ಮಂಡ್ಯ: ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ದೇವಸ್ಥಾನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಪಾಳಕ್ಕೆ ಹೊಡೆದು ಬೆದರಿಕೆ ಹಾಕಿದ ಆರೋಪ ಶಾಸಕರ ಪುತ್ರಿ ಮೇಲೆ ಕೇಳಿಬಂದಿದೆ.
ಆಗಸ್ಟ್ 12ರಂದು ರಾತ್ರಿ ಸುಮಾರು 8.15ರ ವೇಳೆಗೆ ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ವಿಶೇಷ ಭದ್ರತಾ ಕರ್ತವ್ಯಕ್ಕೆ ಮಂಡ್ಯ ಮಹಿಳಾ ಪೊಲೀಸ್ ಠಾಣೆಯ ಪಿಎಸ್‌ಐ ಸವಿತಾ ಬಿ. ಪಾಟೀಲ್ ಅವರನ್ನು ನಿಯೋಜಿಸಲಾಗಿತ್ತು.
ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ. ಸುರೇಶ್‌ಗೌಡ ಅವರ ಪುತ್ರಿ ಹಾಗೂ ಎಸಿಪಿ ಗೌತಮ್ ಅವರ ಪತ್ನಿ ಐಶ್ವರ್ಯ ಅವರು ದರ್ಶನಕ್ಕೆ ಅವಕಾಶ ನೀಡುವುದು ತಡವಾದ ವಿಚಾರವಾಗಿ ಪಿಎಸ್‌ಐ ಜೊತೆ ವಾಗ್ವಾದ ನಡೆಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಐಶ್ವರ್ಯ ಅವರು ಪಿಎಸ್‌ಐ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಪಾಳಕ್ಕೆ ಹೊಡೆದು, ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಶ್ವರ್ಯ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 132, 115(2), 352 ಮತ್ತು 351(2) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಇದೇ ವೇಳೆ, ಮಹಿಳಾ ಪಿಎಸ್‌ಐ ವಿರುದ್ಧವೂ ಪ್ರತಿದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಸಕರ ಪುತ್ರಿಯನ್ನು ಪಿಎಸ್‌ಐ ಕೂಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪದಡಿ ಈ ಪ್ರತಿದೂರು ನೀಡಲಾಗಿದೆ.