ಸಚಿವ ಈಶ್ವರ್ ಖಂಡ್ರೆ ಮತ್ತಿತರರು 
ರಾಜ್ಯ

ಬೆಂಗಳೂರಿನಲ್ಲಿ 153 ಎಕರೆ ವಿಶಾಲ ಪ್ರದೇಶದಲ್ಲಿ ಬೃಹತ್ ಜೈವಿಕ ಉದ್ಯಾನ; 50 ಕೋಟಿ ರೂ ಬಿಡುಗಡೆ: ಈಶ್ವರ್ ಖಂಡ್ರೆ

ಮಳೆಯ ಮಾರುತಗಳನ್ನು ತಡೆದು ದೇಶಾದ್ಯಂತ ವ್ಯಾಪಕವಾಗಿ ಮಳೆ ಸುರಿಸುವಂತೆ ಮಾಡುವ ಪಶ್ಚಿಮ ಘಟ್ಟಗಳನ್ನು ಉದ್ದಿಮೆದಾರರು ಕೇವಲ ಒಂದು ಸಂಪನ್ಮೂಲವಾಗಿ ನೋಡದೆ, ಭವಿಷ್ಯದ ಪೀಳಿಗೆಯ ಜೀವನಾಡಿಯಾಗಿ ನೋಡಬೇಕು ಎಂದು ಈಶ್ವರ್ ಖಂಡ್ರೆ ಹೇಳಿದರು.

ಬೆಂಗಳೂರು: ಪ್ರಕೃತಿ, ಪರಿಸರ ಸಂರಕ್ಷಣೆ ಹಾಗೂ ಹಸಿರು ಹೊದಿಕೆ ಹೆಚ್ಚಳದಲ್ಲಿ ಸುಸ್ಥಿರ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪಾತ್ರ ಹಿರಿದಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್.ಕೆ.ಸಿಸಿಐ) ಆಯೋಜಿಸಿದ್ದ ಜಾಗತಿಕ ಸುಸ್ಥಿರ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಶೃಂಗಸಭೆ 2026ರ ಪೂರ್ವಭಾವಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ನಾವಿಂದು, ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ಬದಲಾವಣೆಯ ಪರಿಣಾಮಗಳ ಕಾಲಘಟ್ಟದಲ್ಲಿ ನಿಂತಿದ್ದು, ಈ ಸಂದರ್ಭದಲ್ಲಿ ಸುಸ್ಥಿರ ಅಭಿವೃದ್ಧಿ, ಹವಾಮಾನ ಚೇತರಿಕೆ ಮತ್ತು ಸಮಗ್ರ ಪ್ರಗತಿಯ ಕಾರ್ಯತಂತ್ರಕ್ಕೆ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಚಾಲಕಶಕ್ತಿಯಾಗಿದೆ ಎಂದರು.

ಕರ್ನಾಟಕವು ಈ ಪಯಣದಲ್ಲಿ ವಿಶಿಷ್ಟ ಸ್ಥಾನದಲ್ಲಿದೆ. ಜಾಗತಿಕ ಜೀವವೈವಿಧ್ಯತೆಯ ಅದ್ಭುತ ತಾಣವಾದ ಪಶ್ಚಿಮ ಘಟ್ಟಗಳನ್ನು ಹೊಂದಿದ್ದು, ಹಲವು ಬಗೆಯ ವಿಶಿಷ್ಟ ಸಸ್ಯ ಸಂಕುಲ, ಪ್ರಾಣಿ ಸಂಕುಲ, ಪಕ್ಷಿ ಸಂಕುಲ ಹಾಗೂ ಕೀಟ ಸಂಕುಲಗಳ ತಾಣವಾದ ಈ ಸಮೃದ್ಧ ಕಾನನವನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ಪಶ್ಚಿಮ ಘಟ್ಟ ಭವಿಷ್ಯದ ಪೀಳಿಗೆಯ ಜೀವನಾಡಿ: ಹಲವು ಜೀವನದಿಗಳ ಮೂಲವೇ ಪಶ್ಚಿಮಘಟ್ಟವಾಗಿದ್ದು, ಮಳೆಯ ಮಾರುತಗಳನ್ನು ತಡೆದು ದೇಶಾದ್ಯಂತ ವ್ಯಾಪಕವಾಗಿ ಮಳೆ ಸುರಿಸುವಂತೆ ಮಾಡುವ ಪಶ್ಚಿಮ ಘಟ್ಟಗಳನ್ನು ಉದ್ದಿಮೆದಾರರು ಕೇವಲ ಒಂದು ಸಂಪನ್ಮೂಲವಾಗಿ ನೋಡದೆ, ಭವಿಷ್ಯದ ಪೀಳಿಗೆಯ ಜೀವನಾಡಿಯಾಗಿ ನೋಡಬೇಕು ಎಂದು ಹೇಳಿದರು.

