ಬೆಂಗಳೂರು: ಅತ್ಯಾಚಾರ ಪ್ರಕರಣದ ಆರೋಪಿಗೆ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದ್ದು, ಮಹಿಳೆಯರನ್ನು ಗೌರವಿಸುವ ಬಗ್ಗೆ ಮನುಸ್ಮೃತಿಯ ಶ್ಲೋಕ ಮತ್ತು ಮಹಾತ್ಮ ಗಾಂಧಿಯವರ ಹೇಳಿಕೆಯನ್ನು ಉಲ್ಲೇಖಿಸಿ ಮಹಿಳೆಯರ ಘನತೆಯನ್ನು ಕಾಪಾಡುವ ಅಗತ್ಯವನ್ನು ಒತ್ತಿಹೇಳಿದೆ.
ಈ ಪ್ರಕರಣವು ಬಿಹಾರದ ಬಂಕಾದ 19 ವರ್ಷದ ಪರಿಶಿಷ್ಟ ಪಂಗಡದ ಯುವತಿಗೆ ಸಂಬಂಧಿಸಿದೆ.
ಸಂತ್ರಸ್ತೆಯ ಪೋಷಕರು ಕೇರಳದ ಏಲಕ್ಕಿ ಎಸ್ಟೇಟ್‌ನಲ್ಲಿ ಉದ್ಯೋಗದಲ್ಲಿದ್ದು, ಏಪ್ರಿಲ್ 2 ರಂದು, ಬೆಳಗಿನ ಜಾವ 1.30ರ ಸುಮಾರಿಗೆ ಬೆಂಗಳೂರಿನ ಕೆಆರ್ ಪುರಂ ರೈಲು ನಿಲ್ದಾಣಕ್ಕೆ ಕೇರಳದಿಂದ ಬಂದಿದ್ದಾರೆ.
ಆಕೆಯ ಸೋದರಸಂಬಂಧಿ ಜೊತೆ ಊಟಕ್ಕೆಂದು ಮಹದೇವಪುರದ ಕಡೆಗೆ ಹೋಗುತ್ತಿದ್ದಾಗ, ನಿಲ್ದಾಣದ ಬಳಿ ಇಬ್ಬರು ವ್ಯಕ್ತಿಗಳು ಅವರನ್ನು ಅಡ್ಡಗಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಾಸಿಕ್ಯೂಷನ್ ಪ್ರಕಾರ, ಆರೋಪಿಯೊಬ್ಬ ಸೋದರಸಂಬಂಧಿಯನ್ನು ತಡೆದಿದ್ದಾನೆ. ಆತನ ಸಹಚರ ಯುವತಿಯನ್ನು ಹತ್ತಿರದ ಸ್ಥಳಕ್ಕೆ ಎಳೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸಹಾಯಕ್ಕಾಗಿ ಆಕೆ ಕೂಗಿಕೊಂಡಾಗ ಮಧ್ಯಪ್ರವೇಶಿಸಿದ ಸ್ಥಳೀಯರು, ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇವರಿಬ್ಬರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಅತ್ಯಾಚಾರ ಮತ್ತು ಬೆದರಿಕೆ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿಯೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಾಗಿದೆ.
ವಿಚಾರಣೆಯ ಸಮಯದಲ್ಲಿ, ಅರ್ಜಿದಾರರನ್ನು ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಲೈಂಗಿಕ ದೌರ್ಜನ್ಯದಲ್ಲಿ ಅವರ ನೇರ ಪಾತ್ರವಿಲ್ಲ ಎಂದು ಆರೋಪಿಗಳಲ್ಲಿ ಒಬ್ಬನ ಪರ ವಕೀಲರು ವಾದಿಸಿದರು.
ಆದಾಗ್ಯೂ, ಪ್ರಾಸಿಕ್ಯೂಷನ್, ಸೋದರಸಂಬಂಧಿಯನ್ನು ಬೆದರಿಸುವ ಮೂಲಕ ಮತ್ತು ಅವರು ಪ್ರತಿರೋಧಿಸದಂತೆ ತಡೆಯುವ ಮೂಲಕ ಅಪರಾಧ ನಡೆಯಲು ಕಾರಣರಾಗಿದ್ದಾರೆ ಎಂದು ವಾದಿಸಿತು.
ಸೆಪ್ಟೆಂಬರ್ 4 ರಂದು ಸಲ್ಲಿಸಿದ್ದ ಜಾಮೀನು ಅರ್ಜಿಯ ಕುರಿತು ತೀರ್ಪು ನೀಡಿದ ನ್ಯಾಯಮೂರ್ತಿ ಎಸ್. ರಾಚಯ್ಯ, ಘಟನೆಯ ಗಂಭೀರತೆ ಮತ್ತು ಸಂತ್ರಸ್ತೆ ಅನುಭವಿಸಿದ ಆಘಾತವನ್ನು ಎತ್ತಿ ತೋರಿಸಿದರು.
'ಮತ್ತೊಬ್ಬನೊಂದಿಗೆ ಸೇರಿ ಆರೋಪಿ ಮಾಡಿದ ಕೃತ್ಯವು, ಸಂತ್ರಸ್ತೆಯ ಜೀವನದಲ್ಲಿ ಒಂದು ಗಾಯವಾಗಿ ಉಳಿಯುತ್ತದೆ. ಆಕೆ ಅನುಭವಿಸಿದ ಯಾತನೆಯನ್ನು ನಿವಾರಿಸುವುದು ಆಕೆಗೆ ತುಂಬಾ ಕಷ್ಟಕರವಾಗಿರುತ್ತದೆ' ಎಂದರು.
ನಂತರ ಮನುಸ್ಮೃತಿಯ ಒಂದು ಶ್ಲೋಕವನ್ನು ಉಲ್ಲೇಖಿಸಿದ ಪೀಠವು, 'ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ, ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಫಲಾಃ ಕ್ರಿಯಾಃ' ಅಂದರೆ ಮಹಿಳೆಯರನ್ನು ಎಲ್ಲಿ ಗೌರವಿಸಲಾಗುತ್ತದೆಯೋ ಅಲ್ಲಿ ದೈವತ್ವವು ಇರುತ್ತದೆ, ಆದರೆ ಅವರನ್ನು ಎಲ್ಲಿ ಅವರನ್ನು ಅವಮಾನಿಸಲಾಗುತ್ತದೆಯೋ ಅಲ್ಲಿ ಎಲ್ಲ ಕಾರ್ಯಗಳು ಮೌಲ್ಯವನ್ನು ಕಳೆದುಕೊಳ್ಳುತ್ತವೆ' ಎಂದು ಅರ್ಥ ಎಂದಿತು.
ನ್ಯಾಯಮೂರ್ತಿ ರಾಚಯ್ಯ ಕೂಡ ಮಹಾತ್ಮ ಗಾಂಧಿಯವರ ಮಾತುಗಳನ್ನು ನೆನಪಿಸಿಕೊಂಡರು: 'ಮಹಿಳೆ ಮಧ್ಯರಾತ್ರಿಯಿಡೀ ರಸ್ತೆಯಲ್ಲಿ ಮುಕ್ತವಾಗಿ ನಡೆಯಬಹುದಾದ ದಿನ, ಭಾರತ ಸ್ವಾತಂತ್ರ್ಯವನ್ನು ಸಾಧಿಸಿದೆ ಎಂದು ನಾವು ಹೇಳಬಹುದು'.