

ಹೈದರಾಬಾದ್: ಟಾಲಿವುಡ್ ಸೂಪರ್ ಸ್ಟಾರ್ ನಟ ಜೂನಿಯರ್ ಎನ್ ಟಿಆರ್ ವಿಚಾರವೊಂದಕ್ಕೆ ಕೆಂಡಾಮಂಡಲರಾಗಿದ್ದು, 'ಕ್ಷಮಿಸೋ ಮಾತೇ ಇಲ್ಲ.. ಕಾನೂನು ಕ್ರಮ ಖಂಡಿತ ಕೈಗೊಳ್ಳುತ್ತೇನೆ' ಎಂದು ಹೇಳಿದ್ದಾರೆ.
ನಟಿ ಜಾನ್ವಿ ಕಪೂರ್ ಅಭಿನಯದ ‘ದೇವರ’ ಚಿತ್ರದ ಜನಪ್ರಿಯ ‘ಚುಟ್ಟಮಲ್ಲೆ’ ಹಾಡಿನ ದೃಶ್ಯಗಳನ್ನು ಕೃತಕ ಬುದ್ಧಿಮತ್ತೆ (AI) ಮೂಲಕ ಮಾರ್ಫ್ ಮಾಡಿ ಅಶ್ಲೀಲ ರೀತಿಯಲ್ಲಿ ಸೃಷ್ಟಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ನಟ ಜೂನಿಯರ್ ಎನ್‌ಟಿಆರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾನ್ವಿ ಕಪೂರ್ ಹಾಗೂ ಜೂನಿಯರ್ ಎನ್‌ಟಿಆರ್ ಅಭಿನಯಿಸಿರುವ ಮೂಲ ಹಾಡಿನ ದೃಶ್ಯಗಳನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ತಿರುಚಿ, ಮೂಲ ವಿಡಿಯೋದಲ್ಲಿ ಇಲ್ಲದ ಲೈಂಗಿಕ ದೃಶ್ಯಗಳಂತೆ ಬಿಂಬಿಸಲಾಗಿದೆ ಎಂದು ವರದಿಯಾಗಿದೆ.
ಈ ಕೃತ್ಯದ ವಿರುದ್ಧ ಸಾಮಾಜಿಕ ಜಾಲತಾಣ Xನಲ್ಲಿ ಪ್ರತಿಕ್ರಿಯಿಸಿರುವ Jr NTR, ಇಂತಹ ವಿಡಿಯೋಗಳನ್ನು ಸೃಷ್ಟಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
'‘ಅಸಹ್ಯ, ವಿಕೃತ, ನಾಚಿಕೆಗೇಡು’.. ಕ್ಷಮಿಸೋ ಮಾತೇ ಇಲ್ಲ.. ಕಾನೂನು ಕ್ರಮ ಖಂಡಿತ'
“ಅಸಹ್ಯ, ವಿಕೃತ ಮತ್ತು ನಾಚಿಕೆಗೇಡು. ಮಹಿಳೆಯರನ್ನು ತಾಯಿ ಮತ್ತು ದೇವತೆಯ ರೂಪದಲ್ಲಿ ಗೌರವಿಸುವ ದೇಶದಲ್ಲಿ, AI ಬಳಸಿ ಮಹಿಳೆಯನ್ನು ಅತ್ಯಂತ ಅವಹೇಳನಕಾರಿ ರೀತಿಯಲ್ಲಿ ತೋರಿಸುವ ಮಟ್ಟಕ್ಕೆ ಕೆಲವರು ಇಳಿದಿರುವುದು ನಾಚಿಕೆಗೇಡಿನ ಸಂಗತಿ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾರ್ಫ್ಡ್ ‘ಚುಟ್ಟಮಲ್ಲೆ’ ವಿಡಿಯೋವನ್ನು ಸೃಷ್ಟಿಸಿದವರು ಹಾಗೂ ಅದನ್ನು ಹರಡುತ್ತಿರುವವರ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ. ಈ ವಿಡಿಯೋವನ್ನು ಸೃಷ್ಟಿಸಿದವರನ್ನಾಗಲಿ, ಹರಡುತ್ತಿರುವವರನ್ನಾಗಲಿ ನಾನು ಬಿಡುವುದಿಲ್ಲ. ಸಾಧ್ಯವಿರುವ ಎಲ್ಲ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತೇನೆ. ಇಂತಹ ವಿಷಯಗಳನ್ನು ದಯವಿಟ್ಟು ನೋಡಬೇಡಿ, ಹಂಚಿಕೊಳ್ಳಬೇಡಿ ಅಥವಾ ಅದರೊಂದಿಗೆ ತೊಡಗಿಸಿಕೊಳ್ಳಬೇಡಿ” ಎಂದು ನಟ ಜೂನಿಯರ್ ಎನ್ ಟಿಆರ್ ಅವರು ಮನವಿ ಮಾಡಿದ್ದಾರೆ.
