ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಬಳಸಿದ ‘ದಿಮಾಗಿ ನಕ್ಸಲ್’ ಎಂಬ ಪದಕ್ಕೆ ನಟ ಪ್ರಕಾಶ್ ರಾಜ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರ್ಕಾರವನ್ನು ಪ್ರಶ್ನಿಸುವವರು ಹಾಗೂ ಸರ್ಕಾರದ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರನ್ನು ‘ದಿಮಾಗಿ ನಕ್ಸಲರು’ ಎಂದು ಕರೆಯಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಮಾತನಾಡಿದ ಪ್ರಕಾಶ್ ರಾಜ್, ಸ್ವಾತಂತ್ರ್ಯ ದಿನದಂದು ದೇಶದಲ್ಲಿ ಎರಡು ವಿಭಿನ್ನ ರೀತಿಯ ಕೆಲಸಗಳನ್ನು ನೋಡಿದ್ದೇವೆ ಎಂದು ಹೇಳಿದರು.
ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಸರ್ವೋಚ್ಚ ನಾಯಕ’ ಎಂದು ಉಲ್ಲೇಖಿಸಿದ ಅವರು, ಮತ್ತೊಂದೆಡೆ ಸರಕಾರವನ್ನು ಪ್ರಶ್ನಿಸುವವರನ್ನು ‘ಜಿರಳೆಗಳು’ ಅಥವಾ ‘ದಿಮಾಗಿ ನಕ್ಸಲರು’ ಎಂದು ಕರೆಯಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ಇಷ್ಟು ವರ್ಷ ನಗರ ನಕ್ಸಲರು, ದೇಶವಿರೋಧಿಗಳು, ಕೀಟಗಳು, ಜಿರಳೆಗಳು ಎಂಬ ಪದಗಳನ್ನು ಬಳಸಲಾಗುತ್ತಿತ್ತು. ಈಗ ನಮಗೆ ‘ದಿಮಾಗಿ ನಕ್ಸಲರು’ ಎಂದು ನಾಮಕರಣ ಮಾಡಿದ್ದಾರೆ. ಕೊನೆಗೂ ಪ್ರಶ್ನಿಸುವ ಜನರಿಗೆ ತಲೆ (ಬುದ್ಧಿ) ಇದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ದಿಮಾಗಿ ಬನೋ, ಬೇವಕೂಫ್ ನಹಿ, ಅಂಧಭಕ್ತ್ ನಹಿ. ಸವಾಲ್ ಕರೋ, ಗುಲಾಮಿ ನಹಿ’ ಎಂದು ಪ್ರಕಾಶ್ ರಾಜ್ ಹೇಳಿದರು. ಅಂದರೆ, ‘ಬುದ್ಧಿವಂತರಾಗಿರಿ; ಮೂರ್ಖರಾಗಬೇಡಿ; ಅಂಧಭಕ್ತರಾಗಬೇಡಿ. ಪ್ರಶ್ನೆಗಳನ್ನು ಕೇಳಿ; ಅಧೀನರಾಗಬೇಡಿ’ ಎಂಬುದು ಅವರ ಸಂದೇಶವಾಗಿತ್ತು. ವೀಡಿಯೊದ ಕೊನೆಯಲ್ಲಿ ಪ್ರಧಾನಿಯನ್ನು ‘ಪ್ರಿಯ ಸ್ನೇಹಿತ’ ಎಂದು ಉಲ್ಲೇಖಿಸಿದ ರಾಜ್, ದೇಶದ ನೈಜ ಸಮಸ್ಯೆಗಳತ್ತ ಗಮನಹರಿಸುವಂತೆ ಮನವಿ ಮಾಡಿದರು.
ನಾಮಕರಣ ಸಮಾರಂಭಗಳಿಗೆ ಕೆಂಪುಕೋಟೆಯನ್ನು ಬಳಸುವುದನ್ನು ನಿಲ್ಲಿಸಿ, ದೇಶ ಎದುರಿಸುತ್ತಿರುವ ನೈಜ ಸಮಸ್ಯೆಗಳ ಬಗ್ಗೆ ಗಮನಹರಿಸಿ ಕೆಲಸ ಮಾಡುತ್ತೀರಾ? ಎಂದು ಅವರು ಪ್ರಧಾನಿಯನ್ನು ಪ್ರಶ್ನಿಸಿದರು. ಶಾಲಾ ಥೀಕ್ ಕರೋ ಎಂಬ ಅಭಿಯಾನದಲ್ಲಿ ಭಾಗವಹಿಸುತ್ತಿರುವ ಸ್ವಯಂಸೇವಕರ ಬಗ್ಗೆಯೂ ಪ್ರಕಾಶ್ ರಾಜ್ ಮಾತನಾಡಿದರು. ಈ ಸ್ವಯಂಸೇವಕರು ಹಳ್ಳಿಗಳ ಸರಕಾರಿ ಶಾಲೆಗಳಿಗೆ ತೆರಳಿ ಅಲ್ಲಿನ ಮೂಲಸೌಕರ್ಯದ ಸ್ಥಿತಿಯನ್ನು ಜನರಿಗೆ ತೋರಿಸುತ್ತಿದ್ದಾರೆ ಎಂದು ಹೇಳಿದರು.
ಒಂದೆಡೆ ಭಾಷಣಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಯುವಜನರು ಹಳ್ಳಿಗಳ ಸರ್ಕಾರಿ ಶಾಲೆಗಳಿಗೆ ತೆರಳಿ ಅಲ್ಲಿನ ಶೌಚಾಲಯಗಳ ಕೊರತೆ, ಶಿಕ್ಷಕರ ಕೊರತೆ ಹಾಗೂ ಕಟ್ಟಡಗಳ ದುಃಸ್ಥಿತಿಯನ್ನು ಜಗತ್ತಿಗೆ ತೋರಿಸುತ್ತಿದ್ದಾರೆ. ಈ ಇಬ್ಬರಲ್ಲಿ ಯಾರನ್ನು ಬೆಂಬಲಿಸಬೇಕು ಎಂಬುದನ್ನು ನೀವೇ ನಿರ್ಧರಿಸಿ. ಯಾರಿಗೂ ಅಂಧ ಭಕ್ತರಾಗಬೇಡಿ, ಗುಲಾಮರಾಗದೆ ನೈಜ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿ” ಎಂದು ಜನತೆಗೆ ಕರೆ ನೀಡಿದ್ದಾರೆ.