ಮೂಡಾ 
ರಾಜ್ಯ

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣಕ್ಕೆ ಸಂಬಂಧಿಸಿದಂತೆ, ವಿವಾದಾತ್ಮಕ 50:50 ಅನುಪಾತದ ನಿಯಮದಡಿ ಅಕ್ರಮವಾಗಿ ಹಂಚಿಕೆಯಾಗಿದ್ದ ಎಲ್ಲಾ 1,100 ಬದಲಿ ನಿವೇಶನಗಳ ಹಂಚಿಕೆಯನ್ನು ತಕ್ಷಣದಿಂದಲೇ ರದ್ದುಗೊಳಿಸಿ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಹಗರಣದಲ್ಲಿ ಪ್ರಮುಖ ಟ್ವಿಸ್ಟ್ ಸಿಕ್ಕಿದ್ದು, ವಿವಾದಾತ್ಮಕ 50:50 ಅನುಪಾತದ ನಿಯಮದಡಿ ಅಕ್ರಮವಾಗಿ ಹಂಚಿಕೆಯಾಗಿದ್ದ ಎಲ್ಲಾ 1,100 ಬದಲಿ ನಿವೇಶನಗಳ ಹಂಚಿಕೆಯನ್ನು ತಕ್ಷಣದಿಂದಲೇ ರದ್ದುಗೊಳಿಸಿ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ್ದಾರೆ. ಈ ಐತಿಹಾಸಿಕ ತೀರ್ಮಾನದಿಂದಾಗಿ ಸರ್ಕಾರಕ್ಕೆ ಬರೋಬ್ಬರಿ ₹2,000 ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿ ಉಳಿದಂತಾಗಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಪ್ರಕರಣ?

ಮುಡಾ 50:50 ಹಗರಣ ಎಂದರೆ ಸಾರ್ವಜನಿಕ ಸೌಲಭ್ಯಗಳಿಗಾಗಿ (ರಸ್ತೆ, ಪಾರ್ಕ್ ಇತ್ಯಾದಿ) ರೈತರಿಂದ ಅಥವಾ ಜಮೀನು ಮಾಲೀಕರಿಂದ ಮುಡಾ ಪ್ರಾಧಿಕಾರವು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತದೆ. ಈ ಯೋಜನೆ ಅಡಿಯಲ್ಲಿ, ಭೂಮಿ ಕಳೆದುಕೊಂಡ ಮಾಲೀಕರಿಗೆ ಹಣದ ಬದಲಾಗಿ, ಅಭಿವೃದ್ಧಿಪಡಿಸಿದ ಬಡಾವಣೆಯಲ್ಲಿ ಶೇ. 50 ರಷ್ಟು ನಿವೇಶನಗಳನ್ನು ಬದಲಿ ಪರಿಹಾರವಾಗಿ ನೀಡಲು 2020 ರಲ್ಲಿ ಒಂದು ನಿರ್ಣಯ ಕೈಗೊಳ್ಳಲಾಗಿತ್ತು. ಅಂದರೆ, ಮಾಲೀಕರು ನೀಡಿದ 1 ಎಕರೆ ಭೂಮಿಗೆ ಪ್ರತಿಯಾಗಿ ಮುಡಾ ಅಭಿವೃದ್ಧಿಪಡಿಸಿದ ನಿವೇಶನಗಳ ಅರ್ಧದಷ್ಟು ಭಾಗವನ್ನು ಅವರಿಗೆ ನೀಡಬೇಕಿತ್ತು.

ಆದರೆ, ಮುಡಾ ಮಂಡಳಿಯ ಗಮನಕ್ಕೆ ತರದೆ, ನಕಲಿ ಮತ್ತು ಬೋಗಸ್ ದಾಖಲೆಗಳನ್ನು ಸೃಷ್ಟಿಸಿ ಅನರ್ಹ ವ್ಯಕ್ತಿಗಳಿಗೆ ಅತ್ಯಂತ ದುಬಾರಿ ಮತ್ತು ಪೋಷ್ ಏರಿಯಾಗಳಲ್ಲಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅದರಲ್ಲೂ, ಈ ಯೋಜನೆಯಲ್ಲಿ ಅಕ್ರಮಗಳು ನಡೆಯುತ್ತಿರುವುದನ್ನು ಗಮನಿಸಿ, ರಾಜ್ಯ ಸರ್ಕಾರವು ಮಾರ್ಚ್ 14, 2023 ರಂದೇ ಈ 50:50 ಅನುಪಾತದಡಿ ನಿವೇಶನ ಹಂಚಿಕೆ ಮಾಡುವುದನ್ನು ನಿಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿತ್ತು. ಆದಾಗ್ಯೂ, ಮುಡಾ ಅಧಿಕಾರಿಗಳು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಹಿಂಬಾಗಿಲಿನಿಂದ ನಿವೇಶನಗಳ ಹಂಚಿಕೆಯನ್ನು ಮುಂದುವರಿಸಿದ್ದರು.