ಹಸಿರು ಹೊದಿಕೆ ಹೆಚ್ಚಳಕ್ಕೆ ಸಿಎಸ್ಆರ್: ಬೆಂಗಳೂರು ನಗರ ಒಂದು ಕಾಲದಲ್ಲಿ ನಿವೃತ್ತರ ಸ್ವರ್ಗ, ಹವಾನಿಯಂತ್ರಿತ ನಗರ ಎಂಬ ಖ್ಯಾತಿ ಪಡೆದಿತ್ತು. ಇಂದು ಬೆಂಗಳೂರು ಕೂಡ ಕಾಂಕ್ರೀಟ್ ಕಾಡಾಗುತ್ತಿದ್ದು, ತಾಪಮಾನದ ಏರಿಕೆಯ ಅನುಭವ ಆಗುತ್ತಿದೆ. ಬೆಂಗಳೂರು ನಗರದಲ್ಲಿ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಧೂಳು, ಹೊಗೆಯಿಂದಾಗಿ ವಾಯುಗುಣಮಟ್ಟವೂ ಕುಸಿಯುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರ ದೆಹಲಿಯಂತೆ ಮತ್ತೊಂದು ಗ್ಯಾಸ್ ಚೇಂಬರ್ ಆಗದಂತೆ ತಡೆಯಲು ಈಗಿನಿಂದಲೇ ಕ್ರಮ ವಹಿಸುವುದು ಅತ್ಯಗತ್ಯ ಎಂದರು.

ಬೆಂಗಳೂರಿನಲ್ಲಿ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಬಳಿಕ ಸರಿ ಸುಮಾರು ಶತಮಾನದ ತರುವಾಯ 153 ಎಕರೆ ವಿಶಾಲ ಪ್ರದೇಶದಲ್ಲಿ ಬೃಹತ್ ಜೈವಿಕ ಉದ್ಯಾನ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಬೆಂಗಳೂರು ಉತ್ತರ ತಾಲೂಕು ಯಲಹಂಕ ಬಳಿಯ ಮಾದಪ್ಪನಹಳ್ಳಿಯಲ್ಲಿ ವಿಶ್ವಗುರು ಬಸವಣ್ಣ ಬೃಹತ್ ಜೈವಿಕ ಉದ್ಯಾನ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದಕ್ಕಾಗಿ 50 ಕೋಟಿ ರೂ. ಬಿಡುಗಡೆಯಾಗಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ಬೆಂಗಳೂರು ನಗರದಲ್ಲಿ ಇಂತಹ ಒಂದು ಬೃಹತ್ ಉದ್ಯಾನ ನಿರ್ಮಾಣಕ್ಕೆ ನೀವೆಲ್ಲರೂ ಕೈಜೋಡಿಸಬೇಕು. ಸಿಎಸ್.ಆರ್. ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಅರಣ್ಯೀಕರಣ, ಕ್ಷೀಣಿಸಿದ ಅರಣ್ಯಗಳ ಮರುಸ್ಥಾಪನೆ ಮತ್ತು ನಗರ ಹಸಿರು ಹೊದಿಕೆ ಹೆಚ್ಚಳದಂತಹ ಉಪಕ್ರಮಗಳಲ್ಲಿ ಕೈಗಾರಿಕೋದ್ಯಮಿಗಳು ಸಕ್ರಿಯವಾಗಿ ಭಾಗವಹಿಸಿದರೆ, ಅದು ಮುಂದಿನ ಪೀಳಿಗೆಗೆ ಶುದ್ಧ ಗಾಳಿಯ, ನಿರ್ಮಲ ಪರಿಸರದ, ಸುಗಮ ಜೀವನವನ್ನು ಖಾತ್ರಿ ಪಡಿಸುತ್ತವೆ ಎಂದ ಈಶ್ವರ ಖಂಡ್ರೆ, ಸಾರ್ವಜನಿಕರು, ತಮ್ಮ ಮನೆಯ ಸೌಂದರ್ಯಕ್ಕೆ ಅಡ್ಡಿ ಯಾಗುತ್ತದೆ, ಮನೆಯ ಮುಂದೆ ಎಲೆ ಉದುರುತ್ತದೆ ಎಂದು ಮರ, ಗಿಡ ಕಡಿಯದೆ, ಹಸಿರು ಉಳಿಸಬೇಕು. ಇಲ್ಲವಾದರೆ ಮುಂದೆ ಉಸಿರಾಟಕ್ಕೂ ಕಷ್ಟ ಪಡಬೇಕಾಗುತ್ತದೆ ಎಂದು ಹೇಳಿದರು.

