

ಚೆನ್ನೈ: ನಟಿ ಜಾನ್ವಿ ಕಪೂರ್ ಹಾಗೂ ಜೂನಿಯರ್ ಎನ್‌ಟಿಆರ್ ಕುರಿತ ಎಐ ರಚಿತ ವಿಡಿಯೋ ವ್ಯಾಪಕ ವೈರಲ್ ಆಗಿರುವಂತೆಯೇ ಇತ್ತ ಖ್ಯಾತನಾಮ ನಟ-ನಟಿಯರು ನಟಿ ಜಾನ್ವಿ ಕಪೂರ್ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ.
ಹೌದು.. ನಟಿ ಜಾನ್ವಿ ಕಪೂರ್ ಹಾಗೂ ಜೂನಿಯರ್ ಎನ್‌ಟಿಆರ್ ಅಭಿನಯದ ದೇವರ: ಪಾರ್ಟ್ 1 ಚಿತ್ರದ ‘ಚುಟ್ಟಮಲ್ಲೆ’ ಹಾಡಿಗೆ ಸಂಬಂಧಿಸಿದಂತೆ ಸೃಷ್ಟಿಸಲಾಗಿರುವ ಎನ್ನಲಾದ AI ಡೀಪ್‌ಫೇಕ್ ವಿಡಿಯೋ ವಿವಾದಕ್ಕೆ ಕಾರಣವಾಗಿದೆ. ನಿನ್ನೆಯಷ್ಟೇ ಇದೇ ವಿಚಾರವಾಗಿ ನಟ ಜೂನಿಯರ್ ಎನ್ ಟಿಆರ್ ಕೂಡ ಕೆಂಡಾಮಂಡಲರಾಗಿದ್ದರು.
ಇಂತಹ ವಿಡಿಯೋಗಳನ್ನು ಸೃಷ್ಟಿಸಿ ಹಂಚಿಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ದರು. ಬಳಿಕ ನಟ ಚಿರಂಜೀವಿ ಕೂಡ ಇಂತಹ ಕೃತ್ಯಗಳನ್ನು ಕ್ರೂರ ಮತ್ತು ಸ್ವೀಕಾರಾರ್ಹವಲ್ಲ ಎಂದು ಖಂಡಿಸಿದ್ದರು. ನಟರಾದ ವಿಜಯ್ ದೇವರಕೊಂಡ ಸೇರಿದಂತೆ ಹಲವರು ಜಾನ್ವಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಇದೀಗ ಖುಷ್ಬೂ ಸುಂದರ್ ಕೂಡ ಈ ಸಾಲಿಗೆ ಸೇರಿದ್ದಾರೆ.
ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಜಾನ್ವಿ ಕಪೂರ್ ಪರ ಧ್ವನಿ ಎತ್ತಿದ್ದು, ಮಹಿಳೆಯರ ಗೌರವವನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಹಾನಿಗೊಳಿಸುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.
‘ಇಂದು ಆಕೆ, ನಾಳೆ ನಾನು ಅಥವಾ ನೀವು’
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಖುಷ್ಬೂ, ಮತ್ತೊಬ್ಬ ಮಹಿಳೆಯನ್ನು ಡಿಜಿಟಲ್ ರೀತಿಯಲ್ಲಿ ಅವಮಾನಿಸಿ, ಆಕೆಯ ಗೌರವಕ್ಕೆ ಧಕ್ಕೆ ತಂದಾಗ ತಾವು ಮೌನವಾಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
'AI ತಂತ್ರಜ್ಞಾನದ ಮೂಲಕ ಸೃಷ್ಟಿಸಿ ಹಂಚಲಾಗಿರುವ ಇಂತಹ ವಿಡಿಯೋ ಜೋಕ್ ಅಲ್ಲ, ಮನರಂಜನೆಯಲ್ಲ ಮತ್ತು ಇಂತಹ ಕೃತ್ಯವನ್ನು ಎಂದಿಗೂ ಸಾಮಾನ್ಯವೆಂದು ಪರಿಗಣಿಸಬಾರದು. ಇದು ಕ್ರೂರ, ನಿಂದನೀಯ ಮತ್ತು ಅತ್ಯಂತ ನಾಚಿಕೆಗೇಡಿನ ಕೃತ್ಯ. ಇದು ಆಕೆಯ ಗೌರವವನ್ನು ಕಸಿದುಕೊಳ್ಳುವಂತಿದೆ. ಮಹಿಳೆಯನ್ನು ಗುರಿಯಾಗಿಸಿಕೊಂಡು ಮಾರ್ಫ್ ಮಾಡಿದ ವಿಡಿಯೋಗಳನ್ನು ಸೃಷ್ಟಿಸಿ ಹರಿಬಿಡುತ್ತಿರುವುದಕ್ಕೆ ನನಗೆ ತೀವ್ರ ಆಕ್ರೋಶವಿದೆ' ಎಂದು ಖುಷ್ಬೂ ಹೇಳಿದ್ದಾರೆ.
