ಬೆಂಗಳೂರು: ರಾಜ್ಯದ ವಿವಿಧ ಇಲಾಖೆಗಳಿಗೆ ಸಮರ್ಥ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಆಯ್ಕೆ ಮಾಡುವ ಕರ್ನಾಟಕ ಲೋಕಸೇವಾ ಆಯೋಗ ಮತ್ತೆ ವಿವಾದಕ್ಕೆ ಸಿಲುಕಿದೆ. ಗೆಜೆಟೆಡ್ ಪ್ರೊಬೇಷನರ್ಸ್ (ಗ್ರೂಪ್ A ಮತ್ತು B) ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬದಿಂದ ಅಭ್ಯರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಾವಿರಾರು ಅಭ್ಯರ್ಥಿಗಳು ಅಂತಿಮ ಸಂದರ್ಶನ ದಿನಾಂಕಕ್ಕಾಗಿ ಕಾಯುತ್ತಿದ್ದು, ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
ಫೆಬ್ರವರಿ 2024ರಲ್ಲಿ ಪರೀಕ್ಷೆ ನಡೆದಿದ್ದರೂ ವಿವಿಧ ಇಲಾಖೆಗಳಲ್ಲಿ ಉದ್ಯೋಗಗಳನ್ನು ಒದಗಿಸಲು ವಿಫಲವಾದ ರಾಜ್ಯ ಸರ್ಕಾರದ ವಿರುದ್ಧ ಸಾವಿರಾರು ಆಕಾಂಕ್ಷಿಗಳು ಧಾರವಾಡದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿ, ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿದರು.
ಈ ಪ್ರತಿಭಟನೆಯಿಂದಾಗಿ ಸರ್ಕಾರವು ಮಾರ್ಚ್ 2, 2026 ರಂದು ಮುಖ್ಯ ಪರೀಕ್ಷೆಯ ಫಲಿತಾಂಶಗಳನ್ನು ಬಿಡುಗಡೆ ಮಾಡಿತ್ತು,
ಒಟ್ಟು 1,152 ಅಭ್ಯರ್ಥಿಗಳು ಸಂದರ್ಶನಕ್ಕೆ ಆಯ್ಕೆಯಾಗಿದ್ದು, ಅಂತಿಮವಾಗಿ 384 ಮಂದಿಗೆ ವಿವಿಧ ಹುದ್ದೆಗಳು ಲಭಿಸಲಿವೆ. ಆರಂಭದಲ್ಲಿ ಮಾರ್ಚ್ 23ರಿಂದ ಮೇ 4ರವರೆಗೆ ಸಂದರ್ಶನ ನಡೆಸಲಾಗುತ್ತದೆ ಎಂದು ಘೋಷಿಸಿದ್ದ KPSC, ಬಳಿಕ ಅದನ್ನು ಹಿಂತೆಗೆದುಕೊಂಡು “ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟಿಸುತ್ತೇವೆ” ಎಂದು ಹೇಳಿತ್ತು. ಆದರೆ ಇದುವರೆಗೆ ಯಾವುದೇ ಮಾಹಿತಿ ಹೊರಬಂದಿಲ್ಲ.
ಅಂತಿಮ ಸುತ್ತಿನ ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಯೊಬ್ಬರು ಮಾತನಾಡಿ, ಮುಖ್ಯ ಪರೀಕ್ಷೆಯ ಫಲಿತಾಂಶಗಳು ಪ್ರಕಟವಾದಾಗ, KPSC ಶೀಘ್ರದಲ್ಲೇ ಸಂದರ್ಶನಗಳನ್ನು ನಡೆಸುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ, ಏನೂ ಮಾಡಲಾಗಿಲ್ಲ. KPSC ಮುಖ್ಯ ಪರೀಕ್ಷೆಯ ಫಲಿತಾಂಶಗಳನ್ನು ಬಿಡುಗಡೆ ಮಾಡಲು ನಾವು ಎರಡು ವರ್ಷಗಳ ಕಾಲ ಕಾಯುತ್ತಿದ್ದೆವು. ಸಂದರ್ಶನಕ್ಕಾಗಿ ನಾವು ಇನ್ನೂ ಎಷ್ಟು ವರ್ಷ ಕಾಯಬೇಕೇ ಎಂಬುದು ತಿಳಿಯುತ್ತಿಲ್ಲ. ನಾನು ಖಾಸಗಿ ತರಬೇತಿ ಸಂಸ್ಥೆಗಳಲ್ಲಿ ಅಣಕು ಸಂದರ್ಶನಗಳಿಗೆ ಹಾಜರಾಗುತ್ತಿದ್ದೇನೆ. ನನ್ನ ತಂದೆ ಶೀಘ್ರದಲ್ಲೇ ನಿವೃತ್ತರಾಗುತ್ತಾರೆ. ಇದೀಗ ಕೆಲಸ ಪಡೆದುಕೊಂಡು ಜವಾಬ್ದಾರಿ ನಿಭಾಯಿಸುವಬೇಕಿದೆ ಎಂದು ಹೇಳಿದ್ದಾರೆ.
