ಬೆಂಗಳೂರು: ರಾಜ್ಯಾದ್ಯಂತ 1.26 ಕೋಟಿ ಫಲಾನುಭವಿಗಳಲ್ಲಿ 52,000 ಕ್ಕೂ ಹೆಚ್ಚು ಮಹಿಳೆಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ತೆಗೆದುಹಾಕಲಾಗಿದೆ. ಗೃಹಲಕ್ಷ್ಮಿ ಯೋಜನೆಗೆ ನೋಂದಣಿಯಾದರೂ 52 ಸಾವಿರ ಮಹಿಳೆಯರಿಗೆ ಹಣ ಜಮೆ ಆಗುತ್ತಿರಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಮಸ್ಯೆಯ ಮೂಲ ಯಾವುದು ಎಂದು ತಿಳಿಸಿದ್ದಾರೆ.
ವಿಶೇಷ ಅಧಿವೇಶನದ ವಿಧಾನ ಪರಿಷತ್ ಕಲಾಪದಲ್ಲಿ ಸದಸ್ಯರಾದ ಪಿಎಚ್ ಪೂಜಾರ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಕಟ್ಟುತ್ತಿದ್ದಾರೆ ಎಂದು ಸುಮಾರು 52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುತ್ತಿಲ್ಲ. ಈ ಪೈಕಿ ಸುಮಾರು 20 ಸಾವಿರ ಫಲಾನುಭವಿಗಳ ಸಮಸ್ಯೆಯನ್ನು ಇತ್ಯರ್ಥ ಪಡಿಸಲಾಗಿದ್ದು, ಇನ್ನು ಉಳಿದವರ ಸಮಸ್ಯೆಯನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಇಲಾಖೆಗಳ ದಾಖಲೆಯಲ್ಲೂ ಇದೇ ರೀತಿ ತೋರಿಸುತ್ತಿದ್ದು, ಇದರಿಂದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದು, ಸರ್ಕಾರದ ಹಾಗೂ ನಮ್ಮ ಇಲಾಖೆಯದ್ದು ಯಾವುದೇ ತಪ್ಪಿಲ್ಲ ಎಂದರು. ರಾಜ್ಯದಲ್ಲಿ ಸುಮಾರು 1.26 ಕೋಟಿ ಫಲಾನುಭವಿಗಳಿದ್ದು, ಕೆಲ ಫಲಾನುಭವಿಗಳು ಕೆಲವೊಂದು ವ್ಯವಹಾರ ನಡೆಸುವಾಗ ಜಿಎಸ್‌ಟಿ, ಆದಾಯ ತೆರಿಗೆ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ.
ಗೃಹಲಕ್ಷ್ಮಿಗಾಗಿಯೇ ನಿರ್ಮಿಸಲಾಗಿರುವ ಸಾಫ್ಟ್ ವೇರ್‌ನಲ್ಲಿ ಜಿಎಸ್‌ಟಿ, ಆದಾಯ ತೆರಿಗೆ ಅಂತ ತೋರಿಸಿದರೆ ಬದಲಾವಣೆ ಮಾಡಲು ಸಾಧ್ಯವಿಲ್ಲ. ಗೃಹಲಕ್ಷ್ಮಿ ಯೋಜನೆ ನಿರಂತರ ಪ್ರಕ್ರಿಯೆ, ಈಗಾಗಲೇ ಆದಾಯ ತೆರಿಗೆ ಜಿಎಸ್‌ಟಿ ಕೌನ್ಸಿಲ್ ಗಮನಕ್ಕೂ ತರಲಾಗಿದೆ " ಎಂದರು.
ಬಾಗಲಕೋಟೆ ಜಿಲ್ಲೆಯ 712 ಮಹಿಳೆಯರನ್ನು ತೆರಿಗೆದಾರರು ಎಂದು ಉಲ್ಲೇಖಿಸಿ ಯೋಜನೆಯಿಂದ ತೆಗೆದುಹಾಕಲಾಗಿದೆ ಎಂದು ಬಿಜೆಪಿ ಎಂಎಲ್ಸಿ ಪಿಎಚ್ ಪೂಜಾರ್ ದೂರಿದ್ದರು. ಅವರು ಬೇರೆ ರೀತಿಯಲ್ಲಿ ಸಾಬೀತುಪಡಿಸಲು ದಾಖಲೆಗಳನ್ನು ಒದಗಿಸಿದರೂ, ಅವರನ್ನು ಯೋಜನೆಯಡಿ ಮತ್ತೆ ಸೇರಿಸಲಾಗಿಲ್ಲ ಎಂದು ಅವರು ಹೇಳಿದರು.
ಈ ಯೋಜನೆಯನ್ನು ಬಿಪಿಎಲ್, ಎಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ಗಳನ್ನು ಹೊಂದಿರುವ ಮಹಿಳೆಯರಿಗೆ ಮಾತ್ರ ವಿಸ್ತರಿಸಲಾಗುವುದು ಎಂದು ಸರ್ಕಾರ ಹೇಳಿತ್ತು, ಆದರೆ ಜಿಎಸ್‌ಟಿ ಮತ್ತು ಐಟಿ ಪಾವತಿದಾರರಿಗೆ ಅಲ್ಲ.
ಮಹಿಳೆಯರು ತಿಳಿದೋ ತಿಳಿಯದೆಯೋ ಏನಾದರೂ ವ್ಯವಹಾರ ಮಾಡುವ ಉದ್ದೇಶದಿಂದ ಅಥವಾ ಬೇರೆ ಯಾವುದೋ ಕಾರಣಕ್ಕಾಗಿ ಜಿಎಸ್‌ಟಿಗೆ ನೋಂದಾಯಿಸಿಕೊಳ್ಳುತ್ತಿದ್ದರು. ಕೆಲವರು ಆದಾಯ ತೆರಿಗೆಯನ್ನು ಸಹ ಪಾವತಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ತಮ್ಮ ಇಲಾಖೆಯು ಐಟಿ ಮತ್ತು ಜಿಎಸ್‌ಟಿ ಇಲಾಖೆಗಳಿಗೆ ಹಲವು ಪತ್ರಗಳನ್ನು ಬರೆದಿದ್ದು, ತೆರಿಗೆ ಪಾವತಿಸದವರನ್ನೂ ಅವರ ಡೇಟಾಬೇಸ್‌ಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದರು. ಯೋಜನೆಯಿಂದ ತೆಗೆದುಹಾಕಲಾದ 52,000 ಮಹಿಳೆಯರಲ್ಲಿ, 20,000 ಮಹಿಳೆಯರು ತೆರಿಗೆದಾರರಲ್ಲ ಎಂದು ಕಂಡುಕೊಂಡ ನಂತರ ಅವರನ್ನು ಮತ್ತೆ ಸೇರಿಸಲಾಗಿದೆ ಎಂದು ಅವರು ಹೇಳಿದರು. ಈಗಲೂ ಸಹ, ಅರ್ಹ ಮಹಿಳೆಯರು ಈ ಯೋಜನೆಗೆ ದಾಖಲಾಗಬಹುದು ಎಂದು ಅವರು ಹೇಳಿದರು. ಪೂಜಾರ್ ಅವರ ದೂರನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.