ಶಿವಾಜಿ ಜಯಂತಿ ವೇಳೆ ರಾಜ್ಯದ ಕೆಲವು ಕಡೆಗಳಲ್ಲಿ ಅಶಾಂತಿ ಉಂಟಾಗಿದೆ. ಬಾಗಲಕೋಟೆಯಲ್ಲಿ ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಕಲಬುರಗಿಯಲ್ಲಿ ಎರಡು ಕೋಮಿನ ನಡುವೆ ಗಲಾಟೆ
ಛತ್ರಪತಿ ಶಿವಾಜಿ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಕಲಬುರಗಿಯಲ್ಲಿ ಎರಡು ಕೋಮಿನ ಜನರ ನಡುವೆ ಗಲಾಟೆ ನಡೆದಿದೆ. ಚಿತ್ತಾಪೂರ ತಾಲೂಕಿನ ರಾವೂರ ಗ್ರಾಮದಲ್ಲಿ ನಡೆದ ಘಟನೆ ನಡೆದಿದ್ದು, ನಿನ್ನೆ ಸಂಜೆ ಛತ್ರಪತಿ ಶಿವಾಜಿ ಜಯಂತಿ ಹಿನ್ನೆಲೆ ಯುವಕರಿಂದ ಶಿವಾಜಿ ಭಾವಚಿತ್ರ ಮೆರವಣಿಗೆ ಮಾಡಲಾಗಿತ್ತು. ಈ ವೇಳೆ ನಡೆದ ಗಲಾಟೆಯಲ್ಲಿ ಮೂರು ನಾಲ್ಕು ಜನರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಸಿ
ಬೆಳಗಾವಿ ಸಮೀಪದ ಮಚ್ಚೆ ಗ್ರಾಮದಲ್ಲಿರುವ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಕಿಡಿಗೇಡಿಗಳು ಮಸಿ ಬಳಿದಿದ್ದಾರೆ. ಇದರಿಂದ ಸ್ಥಳದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ರಾಯಣ್ಣ ಮೂರ್ತಿಗೆ ಕಪ್ಪು ಬಣ್ಣವಿದ್ದ ಕಾರಣ ಕರಿ ಮಸಿ ಸುರಿದಿದ್ದು ಯಾರಿಗೂ ತಿಳಿದಿರಲಿಲ್ಲ. ರಾತ್ರಿ ಗ್ರಾಮದ ಕೆಲವು ಯುವಕರ ಗಮನಕ್ಕೆ ಬಂದಿದೆ. ಇದಾದ ಬಳಿಕ ಯುಕವರು ಘೋಷಣೆ ಕೂಗಿದರು. ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
ಕಾಂಗ್ರೆಸ್ ಸರ್ಕಾರ ಇದ್ದಾಗ ಯಾಕೆ ಹೀಗೆ ಆಗತ್ತೆ?
ರಾಯಚೂರಿನ ಲಿಂಗಸುಗೂರಿನ ಹಟ್ಟಿ ಪಟ್ಟಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ʼಬಾಗಲಕೋಟೆಯಲ್ಲಿ ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣ ವಿಚಾರವಾಗಿ 8 ಜನರನ್ನ ಬಂಧಿಸಿದ್ದೇವೆ ಅಂತಿದ್ದಾರೆ, ಆದ್ರೆ ನನ್ನ ಪ್ರಶ್ನೆ ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ಹೀಗೆ ಯಾಕಾಗುತ್ತೆ? ಬಾಂಬ್ ಹಾಕಿದವರನ್ನ ಬ್ರದರ್ಸ್ ಅಂತೀರಿ, ಗಣೇಶನ ವಿಗ್ರಹಕ್ಕೂ ಮಸೀದಿಯಿಂದ ಕಲ್ಲು ಬಿತ್ತು, ಮಸೀದಿಯಿಂದ ಶಿವಾಜಿ ಮೆರವಣಿಗೆಯಲ್ಲೂ ಕಲ್ಲು ಬೀಳ್ತಿದಾವೆ. ಕಲ್ಲು ಹೊಡೆದವರನ್ನ ಅರೆಸ್ಟ್ ಮಾಡೊದಿಲ್ಲ.
ಅದೇ ಇಲ್ಲೀಗಲ್ ಮಸೀದಿ ಎಂದವರ ಮೇಲೆ ಕೇಸ್ ಹಾಕಿದ್ರಿ. ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ರೆ ಹೀಗೆ ಆಗಲ್ಲ. ಆದ್ರೆ ಕಾಂಗ್ರೆಸ್ ಪೊಲೀಸರ ಮೇಲೆ ಹಿಡಿತ ಇಟ್ಟುಕೊಂಡಿದೆ. ಕಾಂಗ್ರೆಸ್ ನ ತುಷ್ಟಿಕರಣದಿಂದ ಹೀಗೆ ಆಗುತ್ತಿದೆ. ತುಷ್ಟಿಕರಣ ನೀತಿಯಿಂದ ಇಂತಹ ಘಟನೆಗಳು ನಡೆಯುತ್ತವೆ. ಪೊಲೀಸ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿರುವುದಕ್ಕೆ ಇಂತಹ ಘಟನೆ ಆಗುತ್ತಿವೆ. ಶಿವಾಜಿ ಜಯಂತಿ ಸರ್ಕಾರ ಘೋಷಿಸುವ ಕಾರ್ಯಕ್ರಮವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಬೇಕು. ಆರೋಪಿಗಳನ್ನ ಗಡಿಪಾರು ಮಾಡಬೇಕು ಎಂದರು.