ಡಿ.ಕೆ ಶಿವಕುಮಾರ್ 
ರಾಜ್ಯ

ನಾನು ಕ್ರೈಸ್ತ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದೆ: ಧರ್ಮ ಬದಲಿಸಿಕೊಳ್ಳುವಂತೆ ಅವರು ಎಂದೂ ಒತ್ತಡ ಹೇರಲಿಲ್ಲ; ಸಿಎಂ ಡಿ.ಕೆ.ಶಿವಕುಮಾರ್‌

ಪ್ರಕೃತಿಯ ನಿಯಮದ ಮುಂದೆ ಯಾರೂ ನಿಲ್ಲಲು ಸಾಧ್ಯವಿಲ್ಲ. ನಾವು ಯಾವ ಧರ್ಮ ಜಾತಿಯಲ್ಲಿ ಜನಿಸುತ್ತೇವೆ ಎಂದು ಯಾರು ತಿಳಿದಿರುವುದಿಲ್ಲ. ಯಾವುದೇ ಧರ್ಮ ಇತರೆ ಧರ್ಮದವರಿಗೆ ತೊಂದರೆ ಕೊಡುವುದನ್ನು ಬೋಧಿಸುವುದಿಲ್ಲ

ಬೆಂಗಳೂರು: ಮಾನವೀಯತೆಯಿಂದ ಬದುಕುವ ಜೊತೆಗೆ ಸಮಾನತೆ ಮತ್ತು ಭ್ರಾತೃತ್ವವನ್ನ ನಮ್ಮ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರಿನ ಎಂ ಜಿ ರೈಲ್ವೆ ಕಾಲೋನಿಯ ಅಮಲೋದ್ಭವ ಮಾತೆಯ ದೇವಾಲಯದ 125 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿವಿಧ ಧರ್ಮಗಳ ಆಚರಣೆಗಳು ಭಕ್ತಿಯ ಮನೋಭಾವದಿಂದ ಜನರ ಶಾಂತಿ ನೆಮ್ಮದಿಗಾಗಿ ಹಾಗೂ ಸಮಾಜ ಸೇವೆ ಮತ್ತು ಆತ್ಮಶುದ್ಧಿಗಾಗಿ ಆಚರಿಸಲಾಗುತ್ತದೆ. ಧರ್ಮಗಳು ಹಲವಾದರೂ, ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು ಎಂಬುದರಲ್ಲಿ ನಂಬಿಕೆಯಿರಿಸಿದವನು ನಾನು ಎಂದು ಹೇಳಿದ್ದಾರೆ.

ಹಿಂದುಗಳು ದೀಪ ಬೆಳಗಿದರೆ, ಕ್ರೈಸ್ತ ಧರ್ಮದಲ್ಲಿ ಮೇಣದ ಬತ್ತಿ ಹಚ್ಚುತ್ತಾರೆ. ಕ್ರೈಸ್ತ ಧರ್ಮ, ಹಿಂದೂ ಧರ್ಮ ಸೇರಿದಂತೆ ವಿವಿಧ ಧರ್ಮಗಳು ತನ್ನದೇ ಆದ ಆಚರಣೆಗಳನ್ನು, ಪೂಜಾವಿಧಾನಗಳನ್ನು ಹೊಂದಿವೆ. ಈ ಚರ್ಚ್ ನಲ್ಲಿರುವಂತೆಯೇ ಹಿಂದೂ ದೇವಾಲಯಗಳಲ್ಲಿ ಧ್ವಜಸ್ತಂಭವಿರುತ್ತದೆ. ಈ ಕಾರ್ಯಕ್ರಮದಲ್ಲಿ ನುಡಿಸಲಾದ ವಾದನದಲ್ಲಿ ಸುಮಧುರ ನಾದ ಹೊಮ್ಮಿದೆ. ಅಂತೆಯೇ ಬಿದಿರಿನ ಕೊಳಲು ವಾದನದಿಂದ ಸುಮಧುರ ನಾದ ಹೊಮ್ಮುತ್ತದೆ. ಅಂತೆಯೇ ಭಗವಾನ್ ಕೃಷ್ಣನ ಶಂಖನಾದಕ್ಕೆ ತನ್ನದೇ ಆದ ಮಹತ್ವವಿದೆ ಎಂದರು.

