ಜೈನ ವಿಗ್ರಹಗಳು ಪತ್ತೆ.  
ರಾಜ್ಯ

ಬಳ್ಳಾರಿ ಹೊಲದಲ್ಲಿ 4 ಜೈನ ಶಿಲ್ಪಗಳ ಪತ್ತೆ: ಸಂಶೋಧನೆ ಬಳಿಕ ಬಯಲಾಯ್ತು ʼಸಲ್ಲೇಖನʼದ ಕುರುಹು..!

ಕೋಳೂರು ಗ್ರಾಮದಲ್ಲಿ ಈಗಾಗಲೇ ಹಲವು ಐತಿಹಾಸಿಕ ಅವಶೇಷಗಳು ಪತ್ತೆಯಾಗಿವೆ. ಸೂರ್ಯನಾರಾಯಣ ದೇವಸ್ಥಾನ ಸೇರಿದಂತೆ ಗ್ರಾಮದ ವಿವಿಧೆಡೆ ಶಾಸನಗಳು ಕಂಡುಬಂದಿವೆ.

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಕೋಳೂರು ಗ್ರಾಮದ ಕೃಷಿ ಭೂಮಿಯೊಂದರಲ್ಲಿ ಮಧ್ಯಕಾಲೀನ ಇತಿಹಾಸಕ್ಕೆ ಸೇರಿದ ನಾಲ್ಕು ಅಪರೂಪದ ಪುರಾತನ ಜೈನ ವಿಗ್ರಹಗಳು ಪತ್ತೆಯಾಗಿದ್ದು, ಇವು ಕರ್ನಾಟಕದ ಸಮೃದ್ಧ ಜೈನ ಧರ್ಮದ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿವೆ.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿಜಯನಗರ ಸಾಮ್ರಾಜ್ಯ ಸಂಶೋಧನಾ ತಂಡ ನಡೆಸಿದ ಕ್ಷೇತ್ರ ಅಧ್ಯಯನದಲ್ಲಿ ಈ ಶಿಲ್ಪಗಳು ಪತ್ತೆಯಾಗಿದ್ದು, ಇದರಿಂದ ಈ ಭಾಗದ ಜೈನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಗೆ ಹೊಸ ಸಾಕ್ಷ್ಯ ದೊರೆತಂತಾಗಿದೆ.

ಬಳ್ಳಾರಿಯಿಂದ ಸುಮಾರು 18 ಕಿ.ಮೀ. ದೂರದಲ್ಲಿರುವ ಕೋಳೂರು ಗ್ರಾಮದ ಕೃಷಿ ಜಮೀನಿನ ಆಗ್ನೇಯ, ಈಶಾನ್ಯ, ನೈಋತ್ಯ ಹಾಗೂ ವಾಯವ್ಯ ದಿಕ್ಕುಗಳಲ್ಲಿ ಈ ನಾಲ್ಕು ಶಿಲ್ಪಗಳು ಪತ್ತೆಯಾಗಿವೆ.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಎಚ್‌. ತಿಪ್ಪೇಸ್ವಾಮಿ ನೇತೃತ್ವದಲ್ಲಿ ಡಾ. ಗೋವಿಂದ್‌, ಡಾ. ಕೃಷ್ಣೇಗೌಡ ಹಾಗೂ ಸಂಶೋಧಕರಾದ ದಾದಾ ಖಲಂದರ್‌, ಇಸ್ಮಾಯಿಲ್‌ ಸಿದ್ದಿಕಿ, ಅಶೋಕ್‌ ನಾಯಕ್‌ ದಿದ್ದಿಗಿ, ಕೆ. ಶಿವರಾಮಪ್ಪ ಮತ್ತು ಬಂಡ್ರಿ ಪಾಪಯ್ಯ ಅವರ ತಂಡ ಈ ಅಧ್ಯಯನ ನಡೆಸಿತು. ಸ್ಥಳೀಯ ವಕೀಲ ಕೆ. ಲಕ್ಷ್ಮಣ್‌ ಹಾಗೂ ಮಲ್ಲಿಕಾರ್ಜುನ ಅವರು ಕ್ಷೇತ್ರ ಅಧ್ಯಯನಕ್ಕೆ ನೆರವಾದರು.

ಕೋಳೂರು ಗ್ರಾಮದಲ್ಲಿ ಈಗಾಗಲೇ ಹಲವು ಐತಿಹಾಸಿಕ ಅವಶೇಷಗಳು ಪತ್ತೆಯಾಗಿವೆ. ಸೂರ್ಯನಾರಾಯಣ ದೇವಸ್ಥಾನ ಸೇರಿದಂತೆ ಗ್ರಾಮದ ವಿವಿಧೆಡೆ ಶಾಸನಗಳು ಕಂಡುಬಂದಿವೆ.

