ಬೆಂಗಳೂರು: ಹೆಬ್ಬಾಳದಿಂದ ಸರ್ಜಾಪುರವರೆಗಿನ 37 ಕಿ.ಮೀ ನಮ್ಮ ಮೆಟ್ರೋ ಕೆಂಪು ಮಾರ್ಗ ನಿರ್ಮಾಣ ವೆಚ್ಚವನ್ನು ಮರು ಮೌಲ್ಯಮಾಪನ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಸೂಚನೆ ನೀಡಿ 4 ತಿಂಗಳುಗಳು ಕಳೆದರೂ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಹೆಬ್ಬಾಳದಿಂದ ಸರ್ಜಾಪುರ ಸಂಪರ್ಕಿಸಲು ಈ ಯೋಜನೆ ಪ್ರಮಖವಾಗಿದೆ. ಯೋಜನೆಗೆ ಪ್ರತೀ ಕಿ.ಮೀ.776 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು. ಇತು ಅತ್ಯಂತ ದುಬಾರಿ ವೆಚ್ಚವಾಗಿದೆ ಎಂದು ಹೇಳಲಾಗುತ್ತಿದೆ.
28,405 ಕೋಟಿ ರೂ. ವೆಚ್ಚವೆಂದು ಅಂದಾಜು ಮಾಡಲಾದ ಈ ಯೋಜನೆಗೆ ಡಿಸೆಂಬರ್ 2024 ರಲ್ಲಿ ರಾಜ್ಯ ಸರ್ಕಾರವು ಅನುಮೋದನೆ ನೀಡಿತ್ತು. ಇದೀಗ ಕೇಂದ್ರ ಸರ್ಕಾರದ ಅಂತಿಮ ಅನುಮೋದನೆಗಾಗಿ ಕಾಯುತ್ತಿದೆ.
ಈ ನಡುವೆ ಬಿಎಂಆರ್‌ಸಿಎಲ್ ವಿಳಂಬ ನೀತಿ ಕುರಿತು ಕಳವಳಗಳು ಹೆಚ್ಚಾಗಿದೆ. ಈ ವಿಳಂವು ಕೆಂಪು ಮಾರ್ಗಕ್ಕಷ್ಟೇ ಸೀಮಿತವಾಗಿಲ್ಲ, ಮೆಟ್ರೋ ಹಂತ 3ದ ನಾಗರೀಕ ಕಾಮಗಾರಿಗಳಿಗೆ ಟೆಂಡರ್‌ಗಳ ಮೇಲೂ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಅವರು ಕಳವಳ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರವು ಮೆಟ್ರೋ ಹಂತ-3ನ್ನು 100 ದಿನಗಳಲ್ಲಿ ಅನುಮೋದನೆ ನೀಡಿತ್ತು. ಆದರೆ, ನಾಗರೀಕ ಕಾಮಗಾರಿಗೆ ಗುತ್ತಿಗೆ ಕರೆಯುವಲ್ಲಿ ಬಿಎಂಆರ್‌ಸಿಎಲ್ ವಿಫಲವಾಗಿದೆ. ಈ ವಿಳಂಬ ನೀತಿಯು ವೆಚ್ಚವನ್ನು ಮತ್ತಷ್ಟು ಹೆಚ್ಚಿಸಲಿದೆ. ಇದು ಪ್ರಯಾಣಿಕರಿಗೆ ಹೊರೆಯಾಗಲಿದೆ. ಹೀಗಾಗಿ, ಬಿಎಂಆರ್‌ಸಿಎಲ್ ಕೂಡಲೇ ಕಾರ್ಯ ಪ್ರವೃತ್ತವಾಗಬೇಕೆಂದು ಆಗ್ರಹಿಸಿದ್ದಾರೆ.
ರತೀಯ ವಿಜ್ಞಾನ ಸಂಸ್ಥೆಯ ಸುಸ್ಥಿರ ಸಾರಿಗೆ ಪ್ರಯೋಗಾಲಯದ ಸಂಚಾಲಕ ಪ್ರೊ. ಆಶಿಶ್ ವರ್ಮಾ ಅವರು ಮಾತನಾಡಿ, ಇದು ಬಿಎಂಆರ್‌ಸಿಎಲ್'ನ ಕಳಪೆ ಆದ್ಯತೆಯನ್ನು ತೋರಿಸುತ್ತದೆ. ರಸ್ತೆ ನಿರ್ಮಾಣ ಕಾರ್ಯಗಳು ತ್ವರಿತವಾಗಿ ಆಗುತ್ತಿದೆ ಎಂದರೆ, ಮೆಟ್ರೋ ಕಾರ್ಯವೇಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮೇ 23 ರಂದು, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳು ಮತ್ತು ವಿದ್ಯುತ್ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು, ಬೆಂಗಳೂರಿನ ಪ್ರಸ್ತಾವಿತ ಹೆಬ್ಬಾಳ-ಸರ್ಜಾಪುರ ಮೆಟ್ರೋ ಕಾರಿಡಾರ್‌ನ ವೆಚ್ಚದ ಅಂದಾಜನ್ನು ತಜ್ಞ ಸಂಸ್ಥೆಯಿಂದ ಪರಿಶೀಲಿಸಬೇಕು ಎಂದು ಹೇಳಿದ್ದರು.