ಬೆಂಗಳೂರು: ಕೆಪಿಎಸ್ಸಿಯಿಂದ ಪಶು ವೈದ್ಯಾಧಿಕಾರಿಗಳ ನೇಮಕದಲ್ಲಿ ಹಗರಣ (KPSC Scam) ಪ್ರಕರಣದ ಸಂಬಂಧ ಸಿಐಡಿ ಕೆಪಿಎಸ್ಸಿ ಕಚೇರಿ ಮೇಲೆ ದಾಳಿ ಮಾಡಿ ಇದೀಗ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರನ್ನು ವಶಕ್ಕೆ ಪಡೆದುಕೊಂಡಿದೆ.
ಜಾರಿ ನಿರ್ದೇಶನಾಲಯ ಈ ಹಿಂದೆ ಕೆಪಿಎಎಸ್ ಮಾಜಿ ಅಧ್ಯಕ್ಷ, ಸದಸ್ಯರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿತ್ತು. ಈಗ ಪಶು ವೈದ್ಯಾಧಿಕಾರಿಗಳ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್ ಅವರನ್ನ ಸಿಐಡಿ ಅಧಿಕಾರಿಗಳು ಸುದೀರ್ಘ ವಿಚಾರಣೆ ನಡೆಸಿದ್ದು, ಎರಡು ದಿನಗಳ ಬಳಿಕ ಅವರನ್ನ ವಶಕ್ಕೆ ಪಡೆದಿದೆ.
ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಪ್ರಶ್ನೆಪತ್ರಿಕೆ ಸೋರಿಕೆ, ಅಂಕ ತಿದ್ದುಪಡಿ ಹಾಗೂ ನೇಮಕಾತಿಯಲ್ಲಿನ ಅಕ್ರಮಗಳ ಕುರಿತಂತೆ ಸಿಐಡಿ ವಿಶೇಷ ತನಿಖಾ ತಂಡ ತೀವ್ರ ತನಿಖೆ ನಡೆಸುತ್ತಿದೆ. ಪ್ರಕರಣದ ತನಿಖೆಯ ಭಾಗವಾಗಿ ಸಿಐಡಿ ಅಧಿಕಾರಿಗಳು ನಿನ್ನೆ (ಆ.28) ಸತತ 11 ಗಂಟೆಗಳ ಕಾಲ ಜ್ಞಾನೇಂದ್ರ ಕುಮಾರ್ ಅವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದರು. ತನಿಖಾ ಪ್ರಕ್ರಿಯೆಗೆ ಸರಿಯಾಗಿ ಸ್ಪಂದಿಸದ ಕಾರಣ ಅಂತಿಮವಾಗಿ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಹೆಚ್ಚಿನ ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆಯಲು ಸಿಐಡಿ ಸಿದ್ಧತೆ ನಡೆಸಿದೆ.