ಚಿಕ್ಕಬಳ್ಳಾಪುರ: ವೀಕೆಂಡ್ ಬಂತು ಅಂದ್ರೆ ಸಾಕು ಸಿಲಿಕಾನ್ ಸಿಟಿ ಜನರ ಫೇವರಿಟ್ ತಾಣಗಳ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಆದ್ರೆ, ಈ ಬಾರಿ ಏನಾದ್ರು ನಂದಿಬೆಟ್ಟಕ್ಕೆ ವೀಕೆಂಡ್ ಪ್ಲಾನ್ ಮಾಡಿದ್ರೆ, ಆ ಪ್ಲಾನ್ ಚೇಂಜ್ ಮಾಡೋದು ಬೆಸ್ಟ್! ಯಾಕಂದ್ರೆ, ನಂದಿಬೆಟ್ಟದಲ್ಲಿ ಮಾನ್ಸೂನ್ ಮ್ಯಾರಥಾನ್ ಹಿನ್ನೆಲೆಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:
ಹೌದು, ಆಗಸ್ಟ್ 9 ರ ಭಾನುವಾರದಂದು ಅಂದ್ರೆ ನಾಳೆ ನಂದಿಬೆಟ್ಟದಲ್ಲಿ ಮಾನ್ಸೂನ್ ಮ್ಯಾರಥಾನ್ ಆಯೋಜಿಸಿರುವುದರಿಂದ ಮುಂಜಾನೆ 3:00 ಗಂಟೆಯಿಂದ ಬೆಳಗ್ಗೆ 10:00 ಗಂಟೆಯವರೆಗೆ ಪ್ರವಾಸಿಗರ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮ್ಯಾರಥಾನ್ ಓಟಗಾರರ ಸುರಕ್ಷತೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈ ಜಂಟಿ ಆದೇಶ ಹೊರಡಿಸಿದೆ.
ನಿರ್ಬಂಧಿತ ಮಾರ್ಗಗಳು:
ನಂದಿಬೆಟ್ಟದ ಪಾದದಿಂದ ಬೆಟ್ಟದ ಮೇಲಕ್ಕೆ ಹೋಗುವ ಎಲ್ಲಾ ರೀತಿಯ ಖಾಸಗಿ ವಾಹನಗಳ (ಬೈಕ್ ಮತ್ತು ಕಾರುಗಳು) ಸಂಚಾರವನ್ನು ನಿರ್ಬಂಧಿಸಲಾಗಿದೆ. ಅದರಂತೆ, ಮ್ಯಾರಥಾನ್ ಮುಗಿಯುವವರೆಗೆ ಸಾರ್ವಜನಿಕರು ಮತ್ತು ಪ್ರವಾಸಿಗರು ಬೆಟ್ಟದ ರಸ್ತೆಗೆ ಪ್ರವೇಶಿಸುವಂತಿಲ್ಲ.
ಮ್ಯಾರಥಾನ್ ವಿಶೇಷತೆಗಳು:
ನಂದಿಬೆಟ್ಟದಲ್ಲಿ ಹಮ್ಮಿಕೊಳ್ಳಲಾಗಿರುವ ಮಾನ್ಸೂನ್ ಮ್ಯಾರಥಾನ್ 2026 ನಲ್ಲಿ 21 ಕಿಲೋಮೀಟರ್, 10 ಕಿಲೋಮೀಟರ್ ಮತ್ತು 5 ಕಿಲೋಮೀಟರ್ ಓಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸುಮಾರು 4,500ಕ್ಕೂ ಹೆಚ್ಚು ಕ್ರೀಡಾಪಟುಗಳು ಮ್ಯಾರಥಾನ್‌ನಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಭಾಗವಹಿಸುವುವವರು ನಂದಿಬೆಟ್ಟದ ಪಾದದಿಂದ ಆರಂಭವಾಗಿ ಕಡಿದಾದ ತಿರುವುಗಳ ರಸ್ತೆಯ ಮೂಲಕ ಬೆಟ್ಟದ ಮೇಲ್ಭಾಗದವರೆಗೂ ಓಟಗಾರರು ಸಾಗಲಿದ್ದಾರೆ. ಅದರಂತೆ, ಮ್ಯಾರಥಾನ್‌ಗೆ ಡಿಸಿಎಂ ಜಿ. ಪರಮೇಶ್ವರ್ ಚಾಲನೆ ನೀಡಲಿದ್ದಾರೆ.
ಏತನ್ಮಧ್ಯೆ, ಬೆಳಗ್ಗೆ 10:00 ಗಂಟೆಯ ನಂತರ ಮ್ಯಾರಥಾನ್ ಮುಕ್ತಾಯಗೊಳ್ಳಲಿದ್ದು, ಆ ಬಳಿಕ ಎಂದಿನಂತೆ ಪ್ರವಾಸಿಗರು ಬೆಟ್ಟದ ಮೇಲಕ್ಕೆ ಹೋಗಲು ವಾಹನ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗುತ್ತದೆ. ಹಾಗಾಗಿ, ಈ ಭಾನುವಾರ ವೀಕೆಂಡ್ ಎಂಜಾಯ್ ಮಾಡಲು ಮುಂಜಾನೆ ನಂದಿಬೆಟ್ಟಕ್ಕೆ ಸೂರ್ಯೋದಯ ನೋಡಲು ಯೋಜಿಸುತ್ತಿರುವ ಸಾರ್ವಜನಿಕರು ಈ ಸಮಯದ ಬದಲಾವಣೆಯನ್ನು ಗಮನಿಸಿ ತಮ್ಮ ಪ್ರಯಾಣವನ್ನು ಮರುಪರಿಶೀಲಿಸೋದು ಒಳ್ಳೆಯದು.