ಅಂತಿಮ ಸುತ್ತಿಗೆ ಆಯ್ಕೆಯಾದ ಮತ್ತೊಬ್ಬ ಅಭ್ಯರ್ಥಿ ಮಾತನಾಡಿ, "ನನ್ನ ತಾಯಿ ನಮ್ಮ ಕುಟುಂಬದ ಏಕೈಕ ಜೀವನಾಧಾರ. ನನಗೆ ದ್ವಿತೀಯ ಪಿಯುಸಿ ಓದುತ್ತಿರುವ ಕಿರಿಯ ಸಹೋದರನಿದ್ದಾನೆ. ನಮ್ಮ ಮನೆಯಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದ ಕಾರಣ ಈ ವಿಳಂಬಗಳು ನಮ್ಮನ್ನು ಮತ್ತಷ್ಟು ಬಾಧಿಸುತ್ತಿದೆ. ಬೆಂಗಳೂರಿನಲ್ಲಿ ವಾಸಿಸಲು ಹಣ ಸಂಗ್ರಹಿಸುವುದೇ ಕಷ್ಟ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ನಡುವೆ KPSC ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ, ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಈ ನಡುವೆ, ರಾಜ್ಯ ಯೋಜನೆ ಮತ್ತು ನೀತಿ ಆಯೋಗದ ಸದಸ್ಯರಾದ ಮೋಹನದಾಸ್ ಹೆಗ್ಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಕೆಪಿಎಸ್‌ಸಿ ಸುಧಾರಣೆಗಾಗಿ ಸಮಗ್ರ ಮಾರ್ಗಸೂಚಿ ರೂಪಿಸಲು ಒತ್ತಾಯಿಸಿದ್ದಾರೆ.
ನೇಮಕಾತಿ ಪ್ರಕ್ರಿಯೆಯನ್ನು ಆಧುನೀಕರಿಸಿ ಅಭ್ಯರ್ಥಿಗಳ ಪ್ರಾಯೋಗಿಕ ಕೌಶಲ್ಯ, ನೈತಿಕತೆ, ನಾಯಕತ್ವ ಮತ್ತು ಜನಕೇಂದ್ರೀಕೃತ ನಿರ್ಧಾರ ಸಾಮರ್ಥ್ಯಗಳನ್ನು ಮೌಲ್ಯಮಾಪನ ಮಾಡುವ ವ್ಯವಸ್ಥೆ ಅಗತ್ಯವಾಗಿದೆ. ಜೊತೆಗೆ ವಿಳಂಬಗಳನ್ನು ಕಡಿಮೆ ಮಾಡುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಹುದ್ದೆಗಳಿಗೂ ಕೌಶಲ್ಯಗಳಿಗೆ ಹೊಂದಾಣಿಕೆ, ನಿಗದಿತ ಅವಧಿಯ ನಿಯಮಗಳು, ಅನಾವಶ್ಯಕ ವರ್ಗಾವಣೆಗಳನ್ನು ಕಡಿಮೆ ಮಾಡುವುದು, ಅಧಿಕಾರಿಗಳಿಗೆ ಜವಾಬ್ದಾರಿ ಹೆಚ್ಚಿಸುವುದು ಮುಂತಾದ ಕ್ರಮಗಳನ್ನು ಜಾರಿಗೆ ತರಬೇಕು ಎಂದೂ ಸೂಚಿಸಿದ್ದಾರೆ.
ಡಿಜಿಟಲ್ ಸಾಧನಗಳು, ಡ್ಯಾಶ್‌ಬೋರ್ಡ್‌ಗಳು ಮತ್ತು ಡೇಟಾ ಆಧಾರಿತ ನಿರ್ಧಾರ ವ್ಯವಸ್ಥೆಗಳನ್ನು ಅಳವಡಿಸಿಕೊಂಡರೆ ಪಾರದರ್ಶಕತೆ ಮತ್ತು ಕಾರ್ಯಕ್ಷಮತೆ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.