ಬೆಂಗಳೂರು: ಕೆ.ಆರ್. ಮಾರುಕಟ್ಟೆಯ ಮುಕ್ತ ಪ್ರದೇಶಗಳಲ್ಲಿ ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಿಗಳನ್ನು ತಕ್ಷಣವೇ ಒಕ್ಕಲೆಬ್ಬಿಸದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ.
ಆದರೆ, ವ್ಯಾಪಾರಿಗಳು ಯಾವುದೇ ತಾತ್ಕಾಲಿಕ ಅಥವಾ ಶಾಶ್ವತ ಕಟ್ಟಡಗಳನ್ನು ನಿರ್ಮಿಸಬಾರದು ಎಂಬ ಷರತ್ತನ್ನೂ ನ್ಯಾಯಾಲಯ ವಿಧಿಸಿದೆ.
ಸ್ಟ್ರೀಟ್ ವೆಂಡಿಂಗ್ ಸಮಿತಿ (ಎಸ್‌ವಿಸಿ) ಅರ್ಜಿದಾರರ ಮನವಿಯನ್ನು ಪರಿಶೀಲಿಸಿ, ಸೂಕ್ತ ಪ್ರಮಾಣಪತ್ರ ನೀಡಿ ಅವರಿಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವ ಸಾಧ್ಯತೆಯನ್ನು ಪರಿಶೀಲಿಸುವವರೆಗೆ ಈ ವ್ಯವಸ್ಥೆ ಮುಂದುವರಿಯಲಿದೆ.
ಕೆ.ಆರ್. ಮಾರುಕಟ್ಟೆ ಪ್ರದೇಶದ ಸುತ್ತಮುತ್ತಲಿನ ಮುಕ್ತ ಜಾಗ, ಪ್ರವೇಶ ಮತ್ತು ನಿರ್ಗಮನ ಮಾರ್ಗಗಳಿಗೆ ಕನಿಷ್ಠ ಅಡಚಣೆಯಾಗುವಂತೆ ಜಿಬಿಎ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ತಿಳಿಸಿದೆ.
ವಿಶೇಷವಾಗಿ ಅಗ್ನಿಶಾಮಕ ವಾಹನಗಳು, ಆಂಬ್ಯುಲೆನ್ಸ್‌ಗಳು ಹಾಗೂ ಸರಕು ಲೋಡ್ ಮತ್ತು ಅನ್‌ಲೋಡ್ ಮಾಡುವ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ.
ಅರ್ಜಿದಾರರಾದ ಶ್ರೀ ಕೃಷ್ಣ ರಾಜೇಂದ್ರ ಫುಟ್‌ಪಾತ್ ತರಕಾರಿ ಮತ್ತು ಸಾಮಾನ್ಯ ವ್ಯಾಪಾರಿಗಳ ಸಂಘ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ವಿಲೇವಾರಿ ಮಾಡುವ ವೇಳೆ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಈ ಆದೇಶ ನೀಡಿದ್ದಾರೆ.
ಆಗಸ್ಟ್ 6ರಂದು ನಡೆದ ವಿಚಾರಣೆ ವೇಳೆ, ಅರ್ಜಿದಾರರ ಸಂಘದ ಸದಸ್ಯರು ಕೆ.ಆರ್. ಮಾರುಕಟ್ಟೆ ಆವರಣದಲ್ಲಿ ಅಥವಾ ಫುಟ್‌ಪಾತ್‌ನಲ್ಲಿ ಯಾವುದೇ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆಯೇ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಬೆಂಗಳೂರು ನಗರ ಕೇಂದ್ರ ಪಾಲಿಕೆಯ ಜಂಟಿ ಆಯುಕ್ತರಿಗೆ ನ್ಯಾಯಾಲಯ ಸೂಚಿಸಿತ್ತು.
ಒಂದು ವೇಳೆ ಫುಟ್‌ಪಾತ್ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದರೆ, ಅವರನ್ನು ಯಾವ ಪರಿಸ್ಥಿತಿಯಲ್ಲಿ ಸ್ಥಳಾಂತರಿಸಬಹುದು ಅಥವಾ ವ್ಯಾಪಾರ ನಿಲ್ಲಿಸುವಂತೆ ಸೂಚಿಸಬಹುದು ಎಂಬುದನ್ನೂ ವರದಿಯಲ್ಲಿ ತಿಳಿಸುವಂತೆ ಕೋರಲಾಗಿತ್ತು.
ಇದಕ್ಕೆ ಪ್ರತಿಯಾಗಿ ಜಂಟಿ ಆಯುಕ್ತರ ಪರವಾಗಿ ಸಹಾಯಕ ಕಂದಾಯ ಅಧಿಕಾರಿ, ಸಂಬಂಧಿತ ಕಾನೂನಿನ ಅಡಿಯಲ್ಲಿ ಅರ್ಜಿದಾರರ ಸಂಘದ ಯಾವುದೇ ಸದಸ್ಯರಿಗೆ ಸ್ಟ್ರೀಟ್ ವೆಂಡಿಂಗ್ ಪ್ರಮಾಣಪತ್ರ ನೀಡಲಾಗಿಲ್ಲ ಎಂದು ವಾದಿಸಿದರು.
ಅಲ್ಲದೆ, ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳ ಸಂಚಾರಕ್ಕೆ ಮೀಸಲಾದ ಪ್ರದೇಶ ಹಾಗೂ ಮಾರ್ಗಗಳನ್ನು ಸಂಘದ ಸದಸ್ಯರು ಬಳಸುತ್ತಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಅರ್ಜಿದಾರರ ಪರ ವಕೀಲರು, ವ್ಯಾಪಾರಿಗಳ ಜೀವನೋಪಾಯಕ್ಕೆ ಏಕಾಏಕಿ ಧಕ್ಕೆ ಉಂಟುಮಾಡುವ ಬದಲು ಸ್ಥಳಾಂತರಗೊಳ್ಳಲು ಸಮಂಜಸವಾದ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಮುಂದಿನ ವಿಚಾರಣೆ ನಡೆಯುವವರೆಗೆ ಅಧಿಕಾರಿಗಳು ಯಾವುದೇ ಆತುರದ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿತು. ಆದರೆ, ತುರ್ತು ಪರಿಸ್ಥಿತಿಯಲ್ಲಿ ಜಿಬಿಎ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವುದಕ್ಕೆ ಸಂಘದ ಸದಸ್ಯರು ಯಾವುದೇ ರೀತಿಯಲ್ಲೂ ಅಡ್ಡಿಪಡಿಸಬಾರದು ಎಂದು ಸ್ಪಷ್ಟಪಡಿಸಿತು.