ಬೆಂಗಳೂರು: ಸಾಹಿತಿ ಎಸ್.ಎಲ್. ಭೈರಪ್ಪ ಅವರ ಸ್ಮಾರಕ ನಿರ್ಮಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗುರುವಾರ ಹೇಳಿದ್ದಾರೆ.
ಎಸ್.ಎಲ್. ಭೈರಪ್ಪ ಅಂತಿಮ ದರ್ಶನ ಪಡೆದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಭೈರಪ್ಪ ಅವರ ಸ್ಮಾರಕ ನಿರ್ಮಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದರು.
ಸ್ಮಾರಕ ನಿರ್ಮಾಣ ತೀರ್ಮಾನ ನನ್ನೊಬ್ಬನದಲ್ಲ. ಸರ್ಕಾರದ ಹಂತದಲ್ಲಿ ಚರ್ಚಿಸಿ ತೀರ್ಮಾನಿಸಬೇಕಾಗುತ್ತದೆ. ಕಲಾವಿದರು, ಸಾಹಿತಿಗಳ ಸ್ಮಾರಕದ ರೀತಿ ಭೈರಪ್ಪ ಅವರ ಸ್ಮಾರಕವೂ ಆಗಬೇಕು ಎಂದು ತಿಳಿಸಿದರು.
ಭೈರಪ್ಪ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸಾಹಿತಿ. ವಿಶ್ವದ ಹಲವು ಭಾಷೆಗಳಿಗೆ ಅವರ ಕಾದಂಬರಿ ಅನುವಾದಗೊಂಡಿವೆ. ಅವರ ಕಾದಂಬರಿಗಳು ಸಿನೆಮಾಗಳು ಕೂಡ ಆಗಿವೆ. ಸಂಸ್ಕೃತಿ ಎತ್ತಿ ಹಿಡಿದು ಸಮಾಜಕ್ಕೆ ಮಾರ್ಗದರ್ಶನ ಮಾಡಿದವರು ಭೈರಪ್ಪ ಎಂದರು.
ಇದಕ್ಕೂ ಮುನ್ನ ಅಂತಿಮ ದರ್ಶನ ಪಡೆದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಭೈರಪ್ಪ ಅವರ ಸ್ಮಾರಕ ನಿರ್ಮಿಸಬೇಕೆಂದು ಹೇಳಿದರು.