ಮೈಸೂರು: ‘ಕರ್ನಾಟಕದ ಮೂಲಕ ಭಾರತವನ್ನು ಇಡೀ ಜಗತ್ತು ನೋಡುತ್ತಿದೆ. ಹಾಗಾಗಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುವಂತೆ ಪ್ರಧಾನಿ ನರೇಂದ್ರ ಮೋದಿ’ ಅವರಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶನಿವಾರ ಮನವಿ ಮಾಡಿದರು.
ಇಂದು ಮೈಸೂರಿನಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದ ಸ್ವಾಮಿ ವಿವೇಕಾನಂದ ಸ್ಮಾರಕ ಹಾಗೂ ಸಾಂಸ್ಕೃತಿಕ ಯುವ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಕರ್ನಾಟಕದ ಅಭಿವೃದ್ಧಿಗೆ ನಿಮ್ಮ ಸಹಾಯ ಮತ್ತು ಸಹಕಾರ ಬೇಕು. ರಾಜ್ಯವನ್ನು ರಕ್ಷಿಸಿ ಎಂದು ಮನವಿ ಮಾಡಿದರು.
ಇದೊಂದು ಐತಿಹಾಸಿಕ ಕಾರ್ಯಕ್ರಮ. ಯುವಕರ ಕನಸು ದೇಶದ ಕನಸಾಗಿದೆ. ವಿವೇಕಾನಂದರ ಯೋಚನೆಗಳನ್ನು ನಮ್ಮ ಸರ್ಕಾರ ಪಾಲಿಸುತ್ತೆ. ಇಡೀ ವಿಶ್ವವೇ ಇಂದು ಕರ್ನಾಟಕವನ್ನು ಗಮನಿಸುತ್ತಿದೆ. ಹಳ್ಳಿ, ನಗರಗಳಲ್ಲಿ ಯುವಶಕ್ತಿ ಸರಿಯಾಗಿ ಬಳಸಿಕೊಳ್ಳಬೇಕು, ಹಾಗಾಗಿ ಕೆಲ ಯೋಜನೆಗಳನ್ನು ಜಾರಿಗೆ ತರಲು ಚಿಂತನೆ ನಡೆದಿದೆ ಎಂದು ಸಿಎಂ ಹೇಳಿದರು.
ಕರ್ನಾಟಕ ಇಡೀ ದೇಶದ ಪ್ರಮುಖ ರಾಜ್ಯ. ಕರ್ನಾಟಕದ ವಾತಾವರಣ, ಸಂಸ್ಕೃತಿ ನೋಡಿ. ಇದು ಸಂಕಲ್ಪ ಭೂಮಿ. ನಾವು ನೀವೂ ಜೊತೆಯಾಗಿ ಸೇರಿ ಈ ಕರ್ನಾಟಕ ಬೆಳೆಸೋಣ. ಭಾರತ ಕರ್ನಾಟಕದ ಜೊತೆ ಅಭಿವೃದ್ಧಿಯಾಗಲಿ. ನಾವೆಲ್ಲ ಒಟ್ಟಾಗಿ ಸೇರಿ ಕೆಲಸ ಮಾಡೋಣ. ನಮಗೆ ನಿಮ್ಮ ಸಹಕಾರ ಬೇಕು ಎಂದು ಡಿಕೆಶಿ, ಪ್ರಧಾನಿ ಮೋದಿಗೆ ಕೇಳಿಕೊಂಡರು.
ಮೈಸೂರು ಇತಿಹಾಸ ವಿಶ್ವದ ವಿಶ್ವಾಸ. ವಿವೇಕಾನಂದರು ಮೈಸೂರಿನಿಂದ ನೇರವಾಗಿ ಚಿಕಾಗೋಗೆ ಹೋಗಿ ಐತಿಹಾಸಿಕ ಭಾಷಣ ಮಾಡಿದರು. ನಮ್ಮ ಸರ್ಕಾರ ವಿವೇಕಾನಂದರ ಕನಸುಗಳನ್ನು ಹೊಂದಿದೆ. ಗ್ರಾಮ ಪಂಚಾಯಿತಿ, ನಗರದಲ್ಲಿ ಯುವಜನತೆ ಪಡೆಗಳ ಕಟ್ಟುವ ಸಂಕಲ್ಪ ಮಾಡಿದ್ದೇನೆ. ಈ ಆಶ್ರಮ ಕರ್ನಾಟಕದ ಆಸ್ತಿ ಅಲ್ಲ, ಇದು ದೇಶದ ಆಸ್ತಿಯಾಗಿದೆ. ಆ ಆಶ್ರಮದ ಪರವಾಗಿ ನಮ್ಮ ಸರ್ಕಾರ ನಿಂತಿದೆ ಎಂದರು.
ಮೈಸೂರಿನ ಇತಿಹಾಸ ಕೇವಲ ನಾಡಿನ ಇತಿಹಾಸವಲ್ಲ, ಅದು ವಿಶ್ವಮಾನ್ಯವಾದದ್ದು. 1892ರಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದಾಗ, ಅಂದಿನ ಮಹಾರಾಜರಾದ ಶ್ರೀ ಚಾಮರಾಜ ಒಡೆಯರ್ ಅವರು ಸ್ವಾಮೀಜಿಯವರನ್ನು ಆತ್ಮೀಯವಾಗಿ ಸತ್ಕರಿಸಿದ್ದರು. ಅಷ್ಟೇ ಅಲ್ಲದೆ, 1893ರಲ್ಲಿ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಅವರಿಗೆ ಪ್ರೋತ್ಸಾಹ ಹಾಗೂ ಆರ್ಥಿಕ ಬೆಂಬಲವನ್ನು ನೀಡಿದ್ದರು. ಅಂದು ಚಿಕಾಗೋದಲ್ಲಿ 'ಅಮೆರಿಕದ ನನ್ನ ಸಹೋದರ, ಸಹೋದರಿಯರೇ...' ಎಂದು ಮೊಳಗುವ ಮೂಲಕ ಭಾರತದ ಕೀರ್ತಿಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸಲು ವಿವೇಕಾನಂದರಿಗೆ ನಮ್ಮ ಮೈಸೂರು ಮಹಾರಾಜರು ಬೆನ್ನೆಲುಬಾಗಿ ನಿಂತಿದ್ದರು ಎಂಬುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.