ಮಹಾರಾಷ್ಟ್ರದಿಂದ ಡ್ಯಾಂಗಳಿಗೆ ಭಾರೀ ಪ್ರಮಾಣದಿಂದ ನೀರು ಬಿಟ್ಟಿರುವುದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಕಲಬುರಗಿ, ರಾಯಚೂರು, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ನಂತರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಈ ಮಧ್ಯೆ ಕಲಬುರಗಿಯವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರೈತರ ಬೆಳೆಗಳು ನಾಶವಾಗಿದ್ದರಿಂದ ಪರಿಹಾರವನ್ನು ಬಿಡುಗಡೆ ಮಾಡುವಂತೆ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ. ಈ ಕೂಡಲೇ ಕೇಂದ್ರ ಸರ್ಕಾರಕ್ಕೆ ನೆರೆ ಪರಿಹಾರಕ್ಕೆ ಮನವಿ ಮಾಡಿ, ತಾನು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ರಾಜ್ಯ ಸರ್ಕಾರಕ್ಕೆ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ರಾಜ್ಯಾದ್ಯಂತ ಭೂಸ್ವಾಧೀನ ಪ್ರಸ್ತಾವನೆಗಳಿಗೆ ಪಾರದರ್ಶಕತೆ, ದಕ್ಷತೆ ಮತ್ತು ನ್ಯಾಯಸಮ್ಮತತೆಯನ್ನು ಜಾರಿಗೆತರುವ ಗುರಿ ಹೊಂದಿರುವ ಏಕೀಕೃತ ಭೂಸ್ವಾಧೀನ ವ್ಯವಸ್ಥೆ(ಯುಎಲ್ಎಂಎಸ್) ಡೇಟಾ ಮಾಡ್ಯೂಲ್ ಅನ್ನು ರಾಜ್ಯ ಸರ್ಕಾರ ಆರಂಭಿಸಿದೆ. ಕರ್ನಾಟಕ ಏಕೀಕೃತ ಭೂಸ್ವಾಧೀನ ವ್ಯವಸ್ಥೆಯು ಭೂಸ್ವಾಧೀನ ಪ್ರಕ್ರಿಯೆಯನ್ನು ಸಮನ್ವಯಗೊಳಿಸಲು ಮತ್ತು ಪ್ರಸ್ತುತ ನಡೆಯುತ್ತಿರುವ ಮತ್ತು ಹಿಂದಿನ ಪ್ರಸ್ತಾವನೆಗಳಿಗೆ ಸಂಬಂಧಿಸಿದ ಮೊಕದ್ದಮೆಗಳನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾದ ರಾಜ್ಯವ್ಯಾಪಿ ಡಿಜಿಟಲ್ ವೇದಿಕೆಯಾಗಿದೆ. ಮಾಡ್ಯೂಲ್ ಅನ್ನು ಇ-ಆಡಳಿತ ಇಲಾಖೆಯ ಅಡಿಯಲ್ಲಿ ಸ್ಮಾರ್ಟ್ ಗವರ್ನನ್ಸ್ ಸೆಂಟರ್‌ನ ULMS ಪ್ರಾಜೆಕ್ಟ್ ಅಭಿವೃದ್ಧಿಪಡಿಸಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ. ಈ ಮಾಡ್ಯೂಲ್ ಎಲ್ಲಾ ಭೂಸ್ವಾಧೀನ ಸಂಸ್ಥೆಗಳು ಮತ್ತು ಇಲಾಖೆಗಳು ಪ್ರಕ್ರಿಯೆಯ ಉದ್ದಕ್ಕೂ ಭೂಸ್ವಾಧೀನದ ಸಂಪೂರ್ಣ ವಿವರಗಳನ್ನು ನಮೂದಿಸಲು ಅನುವು ಮಾಡಿಕೊಡುತ್ತದೆ.
ರಾಜ್ಯ ಸರ್ಕಾರ ಜನತೆಗೆ ಮತ್ತೆ ದರ ಏರಿಕೆಯ ಬರೆ ಎಳೆದಿದೆ. ದಸರಾ ಪ್ರಯುಕ್ತ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ 20 ರೂ. ಏರಿಕೆ ಏರಿಕೆಯಾಗಿದ್ದು ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ. ಸಾರಿಗೆ ಇಲಾಖೆ ಮೈಸೂರು ಮಾರ್ಗದ ಕೆಎಸ್ ಆರ್ಟಿಸಿ ಬಸ್ ದರವನ್ನ ಏರಿಕೆ ಮಾಡಿದೆ. ಎಲ್ಲಾ ಕೆಎಸ್ ಆರ್ಟಿಸಿ ಬಸ್ ದರ ಬರೋಬ್ಬರಿ 20 ರೂಪಾಯಿ ಏರಿಕೆ ಮಾಡಿದೆ. ದಸರಾ ಮುಗಿಯುವವರೆಗೂ ದರ ಏರಿಕೆ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ. 170 ರೂ ಇದ್ದ ಕರ್ನಾಟಕ ಸಾರಿಗೆ ವೇಗದೂತ ದರ ಈಗ 190 ರೂ.ಗೆ ಏರಿಕೆ, ರಾಜಾಹಂಸ 270 ರಿಂದ 290 ರೂ. ಐರಾವತ 430 ರಿಂದ 450 ರೂ. ತಡೆ ರಹಿತ ಸಾರಿಗೆ 210 ರಿಂದ 240 ರೂ. ಐರಾವತ ಕ್ಲಬ್ ಕ್ಲಾಸ್ 440 ರಿಂದ 460 ರೂಪಾಯಿಗೆ ಏರಿಕೆ ಆಗಿದೆ.
ಖ್ಯಾತ ಕನ್ನಡ ರಂಗಭೂಮಿ ನಟ, ಅನೇಕ ನಾಟಕಗಳಲ್ಲಿ ನಟಿಸಿ-ನಿರ್ದೇಶಿಸಿ ಜನಪ್ರಿಯರಾಗಿದ್ದ ಹುಬ್ಬಳ್ಳಿ ಮೂಲದ ಯಶವಂತ ಸರದೇಶಪಾಂಡೆ ಇಂದು ಬೆಳಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. 60 ವರ್ಷದ ಯಶವಂತ ಸರದೇಶಪಾಂಡೆ ಅವರಿಗೆ ಬೆಳಗ್ಗೆ 10 ಗಂಟೆ ಸುಮಾರಿಗೆ ತೀವ್ರ ಹೃದಯಾಘಾತ ಉಂಟಾಯಿತು. ಅವರನ್ನು ಫೋರ್ಟಿಸ್ ಆಸ್ಪತ್ರೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಸರದೇಶಪಾಂಡೆ ಅವರ ಆಲ್ ದಿ ಬೆಸ್ಟ್ ನಾಟಕ ಅಭೂತಪೂರ್ವ ಯಶಸ್ಸು ಕಂಡಿತು. 'ರಾಮ ಶ್ಯಾಮ ಭಾಮಾ' ಚಿತ್ರದಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು. ಅವರ ನಿಧನಕ್ಕೆ ಕುಟುಂಬ ವರ್ಗ, ಅವರ ಅಭಿಮಾನಿಗಳು, ನಾಡಿನ ಗಣ್ಯರು ಕಂಬನಿ ಮಿಡಿದಿದ್ದಾರೆ.
ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ವರ್ಜಿನ್ ಸೆಕ್ಸ್ ದಂಧೆಯನ್ನು ಮೈಸೂರಿನ ವಿಜಯನಗರ ಪೊಲೀಸರು NGO ಒಡನಾಡಿ ಸಹಯೋಗದೊಂದಿಗೆ ಬೇಧಿಸಿದ್ದಾರೆ. ಋತುಮತಿಯಾದ ಅಪ್ರಾಪ್ತ ಬಾಲಕಿಯೊಂದಿಗೆ ಲೈಂಗಿಕ ಸಂಪರ್ಕ ಏರ್ಪಡಿಸಲು 20 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ ಬೆಂಗಳೂರಿನ ನಿವಾಸಿ ಶೋಭಾ ಮತ್ತು ಆಕೆಯ ಸಹಚರ ತುಳಸಿ ಕುಮಾರ್ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿದ್ದು, ಇವರ ಹಿಂದೆ ದೊಡ್ಡ ಜಾಲವಿದೆ ಎಂದು ಅನುಮಾನ ವ್ಯಕ್ತವಾಗಿದೆ. ಈ ಸಂಬಂಧ ವಿಜಯನಗರ ಪೊಲೀಸರು ಆರೋಪಿಗಳ ವಿರುದ್ಧ POCSO ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರಿನ ಕೆಟ್ಟ ರಸ್ತೆಗೆ 22 ವರ್ಷದ ವಿದ್ಯಾರ್ಥಿನಿಯೊಬ್ಬಳು ಬಲಿ ಬಲಿಯಾಗಿದ್ದಾಳೆ. ಸೋಮವಾರ ಬೆಳಿಗ್ಗೆ ಬೆಂಗಳೂರಿನ ಹೊರವಲಯದಲ್ಲಿರುವ ಬೂದಿಗೆರೆ ಕ್ರಾಸ್ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಟಿಪ್ಪರ್ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಸ್ಕೂಟಿಯಲ್ಲಿ ಕಾಲೇಜಿಗೆ ತೆರಳುತ್ತಿದ್ದ 22 ವರ್ಷದ ಧನುಶ್ರೀ ಆಯಾತಪ್ಪಿ ಕೆಳಗೆ ಬಿದ್ದಿದ್ದು ಟಿಪ್ಪರ್ ಆಕೆಯ ಮೇಲೆ ಹರಿದಿದೆ. ಘಟನೆ ಬಳಿಕ ಟಿಪ್ಪರ್ ಚಾಲಕ ವಾಹನ ಸಮೇತ ಎಸ್ಕೇಪ್ ಆಗಿದ್ದಾನೆ.