ಕಾಮನ್‌ವೆಲ್ತ್ ವೇದಿಕೆಯಲ್ಲಿ ದಿನಗೂಲಿ ಕಾರ್ಮಿಕರ ಮಗ: ಗಾಯದ ಸಮಸ್ಯೆ ಗೆದ್ದು ಗ್ಲಾಸ್ಗೋಗೆ ಹಾರಿದ ಬೆಂಗಳೂರಿನ Yashas Palaksha

ತಮ್ಮ ಅಥ್ಲೆಟಿಕ್ಸ್ ಪಯಣದ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ಯಶಸ್, ಕ್ರೀಡೆಯೇ ತಮ್ಮ ಕನಸಾಗಿತ್ತು ಎಂದು ಹೇಳುತ್ತಾರೆ.
Bengaluru athlete Yashas Palaksha
ಯಶಸ್ ಪಾಲಾಕ್ಷ
Updated on

ಬೆಂಗಳೂರು: ದಿನಗೂಲಿ ಕಾರ್ಮಿಕರ ಕುಟುಂಬದಲ್ಲಿ ಜನಿಸಿ, ಆರ್ಥಿಕ ಸಂಕಷ್ಟಗಳ ನಡುವೆ ಬೆಳೆದ ಬೆಂಗಳೂರಿನ 24 ವರ್ಷದ ಅಥ್ಲೀಟ್ ಯಶಸ್ ಪಲಾಕ್ಷ ಇಂದು ಭಾರತದ ಅತ್ಯಂತ ವೇಗದ ಸಕ್ರಿಯ 400 ಮೀ. ಹರ್ಡಲ್ಸ್ ಓಟಗಾರನಾಗಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.

ಹಲವು ಗಂಭೀರ ಗಾಯಗಳನ್ನು ಎದುರಿಸಿ, ನಿರಂತರ ಹಿನ್ನಡೆಗಳನ್ನು ಮೀರಿ ಅವರು ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್ 2026ಕ್ಕೆ ಅರ್ಹತೆ ಪಡೆದಿರುವುದು ಸ್ಫೂರ್ತಿದಾಯಕ ಕಥೆಯಾಗಿದೆ. ತಮ್ಮ ಅಥ್ಲೆಟಿಕ್ಸ್ ಪಯಣದ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ಯಶಸ್, ಕ್ರೀಡೆಯೇ ತಮ್ಮ ಕನಸಾಗಿತ್ತು ಎಂದು ಹೇಳುತ್ತಾರೆ.

"ನಮ್ಮ ಕುಟುಂಬದವರು ಪದವಿ ಪಡೆಯುತ್ತಿದ್ದರು. ಆದರೆ ಅದು ನನಗೆ ಸರಿಯಾದ ದಾರಿಯಲ್ಲ ಎಂದು ನನಗೆ ಗೊತ್ತಿತ್ತು. ವ್ಯವಹಾರ ಆರಂಭಿಸಲು ಅಥವಾ ಕ್ರಿಕೆಟ್ ಕಿಟ್ ಖರೀದಿಸಲು ಹಣ ಇರಲಿಲ್ಲ. ಆದರೆ ಕ್ರೀಡೆಯ ಬಗ್ಗೆ ಅಪಾರ ಆಸಕ್ತಿ ಇತ್ತು. ಹೆಚ್ಚು ಹಣ ಖರ್ಚು ಮಾಡದೆ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡುವ ಮಾರ್ಗ ಹುಡುಕುತ್ತಿದ್ದಾಗ ಅಥ್ಲೆಟಿಕ್ಸ್ ಸಿಕ್ಕಿತು" ಎಂದು ಅವರು ಹೇಳಿದ್ದಾರೆ.

Bengaluru athlete Yashas Palaksha
CWG 2026: ಗ್ಲಾಸ್ಗೋದಲ್ಲಿ ಮೀರಾಬಾಯಿ ಚಾನು ಐತಿಹಾಸಿಕ ಸಾಧನೆ; ದೇಶದಾದ್ಯಂತ ಸಂಭ್ರಮ, ಪ್ರಧಾನಿ ಮೋದಿ ಶ್ಲಾಘನೆ

