ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ಪ್ರೀತಿಯ ತಾಯಿ, ದಿವಂಗತ ಸರೋಜಾ ಸಂಜೀವ ಅವರ ಸ್ಮರಣಾರ್ಥವಾಗಿ ಸಂಕಷ್ಟದಲ್ಲಿರುವ ನಾಲ್ಕು ಕುಟುಂಬಗಳಿಗೆ ನೆರವಾಗಿದ್ದಾರೆ.
ಕಿಚ್ಚ ಸುದೀಪ್ ಅವರು ತಮ್ಮ ತಾಯಿಯ ನೆನಪಿನಲ್ಲಿ ಆಡಂಬರದ ಸಮಾರಂಭಗಳನ್ನು ಆಯೋಜಿಸುವ ಬದಲು, ಆರ್ಥಿಕವಾಗಿ ಹಿಂದುಳಿದ ನಾಲ್ಕು ಕುಟುಂಬಗಳಿಗೆ ಆಟೋರಿಕ್ಷಾಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಮೂಲಕ ಅವರ ಸ್ವಾವಲಂಬಿ ಜೀವನಕ್ಕೆ ಶಾಶ್ವತ ಆಸರೆಯಾಗಿದ್ದಾರೆ.
ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಹಾಗೂ ಪತ್ನಿ ಪ್ರಿಯಾ ಸುದೀಪ್ ಅವರು ಆಯಾ ಫಲಾನುಭವಿಗನ್ನು ಭೇಟಿಯಾಗಿ ಆಟೋ ನೀಡಿದ್ದಾರೆ.
2017 ರಲ್ಲಿ ಪತಿಯನ್ನು ಕಳೆದುಕೊಂಡ ಪವಿತ್ರಾ ಅವರು ತಮ್ಮ ಇಬ್ಬರು ಮಕ್ಕಳನ್ನು ಸ್ವಂತವಾಗಿ ಸಾಕುತ್ತಿದ್ದಾರೆ. ಅವರ ಮಗಳು 10ನೇ ತರಗತಿಯಲ್ಲಿ ಓದುತ್ತಿದ್ದು, ನಾಲ್ಕು ವರ್ಷದ ಮಗನಿದ್ದಾನೆ. ಅವರಿಗೆ ಸ್ಥಿರ ಆದಾಯವಿಲ್ಲದೆ ಕುಟುಂಬದ ಖರ್ಚುಗಳನ್ನು ನಿರ್ವಹಿಸುವುದು ದೊಡ್ಡ ಸವಾಲಾಗಿತ್ತು. ಇದನ್ನು ಅರಿತ ಸುದೀಪ್, ಆಟೋರಿಕ್ಷಾವನ್ನು ಕೊಡುಗೆಯಾಗಿ ನೀಡಿದ್ದಾರೆ.
ಇನ್ನು ಹುಬ್ಬಳ್ಳಿಯ ಮೃತ್ಯುಂಜಯ ಅವರಿಗೂ ಸುದೀಪ್, ಆಟೋ ನೀಡಿದ್ದು, ಇವರು ನಟ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿದ್ದಾರೆ. ಅಲ್ಲದೆ ಹಲವಾರು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಮೃತ್ಯುಂಜಯ ಹುಬ್ಬಳ್ಳಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಜನಪರ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನ ಸಂಘಟಿಸಿದವರು. ಆದರೆ, ಇತ್ತೀಚಿನ ದಿನಗಳಲ್ಲಿ ಇವರ ಕುಟುಂಬ ತೀವ್ರ ಆರ್ಥಿಕ ಇಕ್ಕಟ್ಟಿಗೆ ಸಿಲುಕಿತ್ತು. ಕಷ್ಟದಲ್ಲಿದ್ದ ಅಭಿಮಾನಿಯ ಸ್ಥಿತಿಗೆ ತಕ್ಷಣ ಸ್ಪಂದಿಸಿದ ಕಿಚ್ಚ ಸುದೀಪ್, ಸ್ವಂತ ಆಟೋ ನೀಡಿ ಅವರ ಕುಟುಂಬವನ್ನ ಕೈಹಿಡಿದು ನಡೆಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ದೀರ್ಘಕಾಲದಿಂದ ಸಾಹಸ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಬಸವರಾಜ್ ಅವರನ್ನು ನಟ ಸುದೀಪ್ ಅವರೇ ಸ್ವತಃ ಈ ನೆರವಿಗಾಗಿ ಆಯ್ಕೆ ಮಾಡಿದ್ದಾರೆ. 900ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿರುವ ಇವರು ಸುದೀಪ್ ಅವರೊಂದಿಗೂ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇಷ್ಟೆಲ್ಲಾ ಅನುಭವವಿದ್ದರೂ ಪ್ರಸ್ತುತ ಯಾವುದೇ ಸ್ಥಿರ ಕೆಲಸವಿಲ್ಲದೆ ದೈನಂದಿನ ಜೀವನಕ್ಕೆ ಪರದಾಡುತ್ತಿದ್ದ ಬಸವರಾಜ್ ಅವರಿಗೆ ಈ ಆಟೋ ಬದುಕಿನ ಹೊಸ ದಾರಿದೀಪವಾಗಿದೆ.
ಇನ್ನು ಸುದೀಪ್ ಅವರ ತಾಯಿಯವರಿಗೆ ಆಪ್ತರಾಗಿದ್ದ ಸಾಯಿ ಮಧು ಅವರು ಒಂದು ವರ್ಷದ ಹಿಂದೆ ಮಿದುಳಿನ ಪಾರ್ಶ್ವವಾಯುವಿನಿಂದ ಅಕಾಲಿಕ ನಿಧನ ಹೊಂದಿದ್ರು. ಇವರ ಇಬ್ಬರು ಪುಟ್ಟ ಹೆಣ್ಣುಮಕ್ಕಳನ್ನ ಪಾಲಿಸಲು ಮಗನನ್ನ ಕಳೆದುಕೊಂಡ ವೃದ್ಧ ತಂದೆ ಬಾಡಿಗೆ ಆಟೋ ಓಡಿಸುತ್ತಿದ್ದರು. ಈ ಕುಟುಂಬದ ಕಣ್ಣೀರ ಕಥೆ ಅರಿತ ಸುದೀಪ್, ಸ್ವಂತ ಆಟೋ ನೀಡಿ ವೃದ್ಧ ತಂದೆಯ ಹೆಗಲ ಮೇಲಿದ್ದ ದೊಡ್ಡ ಹೊರೆಯನ್ನ ಹಗುರಗೊಳಿಸಿದ್ದಾರೆ.