ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ನಕಲಿ ವಾಟ್ಸಾಪ್ ಖಾತೆಗಳನ್ನು ಸೃಷ್ಟಿಸಿ ಹಣಕಾಸು ಸಹಾಯ ಕೇಳುತ್ತಿರುವ ಸಂಘಟಿತ ಸೈಬರ್ ವಂಚನೆ ಜಾಲವೊಂದು ನಗರದಲ್ಲಿ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ.
ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೇರಿದಂತೆ ಇತರೆ ನಗರ ಪಾಲಿಕೆ ಆಯುಕ್ತರ ಚಿತ್ರಗಳನ್ನು ಬಳಸಿಕೊಂಡು ನಕಲಿ ಪ್ರೊಫೈಲ್‌ಗಳನ್ನು ಸೃಷ್ಟಿಸಲಾಗಿದೆ. ಈ ಮೂಲಕ ಅಧಿಕಾರಿಗಳ ಸಂಪರ್ಕದಲ್ಲಿರುವ ಸಿಬ್ಬಂದಿಗೆ ಸಂದೇಶಗಳನ್ನು ಕಳುಹಿಸಿ ಹಣಕಾಸು ಸಹಾಯ ಅಥವಾ ವೈಯಕ್ತಿಕ ಮಾಹಿತಿಯನ್ನು ಕೇಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಕಲಿ ಖಾತೆಗಳಿಂದ ಪೂರ್ವ ನಗರ ಆಯುಕ್ತ ಡಿ.ಎಸ್. ರಮೇಶ್, ಉತ್ತರ ನಗರ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್, ದಕ್ಷಿಣ ನಗರ ಆಯುಕ್ತ ಕೆ.ಎನ್. ರಮೇಶ್ ಮತ್ತು ಕೇಂದ್ರ ನಗರ ಆಯುಕ್ತ ರಾಜೇಂದ್ರ ಚೋಳನ್ ಅವರ ಚಿತ್ರವನ್ನು ಡಿಪಿಯಲ್ಲಿ ಬಳಸಿಕೊಳ್ಳಲಾಗಿದ್ದು, ಇವರ ಹೆಸರಿನಲ್ಲಿಯೂ ಸಂದೇಶಗಳು ರವಾನಿಸಿರುವುದಾಗಿ ತಿಳಿದುಬಂದಿದೆ.
ಭಾರತೀಯ ಮತ್ತು ವಿದೇಶಿ ಮೊಬೈಲ್ ಸಂಖ್ಯೆಗಳಾದ +91 7631678095 ಮತ್ತು +62 815580651 ಬಳಸಿ ಈ ವಂಚನೆ ನಡೆಸಲಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ನಕಲಿ ಖಾತೆಗಳಲ್ಲಿ ಡಿಪಿ ಚಿತ್ರಗಳನ್ನು ಬದಲಾಯಿಸಿ, ಅಧಿಕಾರಿಗಳಂತೆ ನಟಿಸಿ ವಿಶ್ವಾಸ ಗಳಿಸುವ ಪ್ರಯತ್ನವೂ ನಡೆದಿದೆ.
ಸಂದೇಶಗಳಲ್ಲಿ “ಹಣಕಾಸು ಸಹಾಯ ಬೇಕು”, “ತುರ್ತು ಅಗತ್ಯ ಇದೆ” ಎಂಬ ರೀತಿಯ ಸಂದೇಶ ರವಾನಿಸಲಾಗಿದ್ದು, ಕೆಲವರಿಗೆ ನೇರವಾಗಿ ಖಾತೆ ವಿವರಗಳು ಅಥವಾ ಹಣ ವರ್ಗಾವಣೆ ಮಾಡುವಂತೆ ಸೂಚಿಸಿರುವುದೂ ಕಂಡುಬಂದಿದೆ. ಈ ಬಗ್ಗೆ ಅನುಮಾನಗೊಂಡ ಕೆಲ ಅಧಿಕಾರಿಗಳು ತಕ್ಷಣವೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ, ದೂರು ದಾಖಲಿಸಿದ್ದಾರೆ.
ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ ಹಲವು ಎಫ್‌ಐಆರ್‌ಗಳು ದಾಖಲಾಗಿವೆ. ಜಿಬಿಎ ಮುಖ್ಯ ಆಯುಕ್ತರಿಂದ 15-04-2026 ಹಾಗೂ 17-04-2026 ರಂದು ದೂರುಗಳು ದಾಖಲಾಗಿದ್ದಾರೆ. ಉತ್ತರ ನಗರ ಪಾಲಿಕೆ ಆಯುಕ್ತರು: 22-04-2026 ರಂದು, ಪೂರ್ವ ನಗರ ಪಾಲಿಕೆ ಆಯುಕ್ತರು: 23-04-2026 ರಂದು ಹಾಗೂ ಕೇಂದ್ರ ನಗರ ಪಾಲಿಕೆ ಆಯುಕ್ತರು: 23-04-2026 ರಂದು ದೂರು ದಾಖಲಾಗಿದೆ. ದಕ್ಷಿಣ ನಗರ ಪಾಲಿಕೆ ಸಂಬಂಧಿತ ದೂರು ಪ್ರಕ್ರಿಯೆ ಇನ್ನೂ ನಡೆಯುತ್ತಿದೆ.
ಕೆಲ ಅಪರಿಚಿತ ವ್ಯಕ್ತಿಗಳು ಜಿಬಿಎ ಮುಖ್ಯ ಆಯುಕ್ತರ ಹೆಸರಿನಲ್ಲಿ ಭಾರತೀಯ ಮೊಬೈಲ್ ಸಂಖ್ಯೆ +91 7631678095 ಹಾಗೂ ಅಂತರರಾಷ್ಟ್ರೀಯ ಸಂಖ್ಯೆ +62 815580651 ರಿಂದ ಸಂದೇಶಗಳನ್ನು ಕಳುಹಿಸಿರುವುದು ತಿಳಿದುಬಂದಿದೆ. ಅದೇ ರೀತಿ ಪೂರ್ವ ನಗರ ಪಾಲಿಕೆ ಆಯುಕ್ತರ ಹೆಸರಿನಲ್ಲಿ +62 85124911356 ಸಂಖ್ಯೆಯಿಂದ, ಉತ್ತರ ನಗರ ಪಾಲಿಕೆ ಆಯುಕ್ತರ ಹೆಸರಿನಲ್ಲಿ +62 81913935100 ಸಂಖ್ಯೆಯಿಂದ ಹಾಗೂ ಕೇಂದ್ರ ಮತ್ತು ದಕ್ಷಿಣ ನಗರ ಪಾಲಿಕೆ ಆಯುಕ್ತರ ಹೆಸರಿನಲ್ಲಿ +62 83197536332 ಸಂಖ್ಯೆಗಳಿಂದಲೂ ಅಧಿಕಾರಿಗಳಿಗೆ ಸಂದೇಶಗಳು ಕಳುಹಿಸಲಾಗುತ್ತಿದೆ.
ಮಹದೇವಪುರ ವಿಭಾಗದ ಜಂಟಿ ಆಯುಕ್ತೆ ದಾಕ್ಷಾಯಿಣಿ ಕೆ ಅವರು ಕೂಡ ತಮಗೂ ನಕಲಿ ಸಂದೇಶಗಳು ಬಂದಿರುವುದಾಗಿ ತಿಳಿಸಿದ್ದಾರೆ.
ಇದರ ಬೆನ್ನಲ್ಲೇ ಅಧಿಕಾರಿಗಳು ಎಲ್ಲಾ ಸಿಬ್ಬಂದಿಗೆ ಸೂಚನೆ ನೀಡಿದ್ದು, ಯಾವುದೇ ಅಪರಿಚಿತ ವಾಟ್ಸಾಪ್ ಸಂದೇಶ ಅಥವಾ ಕರೆಗಳಿಗೆ ಪ್ರತಿಕ್ರಿಯಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರೂ ಸಹ ಇಂತಹ ವಂಚನೆಗಳಿಗೆ ಒಳಗಾಗಬಾರದು ಎಂದು ಮನವಿ ಮಾಡಿದೆ.
ಸೈಬರ್ ಕ್ರೈಂ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ವಂಚನೆ ಜಾಲದ ಮೂಲ ಹಾಗೂ ತಾಂತ್ರಿಕ ಮೂಲಗಳನ್ನು ಪತ್ತೆಹಚ್ಚುವ ಕಾರ್ಯ ಮುಂದುವರೆಸಿದೆ. ಜೊತೆಗೆ, ವಾಟ್ಸಾಪ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅಧಿಕಾರಿಗಳ ಹೆಸರಿನಲ್ಲಿ ನಡೆಯುವ ಇಂತಹ ನಕಲಿ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಸಾರ್ವಜನಿಕರು ಯಾವುದೇ ಅನುಮಾನಾಸ್ಪದ ಸಂದೇಶಗಳನ್ನು ತಕ್ಷಣವೇ GBA ಹೆಲ್ಪ್‌ಲೈನ್ 1533 ಅಥವಾ ಸಮೀಪದ ಪೊಲೀಸ್ ಠಾಣೆಗೆ ತಿಳಿಸುವಂತೆ ಮನವಿ ಮಾಡಿದೆ.