ಹಾಗಾಗಿ, ರಾಜ್ಯ ಸರಕಾರವು, ಈ ಕುರಿತ ಸಮಗ್ರ ತನಿಖೆಗಾಗಿ, ನ್ಯಾಯಮೂರ್ತಿ ಪಿ.ಎನ್. ದೇಸಾಯಿ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ಮತ್ತು ಉನ್ನತ ಮಟ್ಟದ ತಾಂತ್ರಿಕ ಸಮಿತಿಯನ್ನು ನೇಮಿಸಿತ್ತು. ಅದರಂತೆ, ತನಿಖಾ ಆಯೋಗದ ವರದಿಯಲ್ಲಿ ಈ ನಿಯಮ ಉಲ್ಲಂಘನೆ ಸಾಬೀತಾದ ಹಿನ್ನೆಲೆಯಲ್ಲಿ, ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು, ಅಕ್ರಮವಾಗಿ ಹಂಚಿಕೆಯಾಗಿದ್ದ ಎಲ್ಲಾ 1,100 ನಿವೇಶನಗಳನ್ನು ತಕ್ಷಣದಿಂದ ರದ್ದುಗೊಳಿಸಿದ್ದಾರೆ. ಈ ಮೂಲಕ ಸುಮಾರು ₹2,000 ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿಯನ್ನು ಸರ್ಕಾರ ಮರಳಿ ವಶಕ್ಕೆ ಪಡೆದುಕೊಂಡಿದೆ. ಅದರಂತೆ, ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ. ಲತಾ ಅವರು ಈ ಆದೇಶವನ್ನು ಮುಡಾ ಆಯುಕ್ತರಿಗೆ ಅಧಿಕೃತವಾಗಿ ರವಾನಿಸಿದ್ದಾರೆ.

ಈಗಾಗಲೇ ರಿಜಿಸ್ಟರ್ ಆಗಿರುವ ಸೈಟ್‌ಗಳ ಕಥೆ ಏನು?

ಕೇವಲ ಹಂಚಿಕೆ ಆದೇಶ ರದ್ದು ಮಾಡುವುದಷ್ಟೇ ಅಲ್ಲದೆ, ಈಗಾಗಲೇ ಪ್ರಭಾವಿಗಳ ಹೆಸರಿಗೆ ನೋಂದಣಿಯಾಗಿರುವ ಸೈಟ್‌ಗಳ ಮೇಲೂ ಸರ್ಕಾರ ಗದಾಪ್ರಹಾರ ನಡೆಸಿದೆ. ಅದರಂತೆ, ಈಗಾಗಲೇ ಉಪನೋಂದಣಾಧಿಕಾರಿ (ಸಬ್-ರಿಜಿಸ್ಟ್ರಾರ್) ಕಚೇರಿಯಲ್ಲಿ ಕ್ರಯಪತ್ರ ಆಗಿರುವ ನಿವೇಶನಗಳನ್ನು ಕಾನೂನಾತ್ಮಕವಾಗಿ ರದ್ದುಪಡಿಸಲು ತಕ್ಷಣವೇ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲು ಮುಡಾ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಇದರೊಂದಿಗೆ, ಈಗಾಗಲೇ ಅಕ್ರಮವಾಗಿ ಹಂಚಿಕೆಯಾಗಿ, ನೋಂದಣಿಯಾಗಿರುವ ನಿವೇಶನಗಳಿಗೆ ಖಾತಾ ಮಾಡಿಕೊಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಮೈಸೂರು ಮಹಾನಗರ ಪಾಲಿಕೆ, ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಆದೇಶಿಸಲಾಗಿದೆ. ಒಂದು ವೇಳೆ ಈಗಾಗಲೇ ಖಾತಾ ಆಗಿದ್ದರೆ, ಅವುಗಳನ್ನೂ ರದ್ದುಗೊಳಿಸಲು ಸೂಚಿಸಲಾಗಿದೆ. ಜೊತೆಗೆ, ಸರ್ಕಾರದ ಮುಂದಿನ ಸ್ಪಷ್ಟ ಮಾರ್ಗಸೂಚಿ ಅಥವಾ ಆದೇಶ ಬರುವವರೆಗೂ ಮುಡಾ ಪ್ರಾಧಿಕಾರದಿಂದ ಯಾವುದೇ ಹೊಸ ಕ್ರಯಪತ್ರಗಳನ್ನು ಯಾರಿಗೂ ನೀಡದಂತೆ ಕಟ್ಟುನಿಟ್ಟಾಗಿ ತಡೆಯೊಡ್ಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತಪ್ಪಾದ DPR ಸಿದ್ಧಪಡಿಸುವ ಸಲಹೆಗಾರರೇ ಹೆದ್ದಾರಿ ಅಪಘಾತಗಳು ಮತ್ತು ಸಾವುಗಳಿಗೆ 'ತಪ್ಪಿತಸ್ಥರು': ನಿತಿನ್ ಗಡ್ಕರಿ ಕಠಿಣ ಕ್ರಮದ ಎಚ್ಚರಿಕೆ!

ಕೇವಲ 4 ಚಿತ್ರ ಮಾಡಿದ ನಟನಿಗೆ 'ಸರ್' ಅಂತೀರಲ್ಲ ಶಿವಣ್ಣ; ಸೆಂಚೂರಿ ಸ್ಟಾರ್ ವಿರುದ್ಧ ಕನ್ನಡಿಗರ ಬೇಸರ, Video!

ಶ್ರೀಲಂಕಾ ವಿರುದ್ಧ 165 ರನ್ ಗಳಿಂದ ಗೆಲುವು: WTC ಪಾಯಿಂಟ್ ಪಟ್ಟಿಯಲ್ಲಿ ಭಾರತದ ಸ್ಥಾನ ಬದಲಾವಣೆ ಆಯ್ತಾ?

ಸಿಎಂ ವಿಜಯ್ ಯು- ಟರ್ನ್: ಮತ್ತೊಂದು ಮಹತ್ವದ ಆದೇಶ ಹಿಂಪಡೆದ ತಮಿಳುನಾಡು ಸರ್ಕಾರ!

ದಾವಣಗೆರೆ-ಹರಿಹರ ಅವಳಿ ನಗರ ಅಭಿವೃದ್ಧಿಗೆ 'ಮಾಸ್ಟರ್ ಪ್ಲಾನ್ 2041' ಕ್ಕೆ ಸರ್ಕಾರದ ಅನುಮೋದನೆ!