ದೇವಸ್ಥಾನದಲ್ಲಿರುವ ದೊಡ್ಡ ಕಲ್ಲಿನ ಶಾಸನದಲ್ಲಿ 103 ಸಾಲುಗಳಿದ್ದು, ಸಂಸ್ಕೃತ ಭಾಷೆಯನ್ನು ಕನ್ನಡ ಲಿಪಿಯಲ್ಲಿ ಬರೆಯಲಾಗಿದೆ. ಚಾಲುಕ್ಯ ಜಗದೇಕಮಲ್ಲನ ಆಳ್ವಿಕೆಯ ಅವಧಿಯಲ್ಲಿ ಸಾಮಂತನಾಗಿದ್ದ ಇಮ್ಮಡಿ ಭೀಮರಸನಿಗೆ ಈ ಶಾಸನ ಸಂಬಂಧಿಸಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಶಾಸನದಲ್ಲಿ ನಂದರು ಮತ್ತು ಮೌರ್ಯರ ಉಲ್ಲೇಖಗಳು ಕಂಡುಬಂದ ಹಿನ್ನೆಲೆಯಲ್ಲಿ ಸಂಶೋಧಕರು ಕ್ಷೇತ್ರ ಅಧ್ಯಯನ ಕೈಗೊಂಡಿದ್ದರು.

ಈ ವೇಳೆ ನಾಲ್ಕು ಜೈನ ಶಿಲ್ಪಗಳು ಪತ್ತೆಯಾಗಿದ್ದು, ಈ ಪ್ರದೇಶದಲ್ಲಿ ಜೈನ ಧಾರ್ಮಿಕ ಪರಂಪರೆಯ ಪ್ರಭಾವ ಹಾಗೂ ಅಸ್ತಿತ್ವವಿದ್ದಿರಬಹುದೆಂಬ ಸೂಚನೆ ದೊರೆತಿದೆ.

ಶಿಲ್ಪಗಳಲ್ಲಿ ಸಲ್ಲೇಖನ ವ್ರತದ ಚಿತ್ರಣ

ನಾಲ್ಕೂ ಶಿಲ್ಪಗಳಲ್ಲಿ ಜೈನ ವ್ಯಕ್ತಿಗಳನ್ನು ಪದ್ಮಾಸನದಲ್ಲಿ ಕುಳಿತಿರುವಂತೆ ಕೆತ್ತಲಾಗಿದ್ದು, ಮೇಲ್ಭಾಗದಲ್ಲಿ ಮೂರು ಹಂತದ ಛತ್ರದ ಆಕಾರದ ವಿನ್ಯಾಸವಿದೆ. ಇವು ಸಲ್ಲೇಖನ ವ್ರತವನ್ನು ಪ್ರತಿನಿಧಿಸುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.

ಶಿಲ್ಪದ ಎರಡೂ ಬದಿಗಳಲ್ಲಿ ಸೂರ್ಯ ಮತ್ತು ಚಂದ್ರನ ಚಿತ್ರಗಳನ್ನು ಕೆತ್ತಲಾಗಿದೆ. ಕೆಳಭಾಗದಲ್ಲಿ ಹಸು ಹಾಗೂ ಕತ್ತಿಯ ಚಿತ್ರಗಳಿವೆ. ಶಿಲ್ಪಗಳಿಗೆ ಹಾನಿ ಮಾಡದಂತೆ ಎಚ್ಚರಿಸುವ ಸಂದೇಶವನ್ನು ಈ ಚಿತ್ರಣಗಳು ಸೂಚಿಸುತ್ತವೆ ಎಂದು ನಂಬಲಾಗಿದೆ.

ಒಂದು ಶಿಲ್ಪ ಸುಮಾರು 7 ಅಡಿ ಎತ್ತರ ಹಾಗೂ 3 ಅಡಿ ಅಗಲವಿದ್ದು, ಅದರ ಒಂದು ಭಾಗ ಹಾನಿಗೊಳಗಾಗಿದೆ. ಉಳಿದ ಮೂರು ಶಿಲ್ಪಗಳು ತಲಾ ಸುಮಾರು 5 ಅಡಿ ಎತ್ತರ ಮತ್ತು 3 ಅಡಿ ಅಗಲ ಹೊಂದಿವೆ. ನಾಲ್ಕೂ ಶಿಲ್ಪಗಳನ್ನು ಗ್ರಾನೈಟ್‌ ಕಲ್ಲಿನಿಂದ ಕೆತ್ತಲಾಗಿದೆ.

