ಸಂಗ್ರಹ ಚಿತ್ರ 
ರಾಜ್ಯ

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ: ಇನ್ಸ್‌ಪೆಕ್ಟರ್, ಡಿವೈಎಸ್‌ಪಿ ವರ್ಗಾವಣೆ ನಿಯಮ ಪರಿಷ್ಕರಣೆ, 5 ವರ್ಷಗಳ 'Cooling period' ಜಾರಿ

ಬಡ್ತಿ ಪಡೆದ ಡಿವೈಎಸ್ಪಿಗಳು ಕಾರ್ಯನಿರ್ವಾಹಕ ಹುದ್ದೆಗೆ (Executive Posting) ಅರ್ಹರಾಗಲು ಮೊದಲು ಕಾರ್ಯನಿರ್ವಾಹಕೇತರ (Non-Executive) ಹುದ್ದೆಯಲ್ಲಿ ಕನಿಷ್ಠ ಎರಡು ವರ್ಷ ಸೇವೆ ಸಲ್ಲಿಸಿರಬೇಕು.

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಪ್ರಭಾವಿ ಹುದ್ದೆಗಳಿಗಾಗಿ ನಡೆಯುವ ರಾಜಕೀಯ ಶಿಫಾರಸು ಹಾಗೂ ಲಾಬಿಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಪೊಲೀಸ್ ಇನ್ಸ್‌ಪೆಕ್ಟರ್ (PI) ಮತ್ತು ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (DySP) ಹುದ್ದೆಗಳ ವರ್ಗಾವಣೆ ನಿಯಮಾವಳಿಗಳನ್ನು ಗೃಹ ಇಲಾಖೆ ಪರಿಷ್ಕರಿಸಿದ್ದು, ಕಡ್ಡಾಯ ಐದು ವರ್ಷಗಳ ಕೂಲಿಂಗ್-ಆಫ್ ಅವಧಿ (Cooling-off period) ನಿಯಮವನ್ನು ಜಾರಿಗೆ ತಂದಿದೆ.

ಹೊಸ ಮಾರ್ಗಸೂಚಿಯ ಪ್ರಕಾರ, ಬಡ್ತಿ ಪಡೆದ ಡಿವೈಎಸ್ಪಿಗಳು ಕಾರ್ಯನಿರ್ವಾಹಕ ಹುದ್ದೆಗೆ (Executive Posting) ಅರ್ಹರಾಗಲು ಮೊದಲು ಕಾರ್ಯನಿರ್ವಾಹಕೇತರ (Non-Executive) ಹುದ್ದೆಯಲ್ಲಿ ಕನಿಷ್ಠ ಎರಡು ವರ್ಷ ಸೇವೆ ಸಲ್ಲಿಸಿರಬೇಕು.

ಇದೇ ರೀತಿ, ಬಡ್ತಿ ಪಡೆದ ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಕೂಡ ಕಾರ್ಯನಿರ್ವಾಹಕೇತರ ಜವಾಬ್ದಾರಿಗಳಲ್ಲಿ ಎರಡು ವರ್ಷ ಪೂರ್ಣಗೊಳಿಸಿದ ಬಳಿಕವೇ ಕಾರ್ಯನಿರ್ವಾಹಕ ಹುದ್ದೆಗೆ ನೇಮಕವಾಗಲು ಅರ್ಹರಾಗುತ್ತಾರೆ.

ಇದರ ಜೊತೆಗೆ, ಬಡ್ತಿ ಪಡೆದ ಅಧಿಕಾರಿಗಳು ಎರಡು ವರ್ಷದೊಳಗೆ ನಾಲ್ಕು ವಾರಗಳ ಪುನರ್‌ತರಬೇತಿ (Refresher Training) ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ತರಬೇತಿಯನ್ನು ಪೂರ್ಣಗೊಳಿಸದ ಅಧಿಕಾರಿಗಳಿಗೆ ಕಾರ್ಯನಿರ್ವಾಹಕ ಹುದ್ದೆ ನೀಡುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಅಂತರ ಘಟಕ (Inter-Unit) ವರ್ಗಾವಣೆಗಳಿಗೂ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಪ್ರಮುಖ ಬದಲಾವಣೆಯೆಂದರೆ ಐದು ವರ್ಷದ 'ಕೂಲಿಂಗ್ ಪಿರಿಯಡ್'.