ತಂತ್ರಜ್ಞಾನವನ್ನು ಬಳಸಿಕೊಂಡು ಯಾವುದೇ ಮಹಿಳೆಯ ಗೌರವ, ಪ್ರತಿಷ್ಠೆ ಹಾಗೂ ಸುರಕ್ಷತೆಗೆ ಧಕ್ಕೆ ತರುವ ಪರಿಸ್ಥಿತಿ ನಿರ್ಮಾಣವಾಗಬಾರದು. ಇಂದು ಇದು ಆಕೆಯ ವಿಚಾರ. ನಾಳೆ ಅದು ನಾನು, ನೀವು, ನಮ್ಮ ಮಗಳು, ಸಹೋದರಿ, ತಾಯಿ ಅಥವಾ ನಾವು ಪ್ರೀತಿಸುವ ಯಾವುದೇ ಮಹಿಳೆಯಾಗಿರಬಹುದು. ಇಂದು ನಾವು ಬಲಿಪಶುಗಳಲ್ಲ ಎಂಬ ಕಾರಣಕ್ಕೆ ಮೌನವಾಗಿರಲು ಸಾಧ್ಯವಿಲ್ಲ. ಒಬ್ಬ ಮಹಿಳೆಯ ಗೌರವಕ್ಕೆ ಧಕ್ಕೆ ಉಂಟಾದಾಗ ಪ್ರತಿಯೊಬ್ಬ ಮಹಿಳೆ ಧ್ವನಿ ಎತ್ತಲು ಕಾರಣವಿದೆ” ಎಂದು ಖುಷ್ಬೂ ಹೇಳಿದ್ದಾರೆ.
‘ಮಹಿಳೆಯ ದೇಹ ಮನರಂಜನಾ ಕಂಟೆಂಟ್ ಅಲ್ಲ’
AI ಬಳಸಿ ಇಂತಹ ಕೃತ್ಯ ಎಸಗುವವರು, ಅದನ್ನು ಉದ್ದೇಶಪೂರ್ವಕವಾಗಿ ಹಂಚಿಕೊಳ್ಳುವವರು ಹಾಗೂ ಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಖುಷ್ಬೂ ಒತ್ತಾಯಿಸಿದ್ದಾರೆ.
ಇಂತಹ ಕೃತ್ಯಗಳಿಗೆ ಪರಿಣಾಮಕಾರಿ ಶಿಕ್ಷೆ ದೊರೆಯಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಅದು ಇತರರಿಗೆ ಎಚ್ಚರಿಕೆಯ ಸಂದೇಶವಾಗಬೇಕು. ಮಹಿಳೆಯ ದೇಹ ಕಂಟೆಂಟ್ ಅಲ್ಲ. ಆಕೆಯ ಗೌರವ ಮನರಂಜನೆಯಲ್ಲ. ಆಕೆಯ ಅವಮಾನ ಜೋಕ್ ಅಲ್ಲ. AI ಎಂದಿಗೂ ಮಹಿಳೆಯರ ವಿರುದ್ಧದ ಅಸ್ತ್ರವಾಗಬಾರದು. ಮಹಿಳೆಯರಾಗಿ ನಾವು ಒಗ್ಗಟ್ಟಿನಿಂದ ನಿಂತು ‘ಸಾಕು’ ಎಂದು ಹೇಳಬೇಕು” ಎಂದು ಖುಷ್ಬೂ ಹೇಳಿದ್ದಾರೆ.
ಏನಿದು ‘ಚುಟ್ಟಮಲ್ಲೆ’ ವಿವಾದ?
ಕೊರಟಾಲ ಶಿವ ನಿರ್ದೇಶನದ ದೇವರ: ಪಾರ್ಟ್ 1 ಚಿತ್ರವು 2024ರ ಸೆಪ್ಟೆಂಬರ್ 24ರಂದು ತೆರೆಕಂಡಿತ್ತು. ಜೂನಿಯರ್ ಎನ್‌ಟಿಆರ್, ಜಾನ್ವಿ ಕಪೂರ್ ಹಾಗೂ ಸೈಫ್ ಅಲಿ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ‘ಚುಟ್ಟಮಲ್ಲೆ’ ಹಾಡಿನಲ್ಲಿ ಜಾನ್ವಿ ಕಪೂರ್ ಮತ್ತು ಜೂನಿಯರ್ ಎನ್‌ಟಿಆರ್ ಕಾಣಿಸಿಕೊಂಡಿದ್ದರು.
ಇದೇ ಹಾಡಿನ ದೃಶ್ಯಗಳನ್ನು ಆಧರಿಸಿ AI ಮೂಲಕ ತಿರುಚಲಾದ ಡೀಪ್‌ಫೇಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಪ್ರಕರಣವು AI ತಂತ್ರಜ್ಞಾನವನ್ನು ಬಳಸಿಕೊಂಡು ಮಹಿಳೆಯರ ಚಿತ್ರಣವನ್ನು ತಿರುಚಿ ಅವಮಾನಿಸುವುದರ ವಿರುದ್ಧ ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಗಿದೆ.