ಬೆಂಗಳೂರು: ತನ್ನ ಮನೆಯಲ್ಲಿ ಬಾಡಿಗೆಗಿದ್ದ ಮಗಳ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 60 ವರ್ಷದ ಮನೆ ಮಾಲೀಕನನ್ನು ಬೆಂಗಳೂರಿನ ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಮಲೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಬಾಡಿಗೆಗೆ ವಾಸವಿದ್ದ 20 ವರ್ಷದ ಕಾಲೇಜು ವಿದ್ಯಾರ್ಥಿನಿ ನೀಡಿದ ದೂರಿನನ್ವಯ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಶನಿವಾರ ಸಂಜೆ 6:25ರ ಸುಮಾರಿಗೆ ಯುವತಿ ವಾಸವಿದ್ದ ಮನೆಯಲ್ಲಿ ಬಾಕಿ ಇದ್ದ ರಿಪೇರಿ ಕೆಲಸಗಳನ್ನು ಪರಿಶೀಲಿಸುವ ನೆಪದಲ್ಲಿ ಕಮಲೇಶ್ ಕುಮಾರ್, ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಆರಂಭದಲ್ಲಿ ಯುವತಿಯ ಕಾಲೇಜು ಮತ್ತು ವಿದ್ಯಾಭ್ಯಾಸದ ಬಗ್ಗೆ ಮಾತುಕತೆ ನಡೆಸಿದ ಆರೋಪಿ, ಬಳಿಕ ಆಕೆಯ ಕೈಯಲ್ಲಿದ್ದ ಮೆಹಂದಿ ನೋಡುವ ನೆಪದಲ್ಲಿ ಕೈ ಹಿಡಿದು ತನ್ನತ್ತ ಎಳೆದುಕೊಂಡಿದ್ದಾನೆ. ತೀವ್ರ ಪ್ರತಿರೋಧ ಒಡ್ಡಿದರೂ ಲೆಕ್ಕಿಸದೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಷ್ಟೇ ಅಲ್ಲದೆ, ಖಾಸಗಿಯಾಗಿ ಮತ್ತೆ ಭೇಟಿಯಾಗುವಂತೆ ಒತ್ತಾಯಿಸಿ ಅಸಭ್ಯವಾಗಿ ಮಾತನಾಡಿದ್ದಾನೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ಆರೋಪಿಸಿದ್ದಾರೆ.
ಘಟನೆಯಿಂದ ಆಘಾತಗೊಂಡ ವಿದ್ಯಾರ್ಥಿನಿ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ.
ಯುವತಿ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ, 2023ರ ಸೆಕ್ಷನ್ 74 ಮತ್ತು 75(2)ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಮತ್ತು ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.