ಫೆಡರೇಷನ್ ಕಪ್‌ನಲ್ಲಿ ಐತಿಹಾಸಿಕ ಸಾಧನೆ

ಮೇ ತಿಂಗಳಲ್ಲಿ ರಾಂಚಿಯಲ್ಲಿ ನಡೆದ ಫೆಡರೇಷನ್ ಕಪ್‌ನಲ್ಲಿ ಯಶಸ್ ಪಲಾಕ್ಷ 49.00 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದಿದ್ದರು. ಇದು ಭಾರತೀಯ 400 ಮೀ. ಹರ್ಡಲ್ಸ್ ಇತಿಹಾಸದಲ್ಲೇ ಎರಡನೇ ಅತ್ಯುತ್ತಮ ಸಮಯವಾಗಿದೆ. ಈ ಸಾಧನೆಯ ಮೂಲಕ ಅವರು ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆದುಕೊಂಡರು.

"ರಾಂಚಿ ಟ್ರ್ಯಾಕ್ ನನಗೆ ತುಂಬಾ ಇಷ್ಟ. ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಇತ್ತು. ಆದರೆ ಭಾರತದ ಅಗ್ರ ಹರ್ಡಲರ್‌ಗಳ ವಿರುದ್ಧ ಸ್ಪರ್ಧಿಸುತ್ತಿದ್ದುದರಿಂದ ಮೊದಲ ಅಥವಾ ಎರಡನೇ ಸ್ಥಾನ ಪಡೆಯಲೇಬೇಕೆಂಬ ಒತ್ತಡವೂ ಇತ್ತು," ಎಂದು ಅವರು ನೆನಪಿಸಿಕೊಂಡಿದ್ದಾರೆ.

"ನಾನು ಮೊದಲೇ ಸಾಕಷ್ಟು ಸೋಲುಗಳನ್ನು ಕಂಡಿದ್ದರಿಂದ 'ಏನಾಗುತ್ತದೋ ನೋಡೋಣ' ಎಂಬ ಮನೋಭಾವದಿಂದ ಸ್ಪರ್ಧೆಗೆ ಇಳಿದೆ. ಭವಿಷ್ಯದ ಬಗ್ಗೆ ಚಿಂತಿಸುವುದಕ್ಕಿಂತ ವರ್ತಮಾನದಲ್ಲಿ ಬದುಕುವುದೇ ಯಶಸ್ಸಿನ ಗುಟ್ಟು," ಎಂದು ಹೇಳಿದ್ದಾರೆ.

ಮೂರು ವರ್ಷ ಗಾಯಗಳ ಸರಣಿ

ಯಶಸ್ ಅವರ ವೃತ್ತಿಜೀವನದಲ್ಲಿ 2023ರಿಂದ ಗಾಯಗಳ ಸರಣಿ ಆರಂಭವಾಯಿತು. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಗಾಯಗೊಂಡ ಬಳಿಕ ಚೇತರಿಸಿಕೊಂಡರೂ, ಏಷ್ಯನ್ ಗೇಮ್ಸ್‌ನಲ್ಲಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟರು.

ನಂತರ 2024ರ ಒಲಿಂಪಿಕ್ಸ್ ಶಿಬಿರದಲ್ಲಿ ಹ್ಯಾಮ್‌ಸ್ಟ್ರಿಂಗ್ ಗಾಯದಿಂದ ಇಡೀ ವರ್ಷವೇ ಕಳೆದುಕೊಳ್ಳಬೇಕಾಯಿತು. ಪರಿಣಾಮ ಪ್ಯಾರಿಸ್ ಒಲಿಂಪಿಕ್ಸ್ ಕನಸು ಕೈತಪ್ಪಿತು. 2025ರ ವಿಶ್ವ ಚಾಂಪಿಯನ್‌ಷಿಪ್ ಮತ್ತು ಏಷ್ಯನ್ ಚಾಂಪಿಯನ್‌ಷಿಪ್ ಮೇಲೆ ಗಮನಹರಿಸಿದ್ದಾಗ ಮತ್ತೆ ಅಕಿಲೀಸ್ ಟೆಂಡೊನೈಟಿಸ್ ಸಮಸ್ಯೆ ಎದುರಾಯಿತು ಎಂದು ಹೇಳಿದರು.

Bengaluru athlete Yashas Palaksha
CWG 2026: ಕಂಚು ಪದಕ ಗೆದ್ದ ಝಂಡು ಕುಮಾರ್; ತರಕಾರಿ ಮಾರುತ್ತಿದ್ದ ಹುಡುಗನ ಸಾಧನೆ; ಕ್ರೀಡಾಕೂಟದಲ್ಲಿ ಖಾತೆ ತೆರೆದ ಭಾರತ!

'ಹೈಜಂಪ್‌ನಲ್ಲೇ ಮುಂದುವರಿಯಬೇಕಿತ್ತೇ?' ಎಂಬ ಪ್ರಶ್ನೆ

ಆರಂಭದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹೈಜಂಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಯಶಸ್, ಲಾಕ್‌ಡೌನ್ ಸಮಯದಲ್ಲಿ ಕೋಚ್ ಸಲಹೆಯ ಮೇರೆಗೆ 400 ಮೀಟರ್ ಓಟಕ್ಕೆ ಬದಲಾದರು. "400 ಮೀಟರ್‌ನಲ್ಲಿ ಮೂರು ಓಟಗಳಲ್ಲಿ ಭಾಗವಹಿಸಲು ಇಷ್ಟವಿರಲಿಲ್ಲ. ಹೀಗಾಗಿ ಹರ್ಡಲ್ಸ್ ಪ್ರಯತ್ನಿಸಿದೆ. ಹೈಜಂಪ್ ಮತ್ತು ಹರ್ಡಲ್ಸ್ ಎರಡರಲ್ಲೂ ಒಂದೇ ರೀತಿಯ ಲಯ ಇರುವುದರಿಂದ ಆರಂಭ ಸುಲಭವಾಗಿತ್ತು. ಆದರೆ 2023ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಗಾಯಗೊಂಡಾಗ 'ಹೈಜಂಪ್‌ನಲ್ಲೇ ಮುಂದುವರಿಯಬೇಕಿತ್ತೇ?' ಎಂದು ಅನಿಸಿತ್ತು" ಎಂದು ಅವರು ಹೇಳಿದ್ದಾರೆ.

'ನನಗೆ ಕ್ರೀಡೆಯೇ ಜೀವನ'

ಎಲ್ಲಾ ಹಿನ್ನಡೆಗಳ ನಡುವೆಯೂ ಅವರನ್ನು ಮುನ್ನಡೆಸಿದ್ದು ಕ್ರೀಡೆಯ ಮೇಲಿನ ಪ್ರೀತಿಯೇ ಎಂದು ಯಶಸ್ ಹೇಳುತ್ತಾರೆ. "ನನಗೆ ಈ ಕ್ರೀಡೆ ತುಂಬಾ ಇಷ್ಟ. ಯಾವುದನ್ನಾದರೂ ಮನಸಾರೆ ಪ್ರೀತಿಸಿದರೆ ಅದನ್ನು ಸದಾ ಸಕಾರಾತ್ಮಕವಾಗಿ ನೋಡುತ್ತೀರಿ. ನಾನು ಇನ್ನೂ ಯುವಕ. 33 ವರ್ಷ ವಯಸ್ಸಿನವರೆಗೂ ಆಡಬಹುದು ಎಂದು ನನ್ನನ್ನು ನಾನು ಪ್ರೋತ್ಸಾಹಿಸಿಕೊಳ್ಳುತ್ತೇನೆ" ಎಂದು ಅವರು ಹೇಳಿದ್ದಾರೆ.

ಗುರಿ ಒಂದೇ – ಗಾಯಗಳಿಂದ ದೂರ ಉಳಿಯಬೇಕು

ಪ್ರಸ್ತುತ ಮುಂಬೈನಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್‌ಗೆ ಸಿದ್ಧತೆ ನಡೆಸುತ್ತಿರುವ ಯಶಸ್, ತಮ್ಮ ತಂತ್ರವನ್ನು ಮತ್ತಷ್ಟು ಸುಧಾರಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ. "ನನ್ನ ಮೊದಲ ಗುರಿ ಗಾಯಗಳಿಂದ ದೂರ ಉಳಿಯುವುದು. ಜೊತೆಗೆ ತಂತ್ರವನ್ನು ಇನ್ನಷ್ಟು ಉತ್ತಮಗೊಳಿಸಿ 0.5 ರಿಂದ 0.6 ಸೆಕೆಂಡ್‌ಗಳಷ್ಟು ಸಮಯ ಕಡಿಮೆ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ಉಳಿದದ್ದು ಚಿನ್ನ, ಬೆಳ್ಳಿ ಅಥವಾ ಕಂಚು ಅದೃಷ್ಟದ ಮೇಲೆ ಅವಲಂಬಿತವಾಗಿದೆ" ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com