ವಿಶೇಷವೆಂದರೆ, ಗ್ರಾಮಸ್ಥರು ಈ ಶಿಲ್ಪಗಳನ್ನು ವಿವಿಧ ಹೆಸರುಗಳಿಂದ ಗುರುತಿಸಿ ಪೂಜಿಸುತ್ತಿದ್ದಾರೆ. ಒಂದು ಶಿಲ್ಪವನ್ನು ವೀರಭದ್ರ, ಉಳಿದವುಗಳನ್ನು ಖಾಜಾಪೀರ್‌, ದೊಡ್ಡ ಸಂಕಮ್ಮ ಮತ್ತು ಸಣ್ಣ ಸಂಕಮ್ಮ ಎಂದು ಕರೆಯಲಾಗುತ್ತಿದೆ.

ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಸಹಾಯಕ ಪ್ರಾಧ್ಯಾಪಕ ಹಾಗೂ ಸಂಶೋಧನಾ ತಂಡದ ಸದಸ್ಯ ಡಾ. ಗೋವಿಂದ್‌ ಅವರ ಪ್ರಕಾರ, ಶಿಲ್ಪಗಳಲ್ಲಿ ಯಾವುದೇ ಶಾಸನ ಕಂಡುಬಂದಿಲ್ಲ. ಆದರೆ, ಅವುಗಳ ಶಿಲ್ಪಕಲೆ, ವಿನ್ಯಾಸ ಮತ್ತು ಪ್ರತಿಮಾಶಾಸ್ತ್ರೀಯ ಲಕ್ಷಣಗಳು ಜೈನ ಪರಂಪರೆಗೆ ಸೇರಿದವು ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ ಎಂದು ಹೇಳಿದ್ದಾರೆ.

ಈ ಕುರಿತು ಹೆಚ್ಚಿನ ಅಧ್ಯಯನ ಹಾಗೂ ಸಂಬಂಧಪಟ್ಟ ಇಲಾಖೆಗಳ ವತಿಯಿಂದ ಪುರಾತತ್ವ ಉತ್ಖನನ ನಡೆಸಿದರೆ, ಈ ಪ್ರದೇಶದಲ್ಲಿ ಜೈನ ಧರ್ಮದ ಹರಡುವಿಕೆ ಮತ್ತು ಅದಕ್ಕೆ ದೊರೆತಿದ್ದ ಆಶ್ರಯದ ಕುರಿತು ಮತ್ತಷ್ಟು ಮಹತ್ವದ ಪುರಾವೆಗಳು ದೊರೆಯಬಹುದು ಎಂದು ಪ್ರೊ. ತಿಪ್ಪೇಸ್ವಾಮಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Karnataka Bandh-ಮಂಡ್ಯ, ಮೈಸೂರು ಭಾಗಗಳಲ್ಲಿ ಉತ್ತಮ ಸ್ಪಂದನೆ: ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ-Video

‘Hormuz ಮೇಲೆ ಅಮೆರಿಕಾ ಸಂಪೂರ್ಣ ಹಿಡಿತ’ ಎಂದ Trump; ಹೇಳಿಕೆಯಿಂದ ‘ವಾಸ್ತವ ಬದಲಾಗಲ್ಲ’, ಷರತ್ತುಗಳ ಒಪ್ಪದ ಹೊರತು ಜಲಸಂಧಿ ತೆರೆಯಲ್ಲ; Iran ತಿರುಗೇಟು..!

AI ಗುಳ್ಳೆ ಯಾವಾಗ ಸಿಡಿಯುತ್ತೆ? (ಹಣಕ್ಲಾಸು)

ವಿಧಾನಸೌಧ-ವಿಕಾಸಸೌಧ, ಆರೋಗ್ಯಸೌಧದಲ್ಲೇ ಇಲ್ಲ ಆರೋಗ್ಯ! ಕ್ಯಾಂಟೀನ್‌ಗಳಲ್ಲಿ ಜಿರಳೆ, ಅವಧಿ ಮೀರಿದ ಆಹಾರ ಪತ್ತೆ; ಹೊರಗೆ ಊಟ ಮಾಡುವ ಮುನ್ನ ಇದನ್ನೊಮ್ಮೆ ನೋಡಿ..!

ಸಂಪುಟ ವಿಸ್ತರಣೆ ಬಳಿಕ ಖಾತೆ ಹಂಚಿಕೆ ಪೂರ್ಣ: 19 ಸಚಿವರಿಗೆ ಹೊಣೆಗಾರಿಕೆ, ಕೆಲ ಪ್ರಮುಖ ವಿಚಾರಗಳಿಗೆ ಇನ್ನೂ ಸಿಗದ ಪರಿಹಾರ, ಮುಂದುವರೆದ ಅಸಮಾಧಾನ..!