ಬೆಂಗಳೂರು: ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ 112 ಹೊಯ್ಸಳ ಸಿಬ್ಬಂದಿ ಬೆಳ್ಳಂದೂರು ಕೆರೆಯ ಬಳಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯೊಬ್ಬರನ್ನು ರಕ್ಷಣೆ ಮಾಡಿದ್ದಾರೆ.
ಬುಧವಾರ ರಾತ್ರಿ 9.30ರ ಸುಮಾರಿಗೆ ಮಹಿಳೆಯೊಬ್ಬರು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ 112 ಕ್ಕೆ ಕರೆ ಮಾಡಿದ್ದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅಧಿಕಾರಿಗಳು ಆಕೆಗೆ ಕರೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬಳಿಕ ಹೊಯ್ಸಳ ಸಿಬ್ಬಂದಿ ಎಎಸ್ಐ ಚಂದ್ರಶೇಖರ್ ಮತ್ತು ಕರ್ತವ್ಯದಲ್ಲಿದ್ದ ಪಿಸಿ ಲಾಲ್ ಸಾಬ್ ಫೋನ್ ಲೊಕೇಶನ್ ಅನ್ನು ಪತ್ತೆ ಮಾಡಿ. 21 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿದ್ದಾರೆ.
ಈ ವೇಳೆ ಬೆಳ್ಳಂದೂರು ಕರೆ ಸಮೀಪ ತಡಕಾಡಿದಾಗ ಮಹಿಳೆ ಆತ್ಮಹತ್ಯೆಗೆ ಸಿದ್ಧವಾಗಿರುವುದು ಪತ್ತೆಯಾಗಿದೆ. ಕೂಡಲೇ ಆಕೆಯನ್ನು ರಕ್ಷಣೆ ಮಾಡಿದ್ದಾರೆ.
ಬಳಿಕ ಮಹಿಳೆಗೆ ಕೌನ್ಸೆಲಿಂಗ್ ನೀಡಿ, ಆಕೆಯ ಮಾನಸಿಕ ಸ್ಥಿತಿಯನ್ನು ಸ್ಥಿರಗೊಳಿಸಿ, ಹೆಚ್ಚಿನ ಸಹಾಯಕ್ಕಾಗಿ ಬೆಳ್ಳಂದೂರು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಸರಿಯಾದ ಮಾರ್ಗದರ್ಶನ ನೀಡಿದ ನಂತರ, ಆಕೆಯನ್ನು ಸುರಕ್ಷಿತವಾಗಿ ಆಕೆಯ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.