ಮಡಿಕೇರಿ: ಆಗಸ್ಟ್ 9ರಂದು ಯಡೂರು ಗ್ರಾಮದಲ್ಲಿ ಎಸ್ಟೇಟ್ ಕಾರ್ಮಿಕನ ಸಾವಿಗೆ ಕಾರಣವಾಗಿದ್ದ ಪುಂಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ.
ಘಟನೆ ನಡೆದ ಸ್ಥಳದಿಂದ ಸುಮಾರು 3 ಕಿ.ಮೀ ದೂರದಲ್ಲಿ ಆನೆಯ ಚಲನವಲನ ಪತ್ತೆಹಚ್ಚಿದ ಅರಣ್ಯ ಇಲಾಖೆ ಸಿಬ್ಬಂದಿ, ಅದಕ್ಕೆ ಅರಿವಳಿಕೆ ಮದ್ದು ನೀಡಿ ಸೆರೆಹಿಡಿದಿದ್ದಾರೆ.
ಸುಮಾರು 32 ವರ್ಷ ವಯಸ್ಸಿನ ಗಂಡು ಕಾಡಾನೆಯನ್ನು ಕುಶಾಲನಗರದ ದುಬಾರೆ ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷದ ಜನವರಿಯಿಂದ ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಅಮ್ಮತ್ತಿ-ಸಿದ್ದಾಪುರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿವೆ.
ಎರಡು ದಿನಗಳ ಹಿಂದೆ ಕಾಡಾನೆ ದಾಳಿಯಲ್ಲಿ ವಲಸೆ ಕಾರ್ಮಿಕನೊಬ್ಬ ಮೃತಪಟ್ಟ ಬಳಿಕ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಇದರ ಬೆನ್ನಲ್ಲೇ ಅಮ್ಮತ್ತಿ-ಸಿದ್ದಾಪುರ ಪ್ರದೇಶದಲ್ಲಿ ಕಾಡಾನೆಗಳನ್ನು ಸೆರೆಹಿಡಿಯಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು.
ಅದರಂತೆ ಮಂಗಳವಾರದಿಂದಲೇ ಕಾರ್ಯಾಚರಣೆ ಆರಂಭಿಸಲಾಗಿತ್ತು. ಆಗಸ್ಟ್ 9ರಂದು ಯಡೂರು ಗ್ರಾಮದಲ್ಲಿ ಎಸ್ಟೇಟ್ ಕಾರ್ಮಿಕ ಅಣ್ಣಪ್ಪ ಅವರ ಸಾವಿಗೆ ಕಾರಣವಾಗಿದ್ದ ಆನೆಯನ್ನು ಮೊದಲು ಸೆರೆಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ರೂಪಿಸಿತ್ತು.
ಮಂಗಳವಾರ ಹಲವು ಪ್ರಯತ್ನಗಳನ್ನು ನಡೆಸಿದರೂ ಆನೆ ತಪ್ಪಿಸಿಕೊಂಡಿತ್ತು. ಆದರೆ ,ಬುಧವಾರ ಸಂಜೆ ಯಡೂರು ಗ್ರಾಮದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಚೆಂಬೆಬೆಳ್ಳೂರು ಗ್ರಾಮದ ಸಮೀಪದ ಎಸ್ಟೇಟ್‌ನಲ್ಲಿ ಆನೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಸೆರೆ ಕಾರ್ಯಾಚರಣೆಯಲ್ಲಿ ಜಿಲ್ಲೆಯ ವಿವಿಧ ಆನೆ ಶಿಬಿರಗಳ ಐದು ಸಾಕಾನೆಗಳು ಸೇರಿದಂತೆ 120ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.
ಸೆರೆ ಹಿಡಿಯುವ ವೇಳೆ ಆನೆ ತೀವ್ರ ಪ್ರತಿರೋಧ ತೋರಿದ್ದು, ಬಳಿಕ ಶಾರ್ಪ್‌ಶೂಟರ್ ರಂಜನ್ ಅರಿವಳಿಕೆ ಮದ್ದು ಪ್ರಯೋಗಿಸಿ ಆನೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವಿರ್ಷ್ಣಿ, ವಿರಾಜಪೇಟೆ ಡಿಸಿಎಫ್ ವಿನೀತಾ ಚವ್ಹಾಣ್, ಮಡಿಕೇರಿ ಡಿಸಿಎಫ್ ಅಭಿಷೇಕ್ ಸೇರಿದಂತೆ ಹಲವು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಯ ಸ್ಥಳದಲ್ಲಿ ಉಪಸ್ಥಿತರಿದ್ದರು.
ಈ ನಡುವೆ ಗುರುತಿಸಲಾಗಿರುವ ಮತ್ತೊಂದು ಗಂಡು ಕಾಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಶುಕ್ರವಾರದಿಂದ ಮತ್ತೊಂದು ಕಾರ್ಯಾಚರಣೆ ಆರಂಭಿಸಲಿದೆ.