ನಾವು ತಂತ್ರಜ್ಞಾನ ಯುಗದಲ್ಲಿದ್ದೇವೆ. ಉಪಗ್ರಹ ಮೇಲ್ವಿಚಾರಣೆ ಮತ್ತು ಕೃತಕ ಬುದ್ಧಿಮತ್ತೆ ಚಾಲಿತ ಅರಣ್ಯ ನಿರ್ವಹಣೆಯಿಂದ ಹಿಡಿದು ನೀರಿನ ಸಂರಕ್ಷಣೆ ಮತ್ತು ವನ್ಯಜೀವಿಗಳ ಚಲನವಲನದ ಮೇಲಿನ ನಿಗಾಕ್ಕೆ ತಂತ್ರಜ್ಞಾನ ಹೊಸ ಪರಿಹಾರವಾಗಿದೆ. ಈ ಅತ್ಯಾಧುನಿಕ ಸೌಲಭ್ಯ ಅಳವಡಿಸಲು ಉಪಕರಣಗಳ ಖರೀದಿಯಲ್ಲೂ ಸಿಎಸ್ಆರ್ ನಿಧಿ ಉಪಯುಕ್ತವಾಗಿದೆ ಎಂದರು.

ಜೀವನವೂ ಇರಬೇಕು, ಜೀವನೋಪಾಯವೂ ಇರಬೇಕು. ಪ್ರಕೃತಿಯೂ ಉಳಿಯಬೇಕು, ಜೀವನವೂ ನಡೆಯಬೇಕು. ಅಭಿವೃದ್ಧಿಯೂ ಆಗಬೇಕು. ಹಸಿರು ಉಳಿಸಿಕೊಂಡು, ಬೆಳೆಸಿಕೊಂಡು ಅಭಿವೃದ್ಧಿ ಸಾಧಿಸುವುದೇ ಸುಸ್ಥಿರತೆಯ ಮಂತ್ರ. – ಇದು ಇಂದಿನ ಅಗತ್ಯ ಮತ್ತು ಅನಿವಾರ್ಯ. ಈ ಹಾದಿಯಲ್ಲಿ ನಡೆಯಲು ಸರ್ಕಾರ ಬದ್ಧವಾಗಿದೆ. ಇದಕ್ಕೆ ಉದ್ದಿಮೆಗಳ ಸಹಕಾರ ನೀಡಬೇಕು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಸ್ರೇಲ್- ಲೆಬನಾನ್ ನಡುವೆ 10 ದಿನಗಳ ಕದನ ವಿರಾಮ, ಇದು ನಾನು ನಿಲ್ಲಿಸಿದ 10 ನೇ ಯುದ್ಧ- ಟ್ರಂಪ್

ಲೋಕಸಭೆಯ ಸ್ಥಾನಗಳು 850ಕ್ಕೆ ಏರಿಕೆಯಿಂದ ಏನು ಲಾಭ?: ಅಮಿತ್ ಶಾ ಹೇಳಿದ್ದಿಷ್ಟು...

ರಾಮ-ಲಕ್ಷ್ಮಣರು ಕದ್ದು ಹಣ್ಣು ತಿಂದರು, ಅದಕ್ಕೆ ಯುದ್ಧ ಆಯ್ತು: ನಗೆಪಾಟಲಿಗೀಡಾದ ಪ್ರಕಾಶ್ ರಾಜ್, Video

ದೇವಸ್ಥಾನಗಳಲ್ಲಿರುವ ಟನ್ ಗಟ್ಟಲೆ ಚಿನ್ನವನ್ನು ಹೊರತೆಗೆದು ಸಾರ್ವಜನಿಕ ಉದ್ದೇಶಕ್ಕೆ ಬಳಸಬೇಕು- ಫಾದರ್ ಪೌಲ್ ಥೆಲಕ್ಕಟ್

ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ ಸಲೀಂ ಸೇವಾವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ!

SCROLL FOR NEXT