ಹುಬ್ಬಳ್ಳಿ: ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದ್ದ JCBಗೆ ಕಾರು ಢಿಕ್ಕಿಯಾದ ಪರಿಣಾಮ ಚಾಲಕನ ತಲೆ ಕಟ್ ಆದ ಧಾರುಣ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿ-ಕುಂದಗೋಳ ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ, ವೇಗದ ಕಾರು ಡಿಕ್ಕಿ ಹೊಡೆದ ಪರಿಣಾಮ ಜೆಸಿಬಿ ಆಪರೇಟರ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮೃತ ಜೆಸಿಬಿ ಚಾಲಕನನ್ನು ಸದಾನಂದ ಕಟೇಗಾರ ಎಂದು ಗುರುತಿಸಲಾಗಿದೆ.
32 ವರ್ಷದ ಸದಾನಂದ ಕಟೇಗಾರ ಶೇರವಾಡ ಗ್ರಾಮದ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಜೆಸಿಬಿ ಚಾಲಕನಾಗಿದ್ದ. ಏಪ್ರಿಲ್ 20, 2026 ರಂದು ಹುಬ್ಬಳ್ಳಿ-ಕುಂದಗೋಳ ರಸ್ತೆಯಲ್ಲಿ ಜೆಸಿಬಿ ಕೆಟ್ಟು ನಿಂತಿತ್ತು. ಹೀಗಾಗಿ ಸದಾನಂದ ರಸ್ತೆಬದಿಯಲ್ಲೇ ಅದರ ರಿಪೇರಿಕಾರ್ಯ ನಡೆಸುತ್ತಿದ್ದರು.
ಇದೇ ಸಂದರ್ಭದಲ್ಲೇ ವೇಗವಾಗಿ ಬಂದ ಕಾರೊಂದು ನೇರವಾಗಿ ಸದಾನಂದಗೆ ಢಿಕ್ಕಿಯಾಗಿದೆ. ಕಾರು ಢಿಕ್ಕಿಯಾದ ರಭಸಕ್ಕೆ ಸದಾನಂದ ತಲೆ ಕಟ್ ಆಗಿ ಕಾರಿನ ಎಂಜಿನ್ ಮೇಲೆ ಬಿದ್ದಿದೆ. ರುಂಡ-ಮುಂಡ ಬೇರೆಯಾಗಿ ಸದಾನಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಾತ್ರವಲ್ಲದೇ ಕಾರಿನಲ್ಲಿದ್ದ ಐವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.