ಪ್ರಕೃತಿಯ ನಿಯಮದ ಮುಂದೆ ಯಾರೂ ನಿಲ್ಲಲು ಸಾಧ್ಯವಿಲ್ಲ. ನಾವು ಯಾವ ಧರ್ಮ ಜಾತಿಯಲ್ಲಿ ಜನಿಸುತ್ತೇವೆ ಎಂದು ಯಾರು ತಿಳಿದಿರುವುದಿಲ್ಲ. ಯಾವುದೇ ಧರ್ಮ ಇತರೆ ಧರ್ಮದವರಿಗೆ ತೊಂದರೆ ಕೊಡುವುದನ್ನು ಬೋಧಿಸುವುದಿಲ್ಲ. ಕ್ರಿಶ್ಚಿಯನ್ ಧರ್ಮವನ್ನು ಟೀಕಿಸುವವರು, ನಿಮ್ಮದೇ ಧರ್ಮದ ಆಸ್ಪತ್ರೆಗಳು, ಶಾಲಾಕಾಲೇಜುಗಳ ಒಲವು ತೋರುತ್ತಾರೆ. ಟೀಕಿಸುವ ಜನರಿಗೆ ಲಾಭ ದೊರೆಯುವಾಗ ಯಾವ ಧರ್ಮವೂ ಅಡ್ಡಿ ಬರುವುದಿಲ್ಲ. ಮಾನವೀಯತೇ ಪರಮ ಧರ್ಮ ಎಂದು ಭಾವಿಸಿ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡುವುದು ಅಗತ್ಯ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಈ ಹಿಂದೆ ಸುಮನಹಳ್ಳಿ ಕುಷ್ಟರೋಗ ಪುನರ್ವಸತಿ ಕೇಂದ್ರಕ್ಕೆ 50 ಎಕರೆ ಪ್ರದೇಶದ ಗುತ್ತಿಗೆ ನವೀಕರಣಕ್ಕೆ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿತ್ತು. ಈ ಸಂಸ್ಥೆಗೆ ಜಾಗ ಕೊಡುವ ಅವಶ್ಯಕತೆ ಇದೆಯೇ ಎಂದು ಚರ್ಚೆ ಉಂಟಾಗಿತ್ತು. ಈ ಚಿಕಿತ್ಸೆ ನೀಡುವ ಸಂಸ್ಥೆಗೆ ಸ್ಥಳಾವಕಾಶ ನೀಡುವ ಜವಾಬ್ದಾರಿ ತೆಗೆದುಕೊಳ್ಳದ ಸಂದರ್ಭದಲ್ಲಿ ಈ ಧರ್ಮದವರು ಕುಷ್ಟರೋಗಿಗಳ ಚಿಕಿತ್ಸೆಗೆ ನೆರವಾಗಿ ಮಾನವೀಯತೆ ಮೆರೆದಿದ್ದರು. ಈ ಮಾನವೀಯ ಗುಣವನ್ನು ಪರಿಗಣಿಸಿ ಅಂದು ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿತು ಎಂದರು.

ನಾನು ಕೂಡ ಕ್ರೈಸ್ತ ಧರ್ಮದ ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದು, ಎಲ್ಲಿಯೂ ನಮ್ಮ ಧರ್ಮವನ್ನು ಬದಲಿಸಿಕೊಳ್ಳಲು ಒತ್ತಾಯ ಹೇರಲಿಲ್ಲ. ಮರಕ್ಕೆ ಬೇರುಗಳು ಎಷ್ಟು ಮುಖ್ಯವೋ , ಮನುಷ್ಯನಿಗೆ ನಂಬಿಕೆಯೇ ಮುಖ್ಯ. ಪ್ರತಿಯೊಬ್ಬರಿಗೂ ತಮ್ಮದೇ ಆದ ನಂಬಿಕೆಗಳು, ತತ್ವಗಳ ಮೇಲೆ ವಿಶ್ವಾಸವಿದ್ದರೂ, ಪ್ರಕೃತಿಯೊಂದಿಗೆ ಬಾಳುವ ಗುಣವನ್ನು ಬೆಳೆಸಿಕೊಳ್ಳಬೇಕು. ಮಾನವೀಯತೆಯಿಂದ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಬದುಕಬೇಕು. ನಮ್ಮ ಕಲೆ ಮತ್ತು ಸಂಸ್ಕೃತಿಗೆ ಯಾವುದೇ ಜಾತಿಯಿಲ್ಲ. ದೇವರು ಪ್ರತಿಯೊಬ್ಬರ ಹೃದಯದಲ್ಲಿಯೂ ನೆಲೆಸಿದ್ದಾನೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoorನಲ್ಲಿ ಧ್ವಂಸವಾಗಿದ್ದ ಜೈಶ್ ನೆಲೆ ಮರುನಿರ್ಮಾಣ! ಪಾಕ್‌ ಸರ್ಕಾರದಿಂದ 25 ಕೋಟಿ ನೆರವು!

Onion Price: ದಿಢೀರ್ ಈರುಳ್ಳಿ ಬೆಲೆ ಏರಿಕೆ; ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮತ್ತಷ್ಟು ದುಬಾರಿ ಸಾಧ್ಯತೆ, ದರ ಏರಿಕೆಗೆ ಕಾರಣವೇನು?

ಮಹಿಳಾ ಮೀಸಲಾತಿ ಮಸೂದೆ ಬೆಂಬಲಿಸಿ, ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಪೂರ್ತಿಯಾಗಿ ಹಾಡಿ ತೋರಿಸಿ: ರಾಹುಲ್ ಗಾಂಧಿಗೆ ಸ್ಮೃತಿ ಇರಾನಿ ಸವಾಲು

ಮದ್ಯ ಸಾಗಣೆ ಹಗರಣ: ಆಂಧ್ರಪ್ರದೇಶದ ಮಾಜಿ ಸಚಿವರ ಬಂಧಿಸಿದ ED

'3 ರಾಷ್ಟ್ರಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ': SIR ಪಟ್ಟಿಯಲ್ಲಿ ಹೆಸರು ನಾಪತ್ತೆ ಬಗ್ಗೆ ಮಾಜಿ ರಾಯಭಾರಿ ಅಸಮಾಧಾನ!