ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂದು ಆರೋಪಿಸಿ ಖಾಸಗಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕನೊಬ್ಬನ ಮೇಲೆ ಕೋಣನಕುಂಟೆ ಪೊಲೀಸ್ ಠಾಣೆಗೆ ಆತನ ಸ್ನೇಹಿತೆ ದೂರು ನೀಡಿದ್ದಾರೆ.
ಕೇರಳ ಮೂಲದ ಅಬೇ ವಿ ಮ್ಯಾಥ್ಯು ವಿರುದ್ಧ ಆರೋಪ ಕೇಳಿ ಬಂದಿದೆ. ಈತ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕನಾಗಿ ಹಾಗೂ ಕ್ರಿಕೆಟ್ ತರಬೇತುದಾರನಾಗಿದ್ದಾನೆಂದು ತಿಳಿದುಬಂದಿದೆ.
ಸಂತ್ರಸ್ತೆ ರಾಜ್ಯ ಮಹಿಳಾ ಆಯೋಗಕ್ಕೆ ಸೆ.22ರಂದು ದೂರು ನೀಡಿದ್ದಾರೆ, ಆ ದೂರಿನ ಪ್ರತಿಯನ್ನು ನೈಋತ್ಯ ವಿಭಾಗದ ಡಿಸಿಪಿ ಅವರಿಗೆ ಆಯೋಗದ ಅಧಿಕಾರಿಗಳು ಕಳುಹಿಸಿ, ತನಿಖೆ ನಡೆಸುವಂತೆ ಸೂಚಿಸಿದ್ದರು.
ಆಯೋಗದ ಸೂಚನೆ ಮೇರೆಗೆ ಸಂತ್ರಸ್ತೆಯನ್ನು ಸಂಪರ್ಕಿಸಿದ ಕೋಣನಕುಂಟೆ ಠಾಣೆ ಪೊಲೀಸರು, ಆಕೆ ನೀಡಿದ ಎಫ್ಐಆರ್ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
10 ವರ್ಷದ ಮಗಳ ದಾಖಲಾತಿಗಾಗಿ ಶಾಲೆಗೆ ಹೋಗಿದ್ದಾಗ ಆರೋಪಿಯನ್ನು ಭೇಟಿಯಾಗಿದ್ದೆ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಬಳಿಕ ಆರೋಪಿ ಆರ್ಥಿಕ ಸಹಾಯ ಮಾಡುವ ಮೂಲಕ ವಿಶ್ವಾಸ ಗಳಿಸಿದ್ದ. ಬಳಿಕ ಇಬ್ಬರೂ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದೆವು. ಈ ವೇಳೆ ಮದುವೆಯಾಗುವುದಾಗಿ ನಂಬಿಸಿದ್ದ ಮ್ಯಾಥ್ಯೂ ದೈಹಿಕ ಸಂಬಂಧ ಬೆಳೆಸಿದ್ದ. ಜನವರಿ ತಿಂಗಳಿನಲ್ಲಿ ಗರ್ಭಪಾತವನ್ನೂ ಮಾಡಿಸಿದ್ದ. ಮ್ಯಾಧ್ಯೂ ತಾಯಿ ತಮ್ಮ ಮಗನೊಂದಿಗೆ ಇರದಂತೆ ಹೇಳುತ್ತಿದ್ದರು. ಈ ನಡುವೆ ಮತ್ತೊಮ್ಮೆ ಗರ್ಭಿಣಿಯಾಗಾದ ಮ್ಯಾಥ್ಯೂ ಮದುವೆಯಾಗಲು ನಿರಾಕರಿಸಿದ. ಪೋಷಕರೊಂದಿಗೆ ಮನೆಬಿಟ್ಟು ಹೊರಟು ಹೋದ ಎಂದು ಮಹಿಳೆ ಹೇಳಿದ್ದಾರೆ.
ತನ್ನ ವಿರುದ್ಧ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಮ್ಯಾಥ್ಯೂ, ಮಹಿಳೆಗೆ ನಾನು ಮೋಸ ಮಾಡಿಲ್ಲ. ಅವರ ಜತೆಗೆ ಬದುಕುತ್ತೇನೆ. ಒಂದು ವರ್ಷದಿಂದ ಒಂದೇ ಮನೆಯಲ್ಲಿ ವಾಸವಿದ್ದೇವೆ. ಜಮೀನು ವಿಚಾರಕ್ಕೆ ನಾನು ಕೇರಳಕ್ಕೆ ಬಂದಿದ್ದೇನೆ. ಆದಷ್ಟು ಬೇಗ ಬೆಂಗಳೂರಿಗೆ ಬಂದು ಪೊಲೀಸರಿಗೆ ಮಾಹಿತಿ ನೀಡುತ್ತೇನೆಂದು ಹೇಳಿದ್ದಾರೆ.
ಕೇರಳದಲ್ಲಿದ್ದೇನೆಂದು ಆರೋಪಿ ಹೇಳುತ್ತಿರುವ ವೀಡಿಯೊವನ್ನು ಸಹ ನಾವು ನೋಡಿದ್ದೇವೆ. ಇದೇ ರೀತಿಯ ಭರವಸೆಗಳನ್ನು ನೀಡಿ ಅವನು ಬೇರೆ ಯಾವುದೇ ಮಹಿಳೆಯರಿಗೆ ಮೋಸ ಮಾಡಿದ್ದಾನೆಯೇ ಎಂಬುದನ್ನು ನಾವು ಪರಿಶೀಲಿಸಬೇಕಾಗಿದೆ. ರಾಜಸ್ಥಾನದಲ್ಲಿರುವ ಇತರ ಮಹಿಳೆಯರೊಂದಿಗೆ ಈತ ಮಾಡಿರುವ ಕೆಲವು ವೀಡಿಯೊಗಳು ವೈರಲ್ ಆಗಿವೆ. ಆದರೆ, ಈ ಬಗ್ಗೆ ಯಾವುದೇ ರೀತಿಯ ದೂರು ದಾಖಲಾಗಿಲ್ಲ. ಇತರೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳಿವೆಯೇ ಎಂಬುುದನ್ನು ಪರಿಶೀಲಿಸಬೇಕಿದೆ. ಅಗತ್ಯವಿದ್ದರೆ ಆತನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ದೂರು ಹಿನ್ನೆಲೆ ವ್ಯಕ್ತಿಯ ವಿರುದ್ಧ ವಂಚನೆಯ ಮೂಲಕ ಲೈಂಗಿಕ ಸಂಭೋಗ (ಬಿಎನ್‌ಎಸ್ 69), ಕ್ರಿಮಿನಲ್ ಬೆದರಿಕೆ (ಬಿಎನ್‌ಎಸ್ 351(2)) ಮತ್ತು ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ (ಬಿಎನ್‌ಎಸ್ 352) ಪ್ರಕರಣ ದಾಖಲಾಗಿದೆ.