ಅಲ್ಲದೆ ಇಂದು ಬೇರೊಬ್ಬ ಮಹಿಳೆಯ ವಿಚಾರವಾಗಿರಬಹುದು; ನಾಳೆ ಇದೇ ರೀತಿಯ ಕೃತ್ಯಕ್ಕೆ ನಿಮ್ಮ ತಾಯಿ, ಸಹೋದರಿ, ಪತ್ನಿ ಅಥವಾ ಮಗಳು ಗುರಿಯಾಗಬಹುದು ಎಂದೂ ಅವರು ಎಚ್ಚರಿಸಿದ್ದಾರೆ.
AI ದುರ್ಬಳಕೆ ವಿರುದ್ಧ ಕಠಿಣ ನಿಯಮಕ್ಕೆ ಒತ್ತಾಯ
AI ತಂತ್ರಜ್ಞಾನದ ದುರ್ಬಳಕೆ ಗಂಭೀರ ಸಮಸ್ಯೆಯಾಗಿದ್ದು, ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಠಿಣವಾಗಿ ಕ್ರಮ ಕೈಗೊಳ್ಳಬೇಕು ಎಂದು Jr NTR ಒತ್ತಾಯಿಸಿದ್ದಾರೆ. “AI ದುರ್ಬಳಕೆಯ ವಿರುದ್ಧ ಕಠಿಣ ನಿಯಮಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರಗಳು ಹಾಗೂ ಭಾರತ ಸರ್ಕಾರ ಬಲವಾದ ಕ್ರಮ ಕೈಗೊಳ್ಳಬೇಕು,” ಎಂದು ಅವರು ಹೇಳಿದ್ದಾರೆ.
‘ಚುಟ್ಟಮಲ್ಲೆ’ ಹಾಡು ಏಕೆ ಜನಪ್ರಿಯ?
‘ದೇವರ’ ಚಿತ್ರದ ‘ಚುಟ್ಟಮಲ್ಲೆ’ ಹಾಡು ಜಾನ್ವಿ ಕಪೂರ್ ಮತ್ತು Jr NTR ಅಭಿನಯದ ಪ್ರಮುಖ ರೊಮ್ಯಾಂಟಿಕ್ ಹಾಡಾಗಿದೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯ ಬರೆದಿದ್ದು, ಶಿಲ್ಪಾ ರಾವ್ ಧ್ವನಿ ನೀಡಿದ್ದಾರೆ. ಬಾಸ್ಕೋ ಮಾರ್ಟಿಸ್ ನೃತ್ಯ ಸಂಯೋಜನೆ ಮಾಡಿದ್ದಾರೆ.
ಅಂದಹಾಗೆ ಈ ದೇವರ ಚಿತ್ರ ಹಾಡು ತೆಲುಗು, ತಮಿಳು, ಹಿಂದಿ, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. 2024ರ ಸೆಪ್ಟೆಂಬರ್ 27ರಂದು ‘ದೇವರ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಕೊರಟಾಲ ಶಿವ ನಿರ್ದೇಶನದ ಚಿತ್ರದಲ್ಲಿ Jr NTR ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಜಾನ್ವಿ ಕಪೂರ್, ಸೈಫ್ ಅಲಿ ಖಾನ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.