ಮೈಸೂರು: ಜಿಲ್ಲೆಯ ಪೆಟ್ರೋಲ್ ಬಂಕ್ ಒಂದರ ಇಬ್ಬರು ಉದ್ಯೋಗಿಗಳ ಮೇಲೆ ಶಸ್ತ್ರಸಜ್ಜಿತ ದರೋಡೆಕೋರರ ತಂಡವೊಂದು ಹಲ್ಲೆ ನಡೆಸಿ, ಕಚೇರಿಯಿಂದ ₹15,300 ದೋಚಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಹುಣಸೂರು ತಾಲ್ಲೂಕಿನ ಕರಿಮುದ್ದನಹಳ್ಳಿ ಗ್ರಾಮದ ಸ್ವಾಮಿ ಸರ್ವಿಸ್ ಎಂಬ ಪೆಟ್ರೋಲ್ ಬಂಕ್‌ನಲ್ಲಿ ಫೆಬ್ರುವರಿ 12ರ ರಾತ್ರಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಪೆಟ್ರೋಲ್ ಬಂಕ್‌ನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಹಲ್ಲೆಯ ದೃಶ್ಯಗಳು ಸೆರೆಯಾಗಿದ್ದು, ಆರೋಪಿಗಳು ಕ್ಯಾಷಿಯರ್ ಜೊತೆ ಜಗಳವಾಡುತ್ತಿರುವ ದೃಶ್ಯಗಳು ಸೆರೆಯಾಗಿವೆ. ಈ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ.
ಎಫ್‌ಐಆರ್ ಪ್ರಕಾರ, ಕಳೆದ ನಾಲ್ಕು ವರ್ಷಗಳಿಂದ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿರುವ ಅಜಯ್ ಕುಮಾರ್ ಎಂದು ಗುರುತಿಸಲಾದ ಕ್ಯಾಷಿಯರ್, ಫೆಬ್ರುವರಿ 12 ರಂದು ರಾತ್ರಿ 9.49ರ ಸುಮಾರಿಗೆ 20 ವರ್ಷದ ಯುವಕನೊಬ್ಬ ಬಾಟಲಿಗೆ ನೀರು ತುಂಬಿಕೊಳ್ಳುವ ನೆಪದಲ್ಲಿ ಮೊದಲು ಬಂಕ್‌ಗೆ ಬಂದರು. ಸ್ವಲ್ಪ ಸಮಯದ ನಂತರ ಅವರು ಹಿಂತಿರುಗಿ ಡೀಸೆಲ್ ಬಗ್ಗೆ ವಿಚಾರಿಸಿದರು ಎಂದು ಆರೋಪಿಸಿದ್ದಾರೆ.
ರಾತ್ರಿ ವೇಳೆಯಲ್ಲಿ ಪೆಟ್ರೋಲ್ ಬಂಕ್ ಮುಚ್ಚಲ್ಪಟ್ಟಿರುತ್ತದೆ. ಆದರೆ, ಮೊದಲೇ ತುಂಬಿಟ್ಟಿದ್ದ ಐದು ಲೀಟರ್ ಡೀಸೆಲ್ ಕ್ಯಾನ್‌ಗಳು ಲಭ್ಯವಿದೆ ಎಂದು ಅಜಯ್ ಕುಮಾರ್ ಅವರಿಗೆ ತಿಳಿಸಿದ್ದಾರೆ.
ಆ ವ್ಯಕ್ತಿ ಬಂಕ್‌ನ ಪೇಟಿಎಂ ಸ್ಕ್ಯಾನರ್‌ನ ಪೋಟೊ ತೆಗೆದುಕೊಂಡು, ತನ್ನ ಸ್ನೇಹಿತರು ಹಣವನ್ನು ವರ್ಗಾಯಿಸುತ್ತಾರೆ ಮತ್ತು ಡೀಸೆಲ್ ತೆಗೆದುಕೊಳ್ಳಲು ಬರುತ್ತೇನೆ ಎಂದು ಹೇಳಿ ಹೊರಟು ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
'ಬಳಿಕ ರಾತ್ರಿ 10.22ರ ಸುಮಾರಿಗೆ, ಅದೇ ವ್ಯಕ್ತಿ ಇತರ ನಾಲ್ವರೊಂದಿಗೆ ಕಾರಿನಲ್ಲಿ ಬಂದು ಡೀಸೆಲ್ ಕೇಳುತ್ತಿರುವಂತೆ ನಟಿಸಿದನು. ರಾತ್ರಿ 10.33ರ ಸುಮಾರಿಗೆ, ಐವರೂ ಡ್ಯಾಗರ್ ಮತ್ತು ಮಚ್ಚು ಹಿಡಿದು ಕಚೇರಿಗೆ ನುಗ್ಗಿ, ಕ್ಯಾಷಿಯರ್ ಮತ್ತು ಇನ್ನೊಬ್ಬ ಸಿಬ್ಬಂದಿ ದಿನೇಶ್ ಮೇಲೆ ಹಲ್ಲೆ ನಡೆಸಿ, ಹಣಕ್ಕಾಗಿ ಬೇಡಿಕೆ ಇಟ್ಟರು. ಗಲಾಟೆ ಸಮಯದಲ್ಲಿ, ಆರೋಪಿಗಳಲ್ಲಿ ಒಬ್ಬ ಕ್ಯಾಷಿಯರ್ ಜೇಬಿನಿಂದ ಬಲವಂತವಾಗಿ ₹15,300 ಗಳನ್ನು ಕಸಿದುಕೊಂಡಿದ್ದಾನೆ' ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಬಳಿಕ ದೂರುದಾರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಆರೋಪಿಗಳು ಕಚೇರಿಯಲ್ಲಿ ಒಂದು ಮಚ್ಚನ್ನು ಬಿಟ್ಟು, ತರಾತುರಿಯಲ್ಲಿ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಕ್ಯಾಷಿಯರ್ ಎಡ ಭುಜ ಮತ್ತು ಬೆನ್ನಿಗೆ ಗಾಯಗಳಾಗಿದ್ದರೆ, ದಿನೇಶ್ ಹಣೆ ಮತ್ತು ಬಲ ಕಿವಿಗೆ ಗಾಯಗಳಾಗಿವೆ. ನಂತರ, ಇಬ್ಬರೂ ಹತ್ತಿರದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾಗಿ ತಿಳಿಸಿದ್ದಾರೆ.
ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 310 (2) (ದರೋಡೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲು ಶೋಧ ನಡೆಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.