ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (BIAL) ಸಂಸ್ಥೆಗಳು ಗುರುವಾರ ವಿಮಾನ ನಿಲ್ದಾಣ ಟರ್ಮಿನಲ್ ಮೆಟ್ರೋ ನಿಲ್ದಾಣ ಹಾಗೂ ಏರ್‌ಪೋರ್ಟ್ ವೆಸ್ಟ್ ಮೆಟ್ರೋ ನಿಲ್ದಾಣಗಳ ನಿರ್ಮಾಣ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ್ದು, ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಲು ಗಡುವು ನಿಗದಿಪಡಿಸಿವೆ.
ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ಸಿ. ಜಾಫರ್ ಮತ್ತು ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹರಿ ಮಾರರ್ ನೇತೃತ್ವದಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಎರಡೂ ಸಂಸ್ಥೆಗಳ ನಡುವಿನ ವಿವಿಧ ಕಾಮಗಾರಿಗಳ ಸಮನ್ವಯ ಕುರಿತು ಚರ್ಚಿಸಲಾಯಿತು.
ಹಳಿ ಕಾಮಗಾರಿ, ವಿದ್ಯುತ್ ಪೂರೈಕೆ ವ್ಯವಸ್ಥೆ, ಸಿಗ್ನಲಿಂಗ್, ವಾಸ್ತುಶಿಲ್ಪದ ಅಂತಿಮ ಕಾಮಗಾರಿ ಸೇರಿದಂತೆ ಹಲವು ವಿಷಯಗಳ ಕುರಿತು ಅಧಿಕಾರಿಗಳು ಚರ್ಚೆ ನಡೆಸಿದರು.
ಅಧಿಕಾರಿಗಳು ಏರ್‌ಪೋರ್ಟ್ ಟರ್ಮಿನಲ್ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿ, ಪ್ರಯಾಣಿಕರ ಸೌಲಭ್ಯಗಳು ಹಾಗೂ ವಿವಿಧ ವ್ಯವಸ್ಥೆಗಳ ಅಳವಡಿಕೆ ಕಾಮಗಾರಿಯನ್ನೂ ಪರಿಶೀಲಿಸಿದರು.
ಈ ಮೆಟ್ರೋ ನಿಲ್ದಾಣವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ಗೆ ನೇರ ಸಂಪರ್ಕ ಕಲ್ಪಿಸಲಿದೆ. ಟರ್ಮಿನಲ್-1 ಅನ್ನು ಟ್ರಾವಲೇಟರ್‌ಗಳನ್ನು ಹೊಂದಿರುವ ಮೇಲ್ಸೇತುವೆ ಮೂಲಕ ಸಂಪರ್ಕಿಸಲಾಗುತ್ತದೆ.
ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸಾಮಾನುಗಳ ತಪಾಸಣೆ ವ್ಯವಸ್ಥೆ, ಬ್ಯಾಗೇಜ್ ಡ್ರಾಪ್ ಸೌಲಭ್ಯ ಹಾಗೂ ಚೆಕ್-ಇನ್ ಕೌಂಟರ್‌ಗಳು ಇರಲಿವೆ.
ವಿಮಾನ ನಿಲ್ದಾಣದ ಬಹು ಮಾದರಿ ಸಾರಿಗೆ ಕೇಂದ್ರದಲ್ಲಿ ಮೆಟ್ರೋ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಕಾರು ಪಾರ್ಕಿಂಗ್ ಸೌಲಭ್ಯಗಳ ಜೊತೆಗೆ ನಗರ ಹಾಗೂ ಅಂತರ್ ನಗರ ಬಸ್ ಸೇವೆಗಳಿಗೂ ಮೆಟ್ರೋ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಇರಲಿದೆ.
ಬಾಕಿ ಉಳಿದಿರುವ ಕಾಮಗಾರಿಗಳು ಹಾಗೂ ವಿವಿಧ ಚಟುವಟಿಕೆಗಳನ್ನು ಪೂರ್ಣಗೊಳಿಸುವ ಗಡುವಿನ ಕುರಿತು ಬಿಎಂಆರ್‌ಸಿಎಲ್ ಮತ್ತು ಬಿಐಎಎಲ್ ಅಧಿಕಾರಿಗಳು ಸಭೆಯಲ್ಲಿ ಚರ್ಚಿಸಿ ಅಂತಿಮಗೊಳಿಸಿದ್ದಾರೆ.