ಬೆಂಗಳೂರು: ಬಿಡದಿ ಟೌನ್‌ಶಿಪ್ ಹಾಗೂ ನೈಸ್ ಯೋಜನೆಗಳನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರೇ ರೂಪಿಸಿದ್ದರು ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಎಚ್.ಡಿ. ಕುಮಾರಸ್ವಾಮಿ ಅವರು ಮಂಗಳವಾರ ತಿರುಗೇಟು ನೀಡಿದ್ದಾರೆ.
ಬಿಡದಿ ಇಂಟಿಗ್ರೇಟೆಡ್ ಟೌನ್‌ಶಿಪ್ ಹಾಗೂ 7,000 ಎಕರೆ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಎಐ ಸಿಟಿ ಯೋಜನೆ ಮತ್ತು ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಜೆಡಿಎಸ್ ಯುವ ಘಟಕ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸಾವಿರಾರು ಬಿಡದಿ ರೈತರು ಹಾಗೂ ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು, ಈ ಎರಡೂ ಯೋಜನೆಗಳ ಬಗ್ಗೆ ಕಾಂಗ್ರೆಸ್ ನಾಯಕರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದರು.
“ಈ ಯೋಜನೆಗಳ ಮೂಲದ ಬಗ್ಗೆ ಕಾಂಗ್ರೆಸ್ ನಾಯಕರು ಪ್ರಶ್ನೆಗಳನ್ನು ಎತ್ತಿದ್ದಾರೆ. ನಾನು ಅವರೊಂದಿಗೆ ಮುಖಾಮುಖಿಯಾಗಿ ಕುಳಿತು ಎಲ್ಲ ವಿಚಾರಗಳ ಬಗ್ಗೆಯೂ ಚರ್ಚಿಸಲು ಸಿದ್ಧನಿದ್ದೇನೆ” ಎಂದು ಹೇಳಿದರು.
ರಾಜ್ಯ ಸರ್ಕಾರ ಖಾಸಗಿ ವ್ಯಕ್ತಿಗಳ ಹಿತಾಸಕ್ತಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ಬಿಡದಿ ಟೌನ್‌ಶಿಪ್ ಹಾಗೂ ನೈಸ್ ಯೋಜನೆಗಳ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಗುರಿಯಾಗಿಸಲಾಗಿದೆ ಎಂದು ದೂರಿದರು.
ನೈಸ್ ಯೋಜನೆಯನ್ನು ಪರೋಕ್ಷ ಮಾರ್ಗಗಳ ಮೂಲಕ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದೂ ಆರೋಪಿಸಿದರು.
ನೀವು ಈಗಾಗಲೇ ನೈಸ್ ಭೂಮಿಯನ್ನು ನಿಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದೀರಿ. ಇದೀಗ ಬೇನಾಮಿ ಕಂಪನಿಗಳನ್ನು ಸೃಷ್ಟಿಸಿ ಇಡೀ ಯೋಜನೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ. ಇದೇ ವೇಳೆ ಬಿಡದಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದೀರಿ.
ಈಗಲ್‌ಟನ್ ರೆಸಾರ್ಟ್‌ಗೆ ಮಂಜೂರಾದ 70 ಎಕರೆ ಖರಾಬ್ ಭೂಮಿಗೆ ಎಕರೆಗೆ ರೂ.12 ಕೋಟಿ ಪರಿಹಾರ ನೀಡಲಾಗಿದೆ. ಆದರೆ, ಬಿಡದಿ ರೈತರ ಫಲವತ್ತಾದ ಕೃಷಿ ಭೂಮಿಗೆ ಎಕರೆಗೆ ಕೇವಲ ರೂ.3 ಕೋಟಿ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಬಿಡದಿ ಟೌನ್‌ಶಿಪ್ ತಮ್ಮ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಾವು ರೂಪಿಸಿದ್ದ ಯೋಜನೆಯಾಗಿದ್ದು, ನಂತರ ಅದರ ಮೂಲ ಉದ್ದೇಶ ಬದಲಾಗಿದೆ. ನೈಸ್ ಯೋಜನೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಅವಧಿಯಲ್ಲಿ ರೂಪುಗೊಂಡಿತ್ತು. ನೈಸ್ ಯೋಜನೆಯ ಭಾಗವಾಗಿ ಐದು ಟೌನ್‌ಶಿಪ್‌ಗಳನ್ನು ನಿರ್ಮಿಸುವುದಾಗಿ ಸಂಸ್ಥೆ ಭರವಸೆ ನೀಡಿದ್ದರೂ, ಒಂದನ್ನೂ ನಿರ್ಮಿಸಿಲ್ಲ. ಕಳೆದ 20 ವರ್ಷಗಳಿಂದ ರೈತರಿಗೆ ಪರಿಹಾರವೂ ದೊರೆತಿಲ್ಲ ಎಂದು ಹೇಳಿದರು.
ಡಿಕೆ ಶಿವಕುಮಾರ್‌ಗೆ ಸವಾಲು
ಇದೇ ವೇಳೆ ಬೆಂಗಳೂರಿನ ಅಭಿವೃದ್ಧಿ ಹಾಗೂ ನಗರದ ಸುತ್ತಮುತ್ತಲಿನ ಭೂಮಿಯ ನಿರ್ವಹಣೆ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಕುಮಾರಸ್ವಾಮಿ ಅವಪು ಬಹಿರಂಗ ಚರ್ಚೆಗೆ ಪಂಥಾಹ್ವಾನ ನೀಡಿದರು.
“ಬನ್ನಿ, ಬಹಿರಂಗ ಚರ್ಚೆ ಮಾಡೋಣ. ಎಲ್ಲ ವಿಚಾರಗಳ ಬಗ್ಗೆಯೂ ಚರ್ಚಿಸಲು ನಾನು ಸಿದ್ಧ. ಬೆಂಗಳೂರನ್ನು ಪರಿವರ್ತನೆ ಮಾಡುತ್ತೇವೆ ಎಂದು ನೀವು ಹೇಳಿದ್ದೀರಿ. ಇದೀಗ ‘ಬ್ರ್ಯಾಂಡ್ ಬೆಂಗಳೂರು’ ಬಗ್ಗೆ ಮಾತನಾಡುತ್ತಿದ್ದೀರಿ. ಆದರೆ, ನಗರದ ಸುತ್ತಮುತ್ತಲಿನ ಭೂಮಿ ಮತ್ತು ಸಾರ್ವಜನಿಕ ಆಸ್ತಿಗಳಿಗೆ ಏನಾಗುತ್ತಿದೆ ಎಂಬುದನ್ನು ಜನರು ನೋಡುತ್ತಿದ್ದಾರೆ” ಎಂದು ಹೇಳಿದರು.