ಬೆಂಗಳೂರು: ಕರ್ನಾಟಕ ಲೋಕ ಭವನವು ಆಗಸ್ಟ್ 16 ರಿಂದ 18ರವರೆಗೆ ಸಾರ್ವಜನಿಕರ ವೀಕ್ಷಣೆಗಾಗಿ ತೆರೆದಿರಲಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ನಿಗದಿತ ಪ್ರದೇಶಗಳಿಗೆ ಭೇಟಿ ನೀಡಲು ಸಾರ್ವಜನಿಕರಿಗೆ ಆಹ್ವಾನ ನೀಡಲಾಗಿದ್ದು, ಭೇಟಿಯ ಸಂದರ್ಭದಲ್ಲಿ ಸುರಕ್ಷತೆ, ಭದ್ರತೆ ಮತ್ತು ಸುಗಮ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ನೀಡಲಾದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೋರಲಾಗಿದೆ ಎಂದು ಅವರು ಹೇಳಿದರು.
'80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, 2026ರ ಆಗಸ್ಟ್ 16, 17 ಮತ್ತು 18 ರಂದು ಸಂಜೆ 5.30 ರಿಂದ 7.30ರವರೆಗೆ ಕರ್ನಾಟಕದ 'ಲೋಕ್ ಭವನ'ವು ಸಾರ್ವಜನಿಕರ ವೀಕ್ಷಣೆಗಾಗಿ ತೆರೆದಿರುತ್ತದೆ' ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರ್ಗಸೂಚಿಗಳ ಪ್ರಕಾರ, ಪ್ರತಿಯೊಬ್ಬ ಸಂದರ್ಶಕರು ಆಧಾರ್ ಕಾರ್ಡ್‌ನಂತಹ ಸರ್ಕಾರದಿಂದ ನೀಡಲಾದ ಮಾನ್ಯ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಮತ್ತು ಪರಿಶೀಲನೆಗಾಗಿ ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿಗೆ ತೋರಿಸಬೇಕು.
'ಲೋಕ ಭವನದ ಆವರಣವನ್ನು ಪ್ರವೇಶಿಸುವ ಮೊದಲು ಎಲ್ಲ ಸಂದರ್ಶಕರು ಕಡ್ಡಾಯವಾಗಿ ಭದ್ರತಾ ತಪಾಸಣೆಗೆ ಒಳಗಾಗಬೇಕು ಮತ್ತು ಭದ್ರತಾ ಸಿಬ್ಬಂದಿ ನೀಡುವ ಸೂಚನೆಗಳನ್ನು ಪಾಲಿಸಬೇಕು. ಸಂದರ್ಶಕರಿಗೆ ನಿಗದಿತ ಮಾರ್ಗದ ಮೂಲಕ ನಿರ್ದಿಷ್ಟಪಡಿಸಿದ ಪ್ರದೇಶಗಳಿಗೆ ಮಾತ್ರ ಪ್ರವೇಶಿಸಲು ಅನುಮತಿ ನೀಡಲಾಗುವುದು; ಅವರು ಆವರಣದೊಳಗೆ ಮೌನ, ಶಿಸ್ತು ಮತ್ತು ಘನತೆಯನ್ನು ಕಾಪಾಡಿಕೊಳ್ಳಬೇಕು' ಎಂದು ಅದು ತಿಳಿಸಿದೆ.
ಮಾರ್ಗಸೂಚಿಗಳ ಪ್ರಕಾರ, ಲೋಕ ಭವನದ ಆವರಣದೊಳಗೆ ಖಾಸಗಿ ಟ್ಯಾಕ್ಸಿ ವಾಹನಗಳಿಗೆ ಪ್ರವೇಶವಿರುವುದಿಲ್ಲ. ಜೊತೆಗೆ, ಬ್ಯಾಗ್‌ಗಳು ಮತ್ತು ಬ್ಯಾಕ್‌ಪ್ಯಾಕ್‌ಗಳು, ತಿಂಡಿ-ತಿನಿಸುಗಳು, ಪಾನ್, ಗುಟ್ಕಾ, ತಂಬಾಕು ಉತ್ಪನ್ನಗಳು, ಸಿಗರೇಟ್ ಮತ್ತು ಮದ್ಯದಂತಹ ವಸ್ತುಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ತೀಕ್ಷ್ಣವಾದ ವಸ್ತುಗಳು ಮತ್ತು ಲೋಹದ ವಸ್ತುಗಳ ಜೊತೆಗೆ, ವೃತ್ತಿಪರ ಕ್ಯಾಮೆರಾಗಳು, ವಿಡಿಯೋ ಕ್ಯಾಮೆರಾಗಳು, ಲ್ಯಾಪ್‌ಟಾಪ್‌ಗಳು ಹಾಗೂ ಇತರ ಎಲ್ಲ ಎಲೆಕ್ಟ್ರಾನಿಕ್ ಅಥವಾ ವಿದ್ಯುತ್ ಉಪಕರಣಗಳನ್ನೂ ನಿಷೇಧಿಸಲಾಗಿದೆ. ಬೆಂಕಿ ಪೊಟ್ಟಣಗಳು, ಲೈಟರ್‌ಗಳು, ಸುಲಭವಾಗಿ ಬೆಂಕಿಹೊತ್ತಿಕೊಳ್ಳುವ ವಸ್ತುಗಳು ಹಾಗೂ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಸಹ ನಿಷೇಧಿತ ವಸ್ತುಗಳ ಪಟ್ಟಿಯಲ್ಲಿ ಸೇರಿವೆ ಎಂದು ಅದು ತಿಳಿಸಿದೆ.