ಹೊಸಪೇಟೆ : ತಾಲ್ಲೂಕಿನ ಗಾದಿಗನೂರಿನಲ್ಲಿ ಶನಿವಾರ ಬೆಳಿಗ್ಗೆ 5.15ರ ಸುಮಾರಿಗೆ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿದ್ದ 8 ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ತೋರಣಗಲ್‌ನ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕವಿತಾ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.
ಹೊಸಪೇಟೆ–ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ವಕೀಲ ಹಾಲಪ್ಪ ಅವರಿಗೆ ಸೇರಿದ ಮನೆಯಾಗಿದೆ. ಮನೆಯಲ್ಲಿ ಸುಮಾರು 10 ಮಂದಿ ಇದ್ದರು. ಬೆಳಿಗ್ಗೆ ಅಡುಗೆ ಅನಿಲ ಸೋರಿಕೆಯ ವಾಸನೆ ಬರುತ್ತಿತ್ತು ಎಂದು ಹೇಳಲಾಗುತ್ತಿದೆ. ಸ್ಫೋಟದ ತೀವ್ರತೆಗೆ ಮನೆಯ ಗೋಡೆಯೇ ಕುಸಿದಿದೆ.
ಬೆಳಿಗ್ಗೆ ಸ್ಟವ್ ಹಚ್ಚಲು ಕವಿತಾ ಯತ್ನಿಸಿದಾಗ ಏಕಾ ಏಕಿ ಬೆಂಕಿ ಹತ್ತಿಕೊಂಡಿತು. ಸ್ಫೋಟದಿಂದ ಮನೆ ಶೇ 50ರಷ್ಟು ಧ್ವಂಸವಾಗಿದೆ. ಕವಿತಾ ಅವರಲ್ಲದೆ, ಹಾಲಪ್ಪ, ಮೈಲಾರಪ್ಪ, ಗಂಗಮ್ಮ, ಮಲ್ಲಮ್ಮ, ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ಹೊಸಪೇಟೆಯಿಂದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿದರು.