ಬೆಂಗಳೂರು: ಬೆಂಗಳೂರು ನಗರದಲ್ಲಿ ಆಟೋ ಎಲ್‌ಪಿಜಿ (Auto LPG) ಬೇಡಿಕೆ ಏಕಾಏಕಿ ಹೆಚ್ಚಾದ ಹಿನ್ನೆಲೆ, Indian Oil Corporation ಮಹತ್ವದ ಕ್ರಮ ಕೈಗೊಂಡಿದ್ದು, ಸರಬರಾಜನ್ನು ಸುಮಾರು 300 ಶೇಕಡಾ ಹೆಚ್ಚಿಸಿದೆ.
ಖಾಸಗಿ ವಲಯದ ಸರಬರಾಜು ವ್ಯವಸ್ಥೆಯಲ್ಲಿನ ವ್ಯತ್ಯಯದಿಂದಾಗಿ ಉಂಟಾದ ಸಂಕಷ್ಟವನ್ನು ನಿಭಾಯಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಇಂಡಿಯನ್ ಆಯಿಲ್ ಸಂಸ್ಥೆ ತಿಳಿಸಿದೆ.
ಸಾಮಾನ್ಯವಾಗಿ ಬೆಂಗಳೂರಿನಲ್ಲಿ ದಿನಕ್ಕೆ ಸುಮಾರು 23 ಟನ್ ಆಟೋ ಎಲ್‌ಪಿಜಿ ಸರಬರಾಜು ಮಾಡಲಾಗುತ್ತಿತ್ತು. ಆದರೆ, ಏಪ್ರಿಲ್ 15ರಂದು ಈ ಪ್ರಮಾಣವು ಏಕಾಏಕಿ 75.53 ಟನ್‌ಗೆ ಏರಿಕೆಯಾಗಿದೆ. ಇದು ನಗರದಲ್ಲಿ ಬೇಡಿಕೆ ಎಷ್ಟು ತೀವ್ರವಾಗಿ ಏರಿಕೆಯಾಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಕೇವಲ ಬೆಂಗಳೂರು ಮಾತ್ರವಲ್ಲದೆ, ರಾಜ್ಯದೆಲ್ಲೆಡೆ ಇದೇ ಪರಿಸ್ಥಿತಿ ಮುಂದುವರಿದಿದೆ. ದಿನನಿತ್ಯದ ಸರಬರಾಜು 43.5 ಟನ್‌ನಿಂದ 83 ಟನ್‌ಗೆ ಏರಿಕೆಯಾಗಿದೆ.
ಈ ಬೇಡಿಕೆ ಏರಿಕೆಗೆ ಪ್ರಮುಖ ಕಾರಣ ಖಾಸಗಿ ಆಟೋ ಎಲ್‌ಪಿಜಿ ಪಂಪ್‌ಗಳ ಸ್ಥಗಿತ ಅಥವಾ ವ್ಯತ್ಯಯ ಉಂಟಾಗಿರುವುದು. ಬೆಂಗಳೂರಿನಲ್ಲಿ ಮತ್ತು ರಾಜ್ಯದಾದ್ಯಂತ ಆಟೋ ಎಲ್‌ಪಿಜಿ ಮಾರುಕಟ್ಟೆಯ ಸುಮಾರು 80 ಶೇಕಡಾ ಪಾಲನ್ನು ಖಾಸಗಿ ಸಂಸ್ಥೆಗಳು ಹೊಂದಿದ್ದವು. ಅವುಗಳಲ್ಲಿ ಬಹುತೇಕ ಪಂಪ್‌ಗಳು ಮುಚ್ಚಲ್ಪಟ್ಟಿರುವುದು ಅಥವಾ ಸರಬರಾಜು ಕಡಿಮೆಯಾಗಿರುವುದು ಗ್ರಾಹಕರನ್ನು ಸರ್ಕಾರಿ ಪಂಪ್‌ಗಳತ್ತ ಮುಖ ಮಾಡುವಂತೆ ಮಾಡಿದೆ.
ಇದರಿಂದ ಇಂಡಿಯನ್ ಆಯಿಲ್ ಪಂಪ್‌ಗಳಲ್ಲಿ ವಾಹನಗಳ ದೀರ್ಘ ಸಾಲುಗಳು ಪ್ರತೀನಿತ್ಯ ಕಂಡುಬರುತ್ತಿವೆ. ಆಟೋ ಚಾಲಕರು ಮತ್ತು ಇತರೆ ವಾಹನ ಚಾಲಕರು ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಆಟೋ ರಿಕ್ಷಾ ಚಾಲಕರಿಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈ ಸಂಕಷ್ಟವನ್ನು ನಿಭಾಯಿಸಲು ಇಂಡಿಯನ್ ಆಯಿಲ್ ಹಲವು ತುರ್ತು ಕ್ರಮಗಳನ್ನು ಕೈಗೊಂಡಿದೆ. ನಗರದಲ್ಲಿನ ಎಲ್ಲಾ ಆಟೋ ಎಲ್‌ಪಿಜಿ ಪಂಪ್‌ಗಳನ್ನು 24 ಗಂಟೆಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ. ಜೊತೆಗೆ, ಎಲ್‌ಪಿಜಿ ಬಾಟಲಿಂಗ್ ಘಟಕಗಳು ಮತ್ತು ಲೋಡಿಂಗ್ ಕೇಂದ್ರಗಳು ಕಳೆದ ಒಂದು ವಾರದಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಿವೆ. ಇದರಿಂದ ಸರಬರಾಜು ಸರಪಳಿಯಲ್ಲಿ ಯಾವುದೇ ಅಡಚಣೆ ಆಗದಂತೆ ನೋಡಿಕೊಳ್ಳಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಇಂಡಿಯನ್ ಆಯಿಲ್ ಸಂಸ್ಥೆ, ಸ್ವಲ್ಪ ಮಟ್ಟಿನ ಅಸೌಕರ್ಯ ಉಂಟಾಗಿರುವುದನ್ನು ಒಪ್ಪಿಕೊಂಡಿದ್ದು, ಪರಿಸ್ಥಿತಿ ಶೀಘ್ರದಲ್ಲೇ ಸ್ಥಿರಗೊಳ್ಳಲಿದೆ ಎಂದು ಭರವಸೆ ನೀಡಿದೆ.
ಬೇಡಿಕೆ–ಸರಬರಾಜು ಅಂತರವನ್ನು ಕಡಿಮೆ ಮಾಡಲು ಮತ್ತು ಗ್ರಾಹಕರಿಗೆ ನಿರಂತರ ಸೇವೆ ಒದಗಿಸಲು ಎಲ್ಲಾ ಸಾಧ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.