ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಪಾಲಾಗಿರುವ ನಟ ದರ್ಶನ್ ಅವರು ಜೈಲಿನಲ್ಲಿ ತಮಗೆ ಕನಿಷ್ಠ ಸೌಲಭ್ಯ ನಿರಾಕರಿಸಲಾಗಿದೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದು, ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮಂಗಳವಾರ ಅಕ್ಟೋಬರ್ 9ಕ್ಕೆ ತೀರ್ಪು ಕಾಯ್ದಿರಿಸಿದೆ.
ವಿಚಾರಣೆ ವೇಳೆ ಜೈಲು ಅಧಿಕಾರಿಗಳು 57ನೇ ಸೆಷನ್ಸ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು, ಎರಡು ಕಡೆಯ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆದೇಶ ಕಾಯ್ದಿರಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ ನಟ ದರ್ಶನ್ ಅವರ ಪರ ವಕೀಲ ಸುನಿಲ್ ಅವರು, ನಟನನ್ನು ಬೇರೆ ಸೆಲ್‌ಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದರು.
ತಮ್ಮ ಕಕ್ಷಿದಾರರ ಮೇಲೆ ಅತಿಯಾದ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ ಎಂದು ಸಹ ಅವರು ವಾದಿಸಿದರು. "ಹಲವು ವಿಐಪಿಗಳನ್ನು ಜೈಲಿನಲ್ಲಿ ಇರಿಸಲಾಗಿದೆ. ಅವರೆಲ್ಲರಿಗೂ ಒಂದೇ ರೀತಿಯ ಭದ್ರತೆ ನೀಡಲಾಗಿದೆಯೇ? ದರ್ಶನ್‌ಗೆ ಮಾತ್ರ ಇಷ್ಟೊಂದು ಭದ್ರತೆ ಏಕೆ?" ಎಂದು ಸುನಿಲ್ ಪ್ರಶ್ನಿಸಿದರು.
ಜೈಲು ಕೈಪಿಡಿಯಲ್ಲಿ ಕೇವಲ 14 ದಿನಗಳು ಎಂದು ಉಲ್ಲೇಖಿಸಿರುವಾಗ ತಮ್ಮ ಕಕ್ಷಿದಾರರನ್ನು 45 ದಿನಗಳವರೆಗೆ ಕ್ವಾರಂಟೈನ್ ಸೆಲ್‌ನಲ್ಲಿ ಏಕೆ ಇರಿಸಲಾಗಿದೆ ಎಂದು ಅವರು ಪ್ರಶ್ನಿಸಿದರು.
ಇದಕ್ಕೆ ವಿರೋಧಿಸಿದ ವಿಶೇಷ ಸರ್ಕಾರಿ ಅಭಿಯೋಜಕ(SPP) ಪ್ರಸನ್ನ ಕುಮಾರ್ ಅವರು, ಆರೋಪಿ ಪರ ವಕೀಲರು ನಿರ್ದಿಷ್ಟವಾಗಿ ತಮಗೆ ಏನು ಬೇಕು ಎಂದು ಹೇಳಬೇಕೆಂದು ಒತ್ತಾಯಿಸಿದರು.
ಜೈಲು ಕೈಪಿಡಿಯಂತೆ ಕ್ರಮ ಕೈಗೊಳ್ಳಲಾಗಿದೆ. ಟೆಲಿಫೋನ್, ವಿಡಿಯೋ ಕಾನ್ಫರೆನ್ಸ್ ಗೆ ವ್ಯವಸ್ಥೆ ಮಾಡಲಾಗಿದೆ. ಚಾದರ, ಬೆಡ್ ಷೀಟ್, ಚೊಂಬು ತಟ್ಟೆ ಕೊಡಲಾಗಿದೆ. ಪಲ್ಲಂಗ ಕೇಳಿದರೆ ಕೊಡಲು ಅವಕಾಶವಿಲ್ಲ ಎಂದು ಜೈಲು ಅಧಿಕಾರಿಗಳ ಪರವಾಗಿ ಪ್ರಸನ್ನ ಕುಮಾರ್ ವಾದಿಸಿದರು.
"ಸುಮ್ಮನೆ ಆರೋಪ ಮಾಡಬೇಡಿ, ಆದೇಶ ಏನು ಪಾಲನೆಯಾಗಿಲ್ಲ ಹೇಳಿ. ನಿಮಗೆ ಏನು ಬೇಕು ಎಂದು ಕೇಳಿ. ನಮಗೆ ಇದಕ್ಕೆ ಸಮಯವಿಲ್ಲ; ಬೇರೆ ಕೆಲಸ ಬಾಕಿ ಇದೆ" ಎಂದು ನ್ಯಾಯಾಧೀಶರು ಹೇಳಿದರು.
ಎರಡೂ ಕಡೆಯ ವಾದ, ಪ್ರತಿವಾದ ಆಲಿಸಿದ ನಂತರ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿದೆ.