ಮೈಸೂರು: ಕೇರಳದ ವೈನಾಡು ಹಾಗೂ ಕೊಡಗಿನ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ಕಬಿನಿ ಹಾಗೂ ಹಾರಂಗಿ ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ.
ಕೇರಳದ ವೈನಾಡಿನಲ್ಲಿ ಮಳೆರಾಯ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಹರಿಯುವ ಒಳಹರಿವಿನಲ್ಲಿ ಗಣನೀಯ ಏರಿಕೆಯಾಗಿದೆ. ಪ್ರಸ್ತುತ ಅಣೆಕಟ್ಟೆಗೆ ಭಾರಿ ಪ್ರಮಾಣದ ನೀರು ತಲುಪುತ್ತಿದ್ದು, ನದಿ ನೀರು ಹಂಚಿಕೆ ಸಂಘರ್ಷದ ನಡುವೆ ಕಾವೇರಿ ಜಲಾನಯನ ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ, ಇದರಿಂದ ಸಂಪೂರ್ಣ ಭರ್ತಿಯಾಗುವ ಹಂತ ತಲುಪಿದೆ.
ಪ್ರಸ್ತುತ ಅಣೆಕಟ್ಟೆಗೆ 15,500 ಕ್ಯೂಸೆಕ್ ನೀರಿನ ಒಳಹರಿವು ಹೆಚ್ಚಾಗಿದೆ. 2,284 ಅಡಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯದ ಕಬಿನಿ ಜಲಾಶಯದಲ್ಲಿ ಈಗ 2,280 ಅಡಿಯಷ್ಟು ನೀರು ಭರ್ತಿಯಾಗಿದೆ. ಇಂದೇ ಜಲಾಶಯ ಸಂಪೂರ್ಣ ಭರ್ತಿಯಾಗುವ ಸಾಧ್ಯತೆಯಿದೆ.
ಹೀಗಾಗಿ ಅಣೆಕಟ್ಟೆಯಿಂದ 8 ರಿಂದ 10 ಸಾವಿರ ಕ್ಯೂಸೆಕ್‌ನಷ್ಟು ನೀರು ನದಿಗೆ ಹರಿಸಲು ತಯಾರಿ ಮಾಡಿಕೊಳ್ಳಾಗಿದೆ. ನದಿ ಪಾತ್ರದ ರೈತರಿಗೂ ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಸೂಚಿಸಿದೆ.
ಇನ್ನೂ 19.52 ಟಿಎಂಸಿ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಪ್ರಸ್ತುತ 18 ಟಿಎಂಸಿ ನೀರು ಸಂಗ್ರಹವಾಗಿದೆ. ಒಳ ಹರಿವು ಹೆಚ್ಚಳ ಆಗುವ ಸಾಧ್ಯತೆಯೂ ಇದ್ದು, ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಕಬಿನಿ ಜಲಾಶಯದ ಅಧಿಕಾರಿಗಳಿಂದ ಪ್ರವಾಹ ಮುನ್ನೆಚ್ಚರಿಕೆ ಕೂಡ ನೀಡಲಾಗಿದೆ. ನದಿ ದಂಡೆಯ ಸಾರ್ವಜನಿಕರು ಸುರಕ್ಷಿತ ಸ್ಥಳಗಳಿಗೆ ತೆರಳಲು ಮತ್ತು ಎಚ್ಚರಿಕೆಯಿಂದ ಇರಲು ಸೂಚಿಸಿದ್ದಾರೆ.
ರಾಜ್ಯದಲ್ಲಿಯೇ ಮೊದಲು ತುಂಬುವ ಜಲಾಶಯ ಎಂಬ ಹೆಗ್ಗಳಿಕೆ ಇದರದು. ಆದರೆ, ಈ ಬಾರಿ ಮುಂಗಾರು ಮಳೆಯ ಕೊರತೆಯಿಂದಾಗಿ ಒಳಹರಿವು ಇರಲಿಲ್ಲ