ಮಂಗಳೂರು: ಆಹಾರ ಸುರಕ್ಷತೆಯ ತಪಾಸಣೆ ವೇಳೆ ಎಷ್ಟೇ ದೊಡ್ಡವರಾದರೂ ಬಿಡುವುದಿಲ್ಲ, ಎಷ್ಟೇ ಸಣ್ಣವರಾದರೂ ಅವರನ್ನು ಬಿಡುವುದಿಲ್ಲ. ನಮಗೆ ಜನರ ಆರೋಗ್ಯವೇ ಮುಖ್ಯ ಎಂದು ಆರೋಗ್ಯ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಫಾಸ್ಟ್-ಫುಡ್ ಮಳಿಗೆಗಳ ಅನಿರೀಕ್ಷಿತ ತಪಾಸಣೆಯ ಸಂದರ್ಭದಲ್ಲಿ ಮಾತನಾಡಿದ ಖಾದರ್, ಸಾರ್ವಜನಿಕ ಆರೋಗ್ಯ ಮತ್ತು ಆಹಾರ ಸುರಕ್ಷತೆಯಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು.
ಆರೋಗ್ಯವಂತ ಸಮಾಜ ನಿರ್ಮಾಣ ಆಗಬೇಕೆಂಬ ಉದ್ದೇಶದಿಂದ ಆಹಾರ ಕೊಡುವಂತಹ ಜಾಗಗಳು ಹಾಗೂ ಆಹಾರ ಉತ್ಪಾದನಾ ಕೇಂದ್ರಗಳನ್ನು ಗುರುತಿಸಿಕೊಂಡು ರಾಜ್ಯದ ಉದ್ದಗಲಕ್ಕೂ ತಪಾಸಣೆ ಪ್ರಾರಂಭಿಸಿದ್ದೇವೆ. ಈ ತಪಾಸಣೆ ಯಾರ ಮೇಲಿನ ಕೋಪದಿಂದಾಗಲಿ ಮಾಡುತ್ತಿರುವುದಲ್ಲ. ಅವರವರ ತಪ್ಪೇನಿದೆ ಎಂಬುದನ್ನು ತೋರಿಸಿ, ಜನರಿಗೆ ವಾಸ್ತವ ಪರಿಸ್ಥಿತಿ ಏನಿದೆ ಎಂಬುದನ್ನು ತಿಳಿಸಿಕೊಡುವುದು ನಮ್ಮ ಜವಾಬ್ದಾರಿ ಎಂದರು.
"ನಾವು ರಾಜ್ಯಾದ್ಯಂತ ಶೋಧ ಮತ್ತು ಆಹಾರ ಮಳಿಗೆಗಳಲ್ಲಿ ಸಂಪೂರ್ಣ ತಪಾಸಣೆಗಳನ್ನು ಪ್ರಾರಂಭಿಸಿದ್ದೇವೆ, ಅಲ್ಲಿ ನೈರ್ಮಲ್ಯದ ಕೊರತೆ ಮತ್ತು ಆಹಾರದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ದಾಳಿ ಆರಂಭಿಸಿದ್ದೇವೆ ಎಂದರು.
ಬೆಂಗಳೂರಿನಲ್ಲಿ ಎಲ್ಲಾ ರೀತಿಯ ಔಟ್‌ಲೆಟ್‌ಗಳ ಮೇಲೆ ರೇಡ್ ಆದರೂ ಕೂಡ ಮಂಗಳೂರಿನಲ್ಲೂ ಅದೇ ರೀತಿ ಮಾಡುತ್ತಾರೆ ಎಂದರೆ ಅವರಿಗೆ ನಾವೇನು ಹೇಳಬೇಕು?. ನಿನ್ನೆ ಮಾಹಿತಿ ಬಂದ ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಹೋಗಿ, ಪರಿಶೀಲನೆ ನಡೆಸಿ ತಕ್ಷಣ ಆ ಮಳಿಗೆಯನ್ನು ಸೀಲ್ ಮಾಡಿದ್ದಾರೆ.
ಇಂಥ ತಪಾಸಣೆಗಳು ಎಲ್ಲಾ ಕಡೆ ಮುಂದೆಯೂ ನಡೆಯಲಿವೆ. ಹಾಗಾಗಿ ಎಲ್ಲರೂ ತಮ್ಮ ಕಿಚನ್, ಸ್ಟೋರ್ ಹಾಗೂ ಆಹಾರ ಪದಾರ್ಥಗಳ ಗುಣಮಟ್ಟ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿ, ಎಲ್ಲಿಗೆ ಬೇಕಾದರೂ ನಾವು ರೇಡ್ ಮಾಡಬಹುದು" ಎಂದು ಎಚ್ಚರಿಸಿದರು.
ಒಂದು ಮಳಿಗೆಯಲ್ಲಿ, ಎಂಟು ತಿಂಗಳವರೆಗೆ ಕೋಲ್ಡ್ ರೂಂನಲ್ಲಿ ಸಂಗ್ರಹಿಸಲಾಗಿತ್ತು ಎಂದು ಹೇಳಲಾದ ಕೋಳಿಯನ್ನು ಅಧಿಕಾರಿಗಳು ಪತ್ತ ಹಚ್ಚಿದ್ದಾರೆ ಎಂದು ಅವರು ಹೇಳಿದರು.