ಹುಬ್ಬಳ್ಳಿ/ಹಂಪಿ: ವಿಶ್ವಪ್ರಸಿದ್ಧ ಪಾರಂಪರಿಕ ತಾಣ ಹಂಪಿಯಲ್ಲಿ ಪ್ರವಾಸಿಗರು ಹೆಚ್ಚೆಚ್ಚು ಫೋಟೋಗಳನ್ನು ತೆಗೆಯಲು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಫೋಟೋಗ್ರಫಿ ನಿಯಮಗಳನ್ನು ಸರಳೀಕರಿಸಿದೆ.
ಹಂಪಿ ಹಾಗೂ ಸುತ್ತಮುತ್ತಲಿನ ಪಾರಂಪರಿಕ ಸ್ಥಳಗಳಲ್ಲಿ ಪ್ರವಾಸಿಗರ ಮೇಲಿದ್ದ ಕ್ಯಾಮೆರಾ ಶುಲ್ಕವನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ.
ಇದರಿಂದ ಇನ್ನು ಮುಂದೆ ಪ್ರವಾಸಿಗರು ತಮ್ಮ ಕೈಯಲ್ಲಿರುವ ಯಾವುದೇ ಕ್ಯಾಮೆರಾ ಅಥವಾ ಮೊಬೈಲ್ ಮೂಲಕ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಫೋಟೋಗಳನ್ನು ತೆಗೆದುಕೊಳ್ಳಬಹುದಾಗಿದೆ.
ಇದಕ್ಕೂ ಮುನ್ನ ವಿಜಯ ವಿಠ್ಠಲ ದೇವಾಲಯ ಸಂಕೀರ್ಣ ಸೇರಿದಂತೆ ಕೆಲವು ಸ್ಥಳಗಳಲ್ಲಿ ಪ್ರತಿ ಕ್ಯಾಮೆರಾಗೆ ರೂ.50 ಶುಲ್ಕ ವಿಧಿಸಲಾಗುತ್ತಿತ್ತು. ಈಗ ಆ ಎಲ್ಲಾ ಶುಲ್ಕಗಳನ್ನು ತೆಗೆದುಹಾಕಲಾಗಿದೆ.
ಆದರೆ, ಟ್ರೈಪಾಡ್ ಮತ್ತು ಡ್ರೋನ್‌ಗಳನ್ನು ಬಳಸಲು ಬಯಸುವ ಛಾಯಾಗ್ರಾಹಕರು ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಈ ಕುರಿತ ನಿಯಮಗಳು ಮುಂದುವರೆಯಲಿದ್ದು, ಚಲನಚಿತ್ರ ಚಿತ್ರೀಕರಣಕ್ಕೂ ಪ್ರತ್ಯೇಕ ಅನುಮತಿ ಕಡ್ಡಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಳ್ಳಾರಿಯ ಹಿರಿಯ ಪ್ರವಾಸೋದ್ಯಮ ಅಧಿಕಾರಿಯೊಬ್ಬರು ಮಾತನಾಡಿ, ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಇತ್ತೀಚಿಗೆ ಹಂಪಿ ಭೇಟಿ ನೀಡಿದ್ದ ವೇಳೆ ಕ್ಯಾಮೆರಾ ಮೇಲಿನ ಶುಲ್ಕ ತೆಗೆದು ಹಾಕುವಂತೆ ಸೂಚನೆ ನೀಡಿದ್ದರು. ಪಾರಂಪರಿಕ ತಾಣಗಳಲ್ಲಿ ಕ್ಯಾಮೆರಾ ಶುಲ್ಕ ವಿಧಿಸುವುದು ಪ್ರವಾಸೋದ್ಯಮಕ್ಕೆ ಅಡ್ಡಿಯಾಗುತ್ತದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಹಂಪಿ ಈಗಾಗಲೇ ಹೇರಿಟೇಜ್ ಫೋಟೋಗ್ರಫಿ, ನೈಸರ್ಗಿಕ ಫೋಟೋಶೂಟ್, ಕಪಲ್ ಫೋಟೋಶೂಟ್ ಹಾಗೂ ಚಲನಚಿತ್ರ ಚಿತ್ರೀಕರಣಕ್ಕೆ ಜನಪ್ರಿಯ ತಾಣವಾಗಿದೆ. ಇಲ್ಲಿ ಚಿತ್ರೀಕರಣ ನಡೆಸಲು ಚಲನಚಿತ್ರ ತಂಡಗಳು ದಿನಕ್ಕೆ 1 ಲಕ್ಷ ರೂ. ಠೇವಣಿ ಇಡಬೇಕು. ASI ತಂಡವು ಸ್ಥಳದಲ್ಲೇ ಹಾಜರಿದ್ದು, ಯಾವುದೇ ಸ್ಮಾರಕಕ್ಕೆ ಹಾನಿಯಾಗದಂತೆ ಮೇಲ್ವಿಚಾರಣೆ ನಡೆಸುತ್ತದೆ.
ಡ್ರೋನ್ ಹಾರಾಟಕ್ಕೂ ರೂ.50,000 ಠೇವಣಿ ವಿಧಿಸಲಾಗಿದ್ದು, ಹಂಪಿಯ ಸೂಕ್ಷ್ಮ ಮತ್ತು ಪುರಾತನ ಕಟ್ಟಡಗಳ ಮೇಲೆ ಡ್ರೋನ್ ಹಾರಿಸುವುದನ್ನು ನಿರ್ಬಂಧಿಸಲಾಗಿದೆ. ಹಲವಾರು ಪ್ರದೇಶಗಳನ್ನು ‘ನೋ-ಡ್ರೋನ್ ಝೋನ್’ ಆಗಿ ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.