ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ಸಾಕ್ಷಿಯೊಬ್ಬರಿಗೆ ಅವರ ಬೆಂಬಲಿಗರಿಂದ ದೂರವಾಣಿ ಮೂಲಕ ಬೆದರಿಕೆ ಕರೆಗಳು ಬಂದಿವೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಗುರುವಾರ ವಿಶೇಷ ನ್ಯಾಯಾಲಯವೊಂದು ಈ ಬೆದರಿಕೆ ಕರೆಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅಪರಾಧ ತನಿಖಾ ದಳದ (CID)ವಿಶೇಷ ತನಿಖಾ ತಂಡಕ್ಕೆ (SIT)ನಿರ್ದೇಶನ ನೀಡಿದೆ.
ಹಾಸನದ ಹೊಳೆನರಸೀಪುರದಲ್ಲಿರುವ ನಿವಾಸವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಪ್ರಜ್ವಲ್ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. 43 ವರ್ಷದ ಸಮಾಜ ಸೇವಕಿಯೊಬ್ಬರು ಈ ಪ್ರಕರಣದ ಸಾಕ್ಷಿಗಳಲ್ಲೊಬ್ಬರಾಗಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ಬೆಂಬಲಿಗರೆಂದು ಹೇಳಿಕೊಳ್ಳುವವರಿಂದ ತಮಗೆ ಬೆದರಿಕೆ ಕರೆಗಳು ಬಂದಿವೆ ಎಂದು ಸಾಕ್ಷಿಯು ನ್ಯಾಯಾಲಯಕ್ಕೆ ತಿಳಿಸಿದ ನಂತರ ಈ ನಿರ್ದೇಶನ ಹೊರಬಿದ್ದಿದೆ.
ಆರೋಪಿಯ ವಿರುದ್ಧ ಸಾಕ್ಷ್ಯ ನುಡಿಯದಂತೆ ಕರೆ ಮಾಡಿದವರು ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಸಾಕ್ಷ್ಯ ನೀಡಿದರೆ ತಮಗೂ ಹಾಗೂ ತಮ್ಮ ಮಗನಿಗೂ ಪಾಠ ಕಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ತಮಗೆ ಅಥವಾ ತಮ್ಮ ಮಗನಿಗೆ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಪ್ರಜ್ವಲ್ ರೇವಣ್ಣ ಮತ್ತು ಇತರರೇ ನೇರ ಹೊಣೆಗಾರರಾಗುತ್ತಾರೆ ಎಂದೂ ಸಾಕ್ಷಿಯು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಹಾಲಿ ಹಾಗೂ ಮಾಜಿ ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಎಸ್‌ಐಟಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ (ಎಡಿಜಿಪಿ) ನಿರ್ದೇಶನ ನೀಡಿದೆ.