ಮೈಸೂರು: ಕುರ್ಕುರೆ ತಿಂಡಿಗಳ ಪ್ಯಾಕೆಟ್‌ನಲ್ಲಿ ಪತ್ತೆಯಾದ ಸಣ್ಣ ಪ್ಲಾಸ್ಟಿಕ್ ಆಟಿಕೆ ಚೆಂಡನ್ನು ನುಂಗಿ ಐದು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ.
ಮಗುವನ್ನು ಮುಕುಂದ್ ಮಯೂರ್ ಎಂದು ಗುರುತಿಸಲಾಗಿದೆ, ಈತ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಗೌರಮ್ಮ ಮತ್ತು ಶಂಕರ್ ನಾಯಕ್ ಅವರ ಮೊಮ್ಮಗ ಮತ್ತು ಸಂತೋಷ್ ಮತ್ತು ಐಶ್ವರ್ಯ ಅವರ ಏಕೈಕ ಪುತ್ರ.
ಮಾಹಿತಿಯ ಪ್ರಕಾರ, ಕುರ್‌ಕರೆ ಪ್ಯಾಕೆಟ್‌ನೊಂದಿಗೆ ಒಳಗೆ ಗಿಫ್ಟ್ ಬಾಲ್ ಬಂದಿದೆ. ಕುರ್‌ಕುರೆ ತಿಂದ ಬಳಿಕ ಗಿಫ್ಟ್ ಬಾಲ್ ಬಾಯಿಗೆ ಹಾಕಿರುವ ಮಗು ಅಕಸ್ಮಿಕವಾಗಿ ನುಂಗಿದಾಗ ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾನೆ ಎಂದು ಎನ್ನಲಾಗುತ್ತಿದೆ.
ಶನಿವಾರ ಮಗು ಅಳುತ್ತಿದ್ದುದ್ದನ್ನು ಕಂಡ ಸಂಬಂಧಿಕರ ಮಕ್ಕಳು ಗೌರಿಪುರದ ಅಂಗಡಿಯಿಂದ ಕುರ್ ಕುರೆಯಂತಹ ತಿಂಡಿ ಪೊಟ್ಟಣದ ಪ್ಯಾಕೆಟ್ ಕೊಡಿಸಿದ್ದಾರೆ. ಮಕ್ಕಳನ್ನು ಆಕರ್ಷಿಸುವ ಉದ್ದೇಶದಿಂದ ಆ ಪ್ಯಾಕೆಟ್ ನೊಳಗೆ ತಿಂಡಿ ತಯಾರಿಕಾ ಕಂಪೆನಿ ಹಾಕಿದ್ದ ಸಣ್ಣ ಚೆಂಡು ಆಕಸ್ಮಿಕವಾಗಿ ಮಗುವಿನ ಗಂಟಲಲ್ಲಿ ಸಿಲುಕಿದೆ.
ಇದನ್ನು ಗಮನಿಸಿದ ಮನೆಯವರು ತಕ್ಷಣವೇ ಮಗುವನ್ನು ಹುಣಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಿ ಮಗು ಉಸಿರುಗಟ್ಟಿ ಮೃತಪಟ್ಟಿತ್ತು. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹುಣಸೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.