ಬೆಂಗಳೂರು ನಗರ, ಮೈಸೂರು ನಗರ, ಹುಬ್ಬಳ್ಳಿ-ಧಾರವಾಡ ನಗರ, ಬೆಳಗಾವಿ ನಗರ, ಕಲಬುರಗಿ ನಗರ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಸತತ ಐದು ವರ್ಷ ಸೇವೆ ಸಲ್ಲಿಸಿದ ಅಧಿಕಾರಿಗಳನ್ನು ಅದೇ ಆಯುಕ್ತರ ವ್ಯಾಪ್ತಿಗೆ ಮರು ನೇಮಕ ಮಾಡುವುದಿಲ್ಲ. ಅವರು ಬೇರೆ ಘಟಕದಲ್ಲಿ ಐದು ವರ್ಷದ 'ಕೂಲಿಂಗ್ ಪಿರಿಯಡ್' ಪೂರ್ಣಗೊಳಿಸಿದ ಬಳಿಕವೇ ಅದೇ ಘಟಕಕ್ಕೆ ಮರು ವರ್ಗಾವಣೆಗೆ ಅರ್ಹರಾಗುತ್ತಾರೆ. ಆದರೆ, ವಿಶೇಷ ಸಂದರ್ಭಗಳಲ್ಲಿ ಸಂಬಂಧಿತ ಪ್ರಾಧಿಕಾರದ ಅನುಮತಿಯೊಂದಿಗೆ ಈ ನಿಯಮವನ್ನು ಸಡಿಲಿಸಬಹುದಾಗಿದೆ.

ಪರಿಷ್ಕೃತ ಮಾರ್ಗಸೂಚಿಯಲ್ಲಿ ರೈಲ್ವೆ ಪೊಲೀಸ್, ಸೈಬರ್ ಪೊಲೀಸ್ ಹಾಗೂ ಮಹಿಳಾ ಪೊಲೀಸ್ ಘಟಕಗಳನ್ನು ಕಾರ್ಯನಿರ್ವಾಹಕ ವಿಭಾಗದ ವ್ಯಾಪ್ತಿಗೆ ಸೇರಿಸಲಾಗಿದೆ.

ಇನ್ನೊಂದೆಡೆ, ಪ್ರಮುಖ ಇಲಾಖಾ ವಿಚಾರಣೆಗಳು, ಲೋಕಾಯುಕ್ತ ಪ್ರಕರಣ, ಕ್ರಿಮಿನಲ್ ತನಿಖೆ ಎದುರಿಸುತ್ತಿರುವ ಅಥವಾ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಬೋರ್ಡ್‌ನಿಂದ ಅನರ್ಹರೆಂದು ಘೋಷಿಸಲ್ಪಟ್ಟಿರುವ ಡಿವೈಎಸ್ಪಿ ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್‌ಗಳಿಗೆ ಕಾರ್ಯನಿರ್ವಾಹಕ ಹುದ್ದೆ ನೀಡಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಈ ಹೊಸ ಮಾರ್ಗಸೂಚಿಗಳು ಪೊಲೀಸ್ ಇಲಾಖೆಯಲ್ಲಿ ಪಾರದರ್ಶಕತೆ, ಸಮತೋಲನ ಹಾಗೂ ಆಡಳಿತಾತ್ಮಕ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮುಸ್ಲಿಮರು ಕಾಫಿರರೊಂದಿಗೆ ಸ್ನೇಹ ಬೆಳೆಸಬಾರದು’: ಭಾರತ-ಅಫ್ಘಾನ್ ಗೆಳತನಕ್ಕೆ Pak ಅಸೂಯೆ, Quran ಉಲ್ಲೇಖಿಸಿ ವಿಷ ಕಾರಿದ ಸೇನಾ ವಕ್ತಾರ..!

Iran ಮೇಲಿನ ದಾಳಿ ತಡೆಗೆ ಗಲ್ಫ್ ರಾಷ್ಟ್ರಗಳ ಸಲಹೆಯೇ ಪ್ರಮುಖ ಕಾರಣ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ನಾಯಕರಿಗಿಂತ ಹೆಚ್ಚಾಗಿ ಸ್ಟಾಲಿನ್ ಮಾತು ಕೇಳ್ತಾರೆ; ಕಾವೇರಿ ಜಲ ವಿವಾದದ ನಡುವೆ ತಮಿಳುನಾಡು ಸಚಿವ ಆರೋಪ!

ಖೈಬರ್ ಪಖ್ತುಂಖ್ವಾದಲ್ಲಿ "ಶಾಂತಿ ರ‍್ಯಾಲಿ"ಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ; 13 ಸಾವು

ರಸ್ತೆಗೆ ತಂದು ರಾಮಲಲ್ಲಾನಿಗೆ ಅಪಮಾನ: ಸಂಸದ ಪಪ್ಪು ಯಾದವ್ ಹತ್ಯೆಗೆ ಯತ್ನ ಆರೋಪ, Video!