ಶಿವಮೊಗ್ಗ: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ 2 ವರ್ಷದ ಮಗುವೊಂದು ಹಾವಿನ ಕಡಿತಕ್ಕೊಳಗಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ಸಾಗರ ಪಟ್ಟಣದ ಎಸ್‌ಎನ್ ನಗರದಲ್ಲಿ ನಡೆದಿದೆ.
ಎಸ್.ಎಸ್ ನಗರದ ಅಕ್ಷತಾ ಹಾಗೂ ಗಣೇಶ್ ದಂಪತಿ ಪುತ್ರ ಭವಿನ್ (2) ಮೃತ ಮಗು. ಅಕ್ಷತಾ ಮಗುವಿನೊಂದಿಗೆ ಸಾಗರದಲ್ಲಿನ ತವರು ಮನೆಗೆ ಬಂದಿದ್ದರು.
ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಮಗುವಿಗೆ ಹಾವು ಕಚ್ಚಿದೆ. ಮಗು ಅಳುವುದನ್ನು ಕಂಡು ಕುಟುಂಬಸ್ಥರು ಬಂದು ನೋಡಿದಾಗ ಹಾವು ಕಚ್ಚಿರುವುದು ತಿಳಿದು ಬಂದಿದೆ.
ಕೂಡಲೇ ಮಗುವನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಮಗು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ. ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.