ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಅವರ ಮನೆಯಲ್ಲಿ ನಡೆದಿದ್ದ 3 ಲಕ್ಷ ರೂ ಹಣ ಕಳವು ಪ್ರಕರಣದ ತನಿಖೆ ತೀವ್ರಗೊಳಿಸಿರುವ ಪೊಲೀಸರು ಹಣದ ಮೂಲದ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ಹಣ ಕಳವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ತನಿಖೆ ನಡೆಸುತ್ತಿದ್ದು, ಇಲ್ಲಿಯವರೆಗೆ 9 ಜನರ ವಿಚಾರಣೆ ನಡೆಸಿದ್ದಾರೆ.
ಆದರೆ ಪೊಲೀಸರಿಗೆ ಹಣ ಕಳವು ಯಾರು ಮಾಡಿರಬಹುದು ಎಂಬುದರ ಬಗ್ಗೆ ಸುಳಿವು ಸಿಕ್ಕಿಲ್ಲ. ಹೀಗಾಗಿ ತನಿಖಾ ದೃಷ್ಟಿಕೋನವನ್ನೇ ಬದಲಿಸಿರುವ ತನಿಖಾಧಿಕಾರಿಗಳು ಇದೀಗ ಹಣದ ಮೂಲದ ಕುರಿತು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ನಿಜವಾಗಿಯೂ ಮನೆಯಲ್ಲಿ ಹಣ ಕಳುವಾಗಿದ್ಯಾ ಅನ್ನೋ ಬಗ್ಗೆ ಪೊಲೀಸರಿಗೆ ಅನುಮಾನ ಶುರುವಾಗಿದ್ದು, ಈ ಕುರಿತಂತೆ ತನಿಖೆ ಆರಂಭಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ವಿಜಯಲಕ್ಷ್ಮಿ ಪುತ್ರ ವಿನೀಶ್ ವಿಚಾರಣೆ
3 ಲಕ್ಷ ಹಣದ ಮೂಲದ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಹಣವನ್ನ ಯಾವ ಕಾರಣಕ್ಕೆ ಮನೆಯಲ್ಲಿ ಇಟ್ಕೊಂಡಿದ್ರಿ? ಆ ಹಣದ ಮೂಲ ಏನು ಅನ್ನೋದರ ಬಗ್ಗೆ ವಿವರಣೆ ನೀಡುವಂತೆ ಪೊಲೀಸರು ಸೂಚಿಸಿದ್ದಾರೆ.
ಈ ಪ್ರಕರಣ ಸಂಬಂಧ ಈಗಾಗಲೇ ಮೂವರು ಕೆಲಸಗಾರರು, ಮ್ಯಾನೇಜರ್ ನಾಗರಾಜ್, ವಿಜಯಲಕ್ಷ್ಮಿ ಮತ್ತು ಅವರ ತಾಯಿ, ಮಗ ವಿನೀಶ್ ಮತ್ತವನ ಮೂವರ ಸ್ನೇಹಿತರನ್ನು ವಿಚಾರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.