ನು ಜೀವಂತವಾಗಿಟ್ಟರು. ಆದಾಗ್ಯೂ, 15ನೇ ಓವರ್‌ನಲ್ಲಿ ಮ್ಯಾಕ್ಸ್‌ವೆಲ್ ಅವರನ್ನು ರಿಯಾನ್ ಬರ್ಲ್ ಕ್ಲೀನ್ ಬೌಲ್ಡ್ ಮಾಡಿದಾಗ ಮೊಮೆಂಟಮ್ ಜಿಂಬಾಬ್ವೆ ಕರೆಗೆ ತಿರುಗಿತು.
18 ಮತ್ತು 19ನೇ ಓವರ್‌ಗಳಲ್ಲಿಯೇ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಾಯಿತು. ನಂತರ ಮುಜರಾಬಾನಿ ಮ್ಯಾಟ್ ರೆನ್‌ಶಾ ಅವರ ವಿಕೆಟ್ ಪಡೆದರು. ನಂತರ ತಮ್ಮ 100ನೇ T20I ವಿಕೆಟ್‌ಗಾಗಿ ಆಡಮ್ ಝಂಪಾ ಅವರ ವಿಕೆಟ್ ಕಿತ್ತರು. ವೇಗಿ ಪಂದ್ಯವನ್ನು ಕೇವಲ 17 ರನ್ ನೀಡುವ ಮೂಲಕ 4 ವಿಕೆಟ್ ಕಬಳಿಸಿ ವೃತ್ತಿಜೀವನದ ಅತ್ಯುತ್ತಮ ಅಂಕಿಅಂಶಗಳೊಂದಿಗೆ ಕೊನೆಗೊಳಿಸಿದರು.
ಕೊನೆಯ ನಾಲ್ಕು ಎಸೆತಗಳಲ್ಲಿ ಆಸ್ಟ್ರೇಲಿಯಾ 24 ರನ್ ಗಳಿಸಬೇಕಿದ್ದಾಗ ಮ್ಯಾಥ್ಯೂ ಕುಹ್ನೆಮನ್ ರನೌಟ್ ಆಗುವ ಮೂಲಕ ಅಂತಿಮ ವಿಕೆಟ್ ಪತನಗೊಂಡಿತು. ಅಂತಿಮವಾಗಿ ಜಿಂಬಾಬ್ವೆ ಆಸ್ಟ್ರೇಲಿಯಾ ವಿರುದ್ಧ 23 ರನ್‌ಗಳ ಗೆಲುವು ಸಾಧಿಸಿತು.
