ಬೆಂಗಳೂರು: ಗುಂಪು ಹಲ್ಲೆ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಅಥವಾ ಅವರ ಹತ್ತಿರದ ಸಂಬಂಧಿಗಳಿಗೆ ಮೂರು ತಿಂಗಳೊಳಗೆ ಮಧ್ಯಂತರ ಪರಿಹಾರವನ್ನು ನೀಡುವ ಯೋಜನೆಯನ್ನು ರೂಪಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ತೆಹ್ಸೀನ್ ಎಸ್ ಪೊನ್ನವಲ್ಲ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಗುಂಪು ಹಲ್ಲೆ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯಗಳು ಅನುಸರಿಸಬೇಕಾದ ಕಾರ್ಯವಿಧಾನ ಮತ್ತು ಮಾರ್ಗಸೂಚಿಗಳನ್ನು ಪುನರುಚ್ಚರಿಸಿದೆ.
ಮಂಗಳೂರು ಗುಂಪು ಹತ್ಯೆ ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮತ್ತು ಮೃತ ಅಶ್ರಫ್ ಸಹೋದರ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ಹೈಕೋರ್ಟ್, ಗುಂಪು ಹಲ್ಲೆ ಮತ್ತು ಹತ್ಯೆಯಲ್ಲಿ ಸಾವನ್ನಪ್ಪಿದವರ ಕುಟುಂಬದವರಿಗೆ ಪರಿಹಾರದ ನೀಡುವ ಸಂಬಂಧ ಸುಪ್ರೀಂಕೋರ್ಟ್ ಮಾರ್ಗಸೂಚಿಯಂತೆ ಮೂರು ತಿಂಗಳಲ್ಲಿ ಯೋಜನೆ ರೂಪಿಸುವಂತೆ ನಿರ್ದೇಶಿಸಿದೆ.
ರಾಜ್ಯ ಸರ್ಕಾರ ಮತ್ತು ಮೃತನ ಸಹೋದರ ಅಬ್ದುಲ್ ಜಬ್ಬಾರ್ ಸಲ್ಲಿಸಿದ್ದ ಅರ್ಜಿಗಳನ್ನು ಆಲಿಸಿದ ನ್ಯಾಯಮೂರ್ತಿ ವಿಜಯಕುಮಾರ್ ಎ.ಪಾಟೀಲ್ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ. ಆದೇಶದ ಸಂಬಂಧ ಅನುಪಾಲನಾ ವರದಿ ಸಲ್ಲಿಸಲು ಆದೇಶಿಸಿದೆ.
ಅಲ್ಲದೇ, ಪ್ರಕರಣದಲ್ಲಿ ಈಗಾಗಲೇ ಆರೋಪಪಟ್ಟಿ ಸಲ್ಲಿಕೆಯಾಗಿರುವುದರಿಂದ ಆರೋಪಿಗಳನ್ನು ವಶಕ್ಕೆ ಪಡೆಯುವ ಅಗತ್ಯವಿಲ್ಲ ಎಂಬ ಆಧಾರದಲ್ಲಿ ಜಾಮೀನು ರದ್ದುಪಡಿಸಲು ಸಾಧ್ಯವಿಲ್ಲ. ಜೊತೆಗೆ, ಈ ಹಂತದಲ್ಲಿ ಜಾಮೀನು ಅರ್ಜಿ ವಜಾಗೊಳಿಸಿ ಹೊಸದಾಗಿ ಅವುಗಳನ್ನು ಪರಿಗಣಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಆದೇಶಿಸುವುದರಿಂದ ವಿಚಾರಣೆ ವಿಳಂಬವಾಗುತ್ತದೆ.
ಅಲ್ಲದೇ, ಗುಂಪು ಹತ್ಯೆ ಪ್ರಕರಣಗಳನ್ನು ನಿಗದಿತ ಕಾಲಮಿತಿಯಲ್ಲಿ ಇತ್ಯರ್ಥಪಡಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಹಾಗಾಗಿ ಈ ಅರ್ಜಿಗಳನ್ನು ತಿರಸ್ಕರಿಸಲಾಗದು ಎಂದು ಪೀಠ ಹೇಳಿದೆ. ಇಂತಹ ಗುಂಪು ಕೃತ್ಯಗಳನ್ನು ತಡೆಯಲು, ಹತ್ತಿಕ್ಕಲು ವಿಫಲವಾಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಈ ಆದೇಶವನ್ನು ಪಾಲಿಸಲು ಆದೇಶದ ಪ್ರತಿಯನ್ನು ಎಲ್ಲ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯಗಳಿಗೆ ಕಳುಹಿಸಿಕೊಡಬೇಕು ಮತ್ತು ಸಂತ್ರಸ್ತರನ್ನು ಪ್ರಕರಣದಲ್ಲಿ ಪಾರ್ಟಿಗಳನ್ನಾಗಿ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಮಂಗಳೂರು ತಾಲೂಕಿನ ಕುಡುಪು ಗ್ರಾಮದ ಭಟ್ರ ಕಲ್ಲುರ್ಟಿ ದೇವಸ್ಥಾನದ ಹಿಂಬದಿಯಲ್ಲಿರುವ ಮೈದಾನದಲ್ಲಿ 2025ರ ಏ.27ರಂದು ಕ್ರಿಕೆಟ್ ಪಂದ್ಯ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಚಿಂದಿ ಆಯುವ ಮೊಹಮ್ಮದ್ ಅಶ್ರಫ್ ‘ಪಾಕಿಸ್ತಾನ್ ಪಾಕಿಸ್ತಾನ್’ ಎಂದು ಜೋರಾಗಿ ಕೂಗುತ್ತಾ ಬರುತ್ತಿದ್ದರು ಎಂದು ಆರೋಪಿಸಿ ಕ್ರಿಕೆಟ್ ಆಡಲು ಮತ್ತು ಅದನ್ನು ನೋಡಲು ಬಂದಿದ್ದವರು ಏಕಾಏಕಿ ಹಲ್ಲೆ ನಡೆಸಿ ಗಾಯಗೊಳಿಸಿ ಸಾವಿಗೆ ಕಾರಣರಾಗಿದ್ದರು. ಈ ಸಂಬಂಧ 2025ರ ಏ.28ರಂದು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಬಿಎನ್ಎಸ್ ವಿವಿಧ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಸಚಿನ್, ದೀಕ್ಷಿತ್, ಮಂಜುನಾಥ್, ಸಾಯಿದೀಪ್, ಸಂತೋಷ್, ದೇಜುಯಾನೆ ದೇವದಾಸ್, ಅನಿಲ್ ಕುಡುಪು, ಧನುಷ್ ಕುಡುಪು ಕಟ್ಟೆ, ನಿತೇಶ್, ಶ್ರೀದತ್ತ ಸೇರಿ 20 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. ಅವರಲ್ಲಿ ಬಹುತೇಕರು ಜಾಮೀನು ಪಡೆದು ಹೊರಬಂದಿದ್ದರು. ಇದನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ, ಜಾಮೀನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದರು.